17 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ. ಈ ವೇಳೆ ಆಟಗಾರರನ್ನು ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ಕ್ರಿಕೆಟ್ ಸಂಸ್ಥೆಗಳು ಪ್ರತ್ಯೇಕವಾಗಿ ಸನ್ಮಾನಿಸಿದವು. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಸಂಭ್ರಮಾಚರಣೆಯನ್ನು ಕಣ್ಣು ತುಂಬಿಕೊಳ್ಳಲು ಬಂದಿದ್ದ ಆರ್‌ಸಿಬಿ ಅಭಿಮಾನಿಗಳ ಹರ್ಷ, ದುಃಖಕಕ್ಕೆ ಬದಲಾಗಿದೆ. ಆರ್‌ಸಿಬಿ ಸಂಭ್ರಮಾಚರಣೆಯನ್ನು ನೋಡಲು ಬಂದಿದ್ದ ಅಭಿಮಾನಿಗಳ ನಡುವೆ ನೂಕು ನುಗ್ಗಲು ಆಗಿದ್ದು, 11 ಅಮಾಯಕ ಜನರು ಸಾವನ್ನು ಅಪ್ಪಿದ್ದಾರೆ.
ಆರ್‌ಸಿಬಿ ಅಭಿಮಾನಿಗಳು ಈ ದುರಂತದ ನಡುವೆಯೂ ಆರ್‌ಸಿಬಿ ಆಟಗಾರರು ಸಂಭ್ರಮಾಚರಣೆ ನಡೆಸಿದರು. ಈ ಸಂಭ್ರಮಾಚರಣೆಯ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವು ಮುಖಂಡರು, ಗಾಯಳುಗಳನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಆರ್‌ಸಿಬಿ ತನ್ನ ಮೊದಲ ಪ್ರತಿಕ್ರಿಯೆ ನೀಡಿದೆ.

ಆರ್‌ಸಿಬಿ ನೆಚ್ಚಿನ ಆಟಗಾರರನ್ನು ಕಣ್ಣು ತುಂಬಿಕೊಳ್ಳಲು ಚಿನ್ನಸ್ವಾಮಿ ಮೈದಾನದತ್ತ ಆಟಗಾರರ ದಂಡೇ ಆಗಮಿಸಿತ್ತು. ಈ ವೇಳೆ ಈ ದುರುಂತ ನಡೆದಿದೆ. ಈ ದುರಂತದ ಬಗ್ಗೆ ಆರ್‌ಸಿಬಿ ಮ್ಯಾನೇಜ್ಮೆಂಟ್ ಘಟನೆ ನಡೆದ ಹಲವು ಗಂಟೆಗಳ ಬಳಿಕ ಸಾಮಾಜಿಕ ತಾಣದಲ್ಲಿ ತನ್ನ ಸಂತಾಪವನ್ನು ಸೂಚಿಸಿದೆ. ಈ ಘಟನೆ ನಡೆದಿದ್ದು ದುಃಖಕರ. ಚಾಂಪಿಯನ್ ಆಟಗಾರರನ್ನು ನೋಡಲು ದೊಡ್ಡ ಜನ ಸಮೂಹವೇ ಬಂದಿತ್ತು. ಈ ವೇಳೆ ಆಗಬಾರದ ಘಟನೆ ನಡೆದಿದೆ. ಈ ಘಟನೆ ನಡೆದಿದ್ದು ದುರಾದೃಷ್ಟಕರ. ಆರ್‌ಸಿಬಿ ಈ ಘಟನೆಗೆ ತುಂಬಾ ದುಃಖಿತವಾಗಿದೆ. ಪ್ರತಿಯೊಬ್ಬರ ಸುರಕ್ಷತೆ ಹಾಗೂ ಕ್ಷೇಮ ಮುಖ್ಯ. ಕಾಲ್ತುಳಿತದ ಘಟನೆಗೆ ಆರ್‌ಸಿಬಿ ಶೋಕ ವ್ಯಕ್ತಪಡಿಸುತ್ತದೆ. ಘಟನೆಯಲ್ಲಿ ಜೀವ ಕಳೆದುಕೊಂಡ ಸಂತ್ರಸ್ಥರ ಕುಟುಂಬಗಳಿಗೆ ಸಂತಾಪ. ಪರಿಸ್ಥಿತಿ ಅರಿತು ನಾವು ನಮ್ಮ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದವು. ಎಲ್ಲಾ ಅಭಿಮಾನಿಗಳು ಸುರಕ್ಷಿತವಾಗಿರಿ ಎಂದು ಆರ್‌ಸಿಬಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದೆ.
ಈ ದುರ್ಘಟನೆ ಬಗ್ಗೆ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸಹ ಪೋಸ್ಟ್ ಮಾಡಿದ್ದಾರೆ. ಈ ಘಟನೆಯ ಬಗ್ಗೆ ನಾನು ಹೇಳಬೇಕು ಎಂದು ಪದಗಳೇ ಬರುತ್ತಿಲ್ಲ. ಈ ದುರ್ಘಟನೆಯಿಂದ ನಾನು ಕುಗಿದ್ದೇನೆ ಎಂದು ವಿರಾಟ್ ಪೋಸ್ಟ್ ಮಾಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಸಚಿನ್ ತೆಂಡೂಲ್ಕರ್ ಸಹ ಪೋಸ್ಟ್ ಮಾಡಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಘಟನೆ ಅತ್ಯಂತ ದುಃಖಕರ. ಸಂತ್ರಸ್ತ ಕುಟುಂಬಗಳಿಗೆ ನನ್ನ ಸಂತಾಪಗಳು. ಎಲ್ಲರಿಗೂ ಶಾಂತಿ ಸಿಗಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ. . ಈ ಘಟನೆಯ ಬಗ್ಗೆ ಸಚಿನ್ ತೆಂಡೂಲ್ಕರ್ ಮಾತ್ರವಲ್ಲದೆ ಹರ್ಭಜನ್ ಸಿಂಗ್ ಮತ್ತು ಮನೋಜ್ ತಿವಾರಿ ಸಹ ತಮ್ಮ ಸಂತಾಪಗಳನ್ನು ತಿಳಿಸಿದ್ದಾರೆ.