
ಲಂಕಾ ಪ್ರೀಮಿಯರ್ ಲೀಗ್‌ನ ಆರಂಭಿಕ ಆವೃತ್ತಿಯಲ್ಲಿ ವೆಸ್ಟ್ ಇಂಡೀಸ್‌ನ ದಿಗ್ಗಜ ಆಟಗಾರ ಕ್ರಿಸ್ ಗೇಲ್ ಕಣಕ್ಕಿಳಿಯುವುದಿಲ್ಲ. ಕ್ರಿಸ್ ಗೇಲ್ ಅವರನ್ನು ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಕ್ಯಾಂಡಿ ಟಸ್ಕರ್ ಬುಧವಾರ ಈ ಬಗ್ಗೆ ಖಚಿತವಾಗಿ ಹೇಳಿಕೆಯನ್ನು ನೀಡಿದೆ.
ಭಾರತೀಯ ಕ್ರಿಕೆಟಿಗರಾದ ಇರ್ಫಾನ್ ಪಠಾಣ್, ಮುನಾಫ್ ಪಟೇಲ್, ಸ್ಥಳೀಯ ಆಟಗಾರ ಕುಸಲ್ ಪೆರೆರ ಶ್ರೀಲಂಕಾ ಟಿ20 ಸ್ಪೆಸಲಿಸ್ಟ್ ಕುಸಲ್ ಮೆಂಡಿಸ್ ಹಾಗೂ ನುವಾನ್ ಪ್ರದೀಪ್ ಮತ್ತು ಇಂಗ್ಲೆಂಡ್ ವೇಗಿ ಲಿಯಾಮ್ ಪ್ಲಂಕೆಟ್ ಅವರೊಂದಿಗೆ ಕ್ರಿಸ್ ಗೇಲ್ ಕ್ಯಾಂಡಿ ಟಸ್ಕರ್ಸ್ ಪರವಾಗಿ ಕಣಕ್ಕಿಳಿಯಬೇಕಾಗಿತ್ತು.
ಟ್ವಿಟ್ಟರ್‌ನಲ್ಲಿ ಕ್ಯಾಂಡಿ ಟಸ್ಕರ್ಸ್ ಈ ಬಗ್ಗೆ ಖಚಿತ ಪಡಿಸಿ ಟ್ವೀಟ್ ಮಾಡಿದೆ. "ಈ ಬಾರಿಯ ಎಲ್‌ಪಿಎಲ್ ಟಿ20 ಲೀಗ್‌ನಲ್ಲಿ ಕ್ರಿಸ್ ಗೇಲ್ ಆಡುವುದಿಲ್ಲ ಎಂದು ನಾವು ಬೇಸರದಿಂದ ಘೋಷಿಸುತ್ತಿದ್ದೇವೆ" ಎಂದು ಟ್ವೀಟ್‌ನಲ್ಲಿ ತಿಳಿಸಿದೆ.
ಎಲ್‌ಪಿಎಲ್‌ನಲ್ಲಿ ಐದು ಫ್ರಾಂಚೈಸಿಯ ತಂಡಗಳು ಕಣಕ್ಕಿಳಿಯಲಿದೆ. ಕೊಲಂಬೋ, ಕ್ಯಾಂಡಿ, ಗಾಲೆ, ದಾಂಬುಲಾ ಹಾಗೂ ಜಾಫ್ನಾ ತಂಡಗಳು 23 ಪಂದ್ಯಗಳಲ್ಲಿ ಮುಖಾಮುಖಿಯಾಗಲಿದೆ. ನವೆಂಬರ್ 26ರಂದು ಚೊಚ್ಚಲ ಎಲ್‌ಪಿಎಲ್ ಪಂದ್ಯಕ್ಕೆ ಚಾಲನೆ ದೊರೆಯಲಿದ್ದು ಕೊಲಂಬೋ ಹಾಗೂ ಕ್ಯಾಂಡಿ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.
ಪ್ರತಿದಿನವೂ ಎರಡು ಪಂದ್ಯಗಳು ಎಲ್‌ಪಿಎಲ್‌ನಲ್ಲಿ ನಡೆಯಲಿದೆ. ಡೆಸೆಂಬರ್ 13 ಹಾಗೂ 14ರಂದು ಸೆಮಿಫೈನಲ್ ಪಂದ್ಯ ನಡೆಯಲಿದೆ. ಡಿಸೆಂಬರ್ 16ರಂದು ಚೊಚ್ಚಲ ಎಲ್‌ಪಿಎಲ್ ಟೂರ್ನಿಯ ಪೈನಲ್ ಪಂದ್ಯ ನಡೆಯಲಿದೆ.