
ಸೇಂಟ್ ಕೈಟ್ಸ್: 2020ರ ಕೆರಿಬಿಯನ್ ಲೀಗ್ (ಸಿಪಿಎಲ್) ಮಿಸ್ ಮಾಡಿಕೊಂಡಿದ್ದ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಈ ಸೀಸನ್‌ನಲ್ಲಿ ಮತ್ತೆ ಕಣಕ್ಕಿಳಿದಿದ್ದಾರೆ. ಸೇಂಟ್ ಕೈಟ್ಸ್ ಆ್ಯಂಡ್ ನೇವಿಸ್ ಪ್ಯಾಟ್ರಿಯೋಟ್ಸ್ ಪರ ಗೇಲ್ ಗುರುವಾರ (ಆಗಸ್ಟ್ 26) ಆಡಿದ್ದರು. ಈ ವೇಳೆ ಗೇಲ್, ಜೇಸನ್ ಹೋಲ್ಡರ್ ಎಸೆತಕ್ಕೆ ಸಿಕ್ಸ್ ಚಚ್ಚಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗುರುವಾರ ನಡೆದಿದ್ದ ಸಿಪಿಎಲ್ ಎರಡನೇ ಪಂದ್ಯದಲ್ಲಿ ಸೇಂಟ್ ಕೈಟ್ಸ್ ಆ್ಯಂಡ್ ನೇವಿಸ್ ಪ್ಯಾಟ್ರಿಯೋಟ್ಸ್ ಮತ್ತು ಬಾರ್ಬೊಡೋಸ್ ರಾಯಲ್ಸ್ ತಂಡಗಳು ಕಾದಾಡಿದ್ದವು. ಈ ವೇಳೆ ಬಾರ್ಬೊಡೋಸ್ ರಾಯಲ್ಸ್ ತಂಡದ ಆಲ್ ರೌಂಡರ್, ತನ್ನದೇ ರಾಷ್ಟ್ರೀಯ ತಂಡದ ಆಟಗಾರ ಜೇಸನ್ ಹೋಲ್ಡರ್ ಎಸೆತಕ್ಕೆ ಗೇಲ್ ಆಕರ್ಷಕ ಸಿಕ್ಸ್ ಚಚ್ಚಿ ಗಮನ ಸೆಳೆದಿದ್ದಾರೆ.
ಗೇಲ್ ಸಿಕ್ಸ್‌ಗೆ ಗಾಜು ಪುಡಿಪುಡಿ
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸೇಂಟ್ ಕೈಟ್ಸ್ ಆ್ಯಂಡ್ ನೇವಿಸ್ ಪ್ಯಾಟ್ರಿಯೋಟ್ಸ್ ತಂಡದಿಂದ 3ನೇ ಬ್ಯಾಟಿಂಗ್ ಕ್ರಮಾಂಕದಿಂದ ಬಂದಿದ್ದ ಕ್ರಿಸ್ ಗೇಲ್ 4.5ನೇ ಓವರ್‌ನಲ್ಲಿ ಎದುರಾಳಿ ತಂಡದ ನಾಯಕ ಜೇಸನ್ ಹೋಲ್ಡರ್ ಎಸೆತಕ್ಕೆ ಭರ್ಜರಿ ಸಿಕ್ಸ್ ಚಚ್ಚಿದರು. ಯುನಿವರ್ಸಲ್ ಬಾಸ್ ಗೇಲ್ ಬಿರುಸಿನ ಹೊಡೆತಕ್ಕೆ ಎತ್ತರಕ್ಕೆ ಚಿಮ್ಮಿದ ಚೆಂಡು ದೃಶ್ಯ ಪರದೆಗೆ ಹಾಕಲಾಗಿದ್ದ ಗಾಜನ್ನು ಮುರಿದಿದೆ. ಗೇಲ್ ಸಿಕ್ಸ್ ಬಾರಿಸಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ. ಆದರೆ ಪಂದ್ಯದಲ್ಲಿ ಗೇಲ್ ಹೆಚ್ಚು ರನ್ ಗಳಿಸಲಿಲ್ಲ. 9 ಎಸೆತ ಎದುರಿಸಿದ ಗೇಲ್ 1 ಫೋರ್, 1 ಸಿಕ್ಸ್ ಸೇರಿ 12 ರನ್ ಬಾರಿಸಿ ನಿರ್ಗಮಿಸಿದ್ದರು. ಒಶಾನೆ ಥಾಮಸ್ ಅವರ 5.4ನೇ ಓವರ್‌ಗೆ ಗೇಲ್ ಬೌಲ್ಟ್ ಆಗಿ ನಿರ್ಗಮಿಸಿದರು.
ಇತ್ತಂಡಗಳ ಸ್ಕೋರ್ ಮಾಹಿತಿ
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸೇಂಟ್ ಕೈಟ್ಸ್ ಆ್ಯಂಡ್ ನೇವಿಸ್ ಪ್ಯಾಟ್ರಿಯೋಟ್ಸ್, ಕ್ರಿಸ್ ಗೇಲ್ 12, ಎವಿನ್ ಲೂಯಿಸ್ 6, ಡೆವೊನ್ ಥಾಮಸ್ 7, ಆಸಿಫ್ ಅಲಿ 8, ಶೆರ್ಫೇನ್ ರುದರ್‌ಫೋರ್ಡ್ 53, ಫ್ಯಾಬಿಯನ್ ಅಲೆನ್ 19, ಡ್ವೇನ್ ಬ್ರಾವೊ 47 ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು 175 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಬಾರ್ಬೊಡೋಸ್ ರಾಯಲ್ಸ್, ಗ್ಲೆನ್ ಫಿಲಿಪ್ಸ್ 5, ಜಾನ್ಸನ್ ಚಾರ್ಲ್ಸ್ 12, ಶೈ ಹೋಪ್ 44, ಕೈಲ್ ಮೇಯರ್ಸ್ 9, ಅಜಮ್ ಖಾನ್ 28, ಜೇಸನ್ ಹೋಲ್ಡರ್ 10, ತಿಸಾರ ಪೆರೇರಾ 3, ಆಶ್ಲೇ ನರ್ಸ್ 8, ಹೇಡನ್ ವಾಲ್ಷ್ 16 ರನ್ ಸೇರ್ಪಡೆಯೊಂದಿಗೆ 20 ಓವರ್‌ಗೆ 7 ವಿಕೆಟ್ ಕಳೆದು 154 ರನ್ ಬಾರಿಸಿ 21 ರನ್‌ನಿಂದ ಶರಣಾಯ್ತು.
ಮತ್ತೊಂದು ಪಂದ್ಯದಲ್ಲಿ ಅಮೇಝಾನ್ ವಾರಿಯರ್ಸ್ ಗೆ ಜಯ
ಸೇಂಟ್ ಕೈಟ್ಸ್ ಆ್ಯಂಡ್ ನೇವಿಸ್ ಪ್ಯಾಟ್ರಿಯೋಟ್ಸ್ ಇನ್ನಿಂಗ್ಸ್ ವೇಳೆ ಬಾರ್ಬೊಡೋಸ್ ರಾಯಲ್ಸ್ ನ ಮೊಹಮ್ಮದ್ ಅಮೀರ್ 1, ಜೇಸನ್ ಹೋಲ್ಡರ್ 1, ಒಶಾನೆ ಥಾಮಸ್ 3, ವಿಕೆಟ್ ಪಡೆದರೆ, ಬಾರ್ಬೊಡೋಸ್ ರಾಯಲ್ಸ್ ಇಲ್ಲಿಂಗ್ಸ್‌ನಲ್ಲಿ ನೇವಿಸ್ ಪ್ಯಾಟ್ರಿಯೋಟ್ಸ್ ನ ಶೆಲ್ಡನ್ ಕಾಟ್ರೆಲ್ 2, ಡೊಮಿನಿಕ್ ಡ್ರೇಕ್ಸ್ 2, ಫ್ಯಾಬಿಯೆನ್ ಅಲೆನ್ 1 ವಿಕೆಟ್ ಪಡೆದರು. ಎರಡು ಪಂದ್ಯಗಳು ನಡೆದಿದ್ದು, ಸಿಪಿಎಲ್ ಸದ್ಯದ ಅಂಕಪಟ್ಟಿಯಲ್ಲಿ ಸೇಂಟ್ ಕೈಟ್ಸ್ ಆ್ಯಂಡ್ ನೇವಿಸ್ ಪ್ಯಾಟ್ರಿಯೋಟ್ಸ್ ಮೊದಲ ಸ್ಥಾನದಲ್ಲಿದೆ. ಗುರುವಾರ ನಡೆದ ಮತ್ತೊಂದು ಪಂದ್ಯದಲ್ಲಿ ಗಯಾನ ಅಮೇಝಾನ್ ವಾರಿಯರ್ಸ್ ಮತ್ತು ಟ್ರಿನ್‌ಬಾಗೊ ನೈಟ್ ರೈಡರ್ಸ್ ಮುಖಾಮುಖಿಯಾಗಿದ್ದು, ಇದರಲ್ಲಿ ಗಯಾನ ಅಮೇಝಾನ್ ವಾರಿಯರ್ಸ್ ತಂಡ 9 ರನ್‌ನಿಂದ ಗೆದ್ದಿತ್ತು.