ನವದೆಹಲಿ, ಜೂನ್ 29: ದೇಶಿ ಕ್ರಿಕೆಟಿಗರ ಭತ್ಯೆಯನ್ನು ಹೆಚ್ಚಿಸುವ ಬಿಸಿಸಿಐ ಪ್ರಸ್ತಾವವನ್ನು ಸುಪ್ರೀಂಕೋರ್ಟ್ ನೇಮಿತ ಆಡಳಿಗಾರರ ಸಮಿತಿ (ಸಿಒಎ) ತಿರಸ್ಕರಿಸಿದೆ.
ಕಳೆದ ವಾರ ಸಾಮಾನ್ಯ ಸಭೆ ನಡೆಸಿದ್ದ ಬಿಸಿಸಿಐ, ದೇಶಿ ಕ್ರಿಕೆಟಿಗರು ಮತ್ತು ಮಹಿಳಾ ಕ್ರಿಕೆಟಿಗರ ವೇತನವನ್ನು ಇನ್ನಷ್ಟು ಹೆಚ್ಚಿಸುವ ಪ್ರಸ್ತಾವವನ್ನು ಮುಂದಿಟ್ಟಿತ್ತು.
ದೇಶಿ ಕ್ರಿಕೆಟಿಗರ ಪಂದ್ಯದ ಶುಲ್ಕದಲ್ಲಿ ಸುಮಾರು ಶೇ 100ರಷ್ಟು ಹೆಚ್ಚಳ ಮಾಡುವುದಾಗಿ ಸಿಒಎ ಮಾರ್ಚ್‌ನಲ್ಲಿ ಪ್ರಕಟಿಸಿತ್ತು. ಮಂಡಳಿಯ ಒಟ್ಟು ಆದಾಯ ಹಂಚಿಕೆಯನ್ನು ಪರಿಗಣಿಸದ ಕಾರಣ ಈ ಏರಿಕೆಯು ಸಮರ್ಪಕವಾಗಿಲ್ಲ ಎಂದು ಬಿಸಿಸಿಐ ಹೇಳಿತ್ತು.

'ಸಿಒಎ ಅಂತಿಮಗೊಳಿಸಿದ ವೇತನ ವ್ಯವಸ್ಥೆಯನ್ನೇ ಅನುಸರಿಸಲಾಗುವುದು. ಶುಲ್ಕ ಹೆಚ್ಚಳದ ಶ್ರೇಯಸ್ಸನ್ನು ಪಡೆದುಕೊಳ್ಳುವ ಸಲುವಾಗಿ ಬಿಸಿಸಿಐ ಮಾಡುತ್ತಿರುವ ಸ್ಟಂಟ್ ಇದು. ಈ ವ್ಯವಸ್ಥೆಗೆ ಅಧಿಕಾರಿಗಳ ಅನುಮೋದನೆ ಅವಶ್ಯಕತೆ ಇದೆ. ಆದರೆ ಅವರಿನ್ನೂ ಅನುಮೋದನೆ ನೀಡಿಲ್ಲ. ಇದಕ್ಕೆ ಸಿಇಒ ರಾಜುಲ್ ಜೊಹ್ರಿ ಒಪ್ಪಿಗೆ ನೀಡಬೇಕು' ಎಂದು ಸಿಇಒಎ ಮೂಲಗಳು ತಿಳಿಸಿವೆ.
'ಮಾಧ್ಯಮ ಹಕ್ಕುಗಳು ಅಂತಿಮಗೊಂಡ ಬಳಿಕ ಜಿಆರ್ಎಸ್ ಅನ್ನು ದೇಶಿ ಆಟಗಾರರ ವೇತನದೊಂದಿಗೆ ಸೇರಿಸಬಹುದು ಎನ್ನುವುದು ಮಂಡಳಿಯ ಅಭಿಪ್ರಾಯವಾಗಿತ್ತು.
ಆದರೆ ಮಾಧ್ಯಮ ಹಕ್ಕುಗಳು ಹಂಚಿಕೆಯಾಗುವ ಮೊದಲೇ ಸಿಒಎ ವೇತನ ನೀತಿಯನ್ನು ಪ್ರಕಟಿಸಿದೆ. ಪ್ರಸ್ತುತದ ನೀತಿಯಲ್ಲಿ ಆಟಗಾರರು ಅದರ ಪ್ರಯೋಜನವನ್ನು ನಾಲ್ಕು ವರ್ಷಗಳ ಬಳಿಕವಷ್ಟೇ ಪಡೆದುಕೊಳ್ಳಬಹುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.