ಅಡಿಲೇಡ್, ನ.27: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿ ಹಗಲು-ರಾತ್ರಿ ಟೆಸ್ಟ್ ಪಂದ್ಯ ಇಲ್ಲಿನ ಓವಲ್ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡಿದೆ. ಕಾಕತಾಳೀಯ ಎಂಬಂತೆ ಫ್ಲಡ್ ಲೈಟ್ ನಲ್ಲಿ ಮೊಟ್ಟಮೊದಲ ಏಕದಿನ ಅಂತಾರಾಷ್ಟೀಯ ಕ್ರಿಕೆಟ್ ಪಂದ್ಯವಾಡಿದ್ದು ಕೂಡಾ ನವೆಂಬರ್ 27ರ ದಿನಾಂಕದಂದೇ ಎಂಬುದು ವಿಶೇಷ.
138 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಹಗಲು-ರಾತ್ರಿ ಟೆಸ್ಟ್ ಪಂದ್ಯ ನಡೆಯುತ್ತಿದೆ. 1970ರಲ್ಲಿ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಹಾಗೂ ಕಳೆದ ದಶಕದಲ್ಲಿ ಟ್ವೆಂಟಿ-20 ಮಾದರಿಯ ಪಂದ್ಯವನ್ನು ಪರಿಚಯಿಸಲಾಗಿದ್ದು, ಈ ಎರಡು ಮಾದರಿಯ ಕ್ರಿಕೆಟ್ ಪ್ರೇಕ್ಷಕರನ್ನು ಸೆಳೆಯಲು ಯಶಸ್ವಿಯಾಗಿತ್ತು. [ಬಹುನಿರೀಕ್ಷಿತ ಹಗಲು-ರಾತ್ರಿ ಟೆಸ್ಟ್ ಬಗ್ಗೆ ಸಕಲ ಮಾಹಿತಿ]

ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡಿನ ಬ್ರೆಂಡನ್ ಮೆಕಲಮ್ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ ತಂಡ 65.2 ಓವರ್ ಗಳಲ್ಲಿ 202 ಸ್ಕೋರಿಗೆ ಆಲೌಟ್ ಆಗಿದ್ದು, ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಮೊದಲ ದಿನದ ಅಂತ್ಯಕ್ಕೆ 54/2 ಸ್ಕೋರ್ ಮಾಡಿದೆ. [ಐತಿಹಾಸಿಕ ಟೆಸ್ಟ್ ಪಂದ್ಯದ ಭಾಗವಾದ ಇಂಡಿಯನ್]
ನವೆಂಬರ್ 27ರಂದು ಸಿಡ್ನಿ ಕ್ರಿಕೆಟ್ ಮೈದಾನ (ಎಸ್ ಸಿಜಿ) ದಲ್ಲಿ ಪ್ರಪ್ರಥಮ ಹಗಲು ರಾತ್ರಿ ಪಂದ್ಯ ಫ್ಲಡ್ ಲೈಟ್ ಗಳ ಅಡಿಯಲ್ಲಿ 1979ರಲ್ಲಿ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ಈ ಐತಿಹಾಸಿಕ ಪಂದ್ಯದಲ್ಲಿ ಸೆಣಸಿದ್ದವು.
ಹಗಲು ರಾತ್ರಿ ಏಕದಿನ ಹಾಗೂ ಟೆಸ್ಟ್ ಪಂದ್ಯಗಳೆರಡರಲ್ಲೂ ಆಸ್ಟ್ರೇಲಿಯಾ ಭಾಗವಹಿಸಿರುವುದು ವಿಶೇಷ. ಏಕದಿನ ಪಂದ್ಯವನ್ನು ಆಸ್ಟ್ರೇಲಿಯಾ 5 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು. ನಾಯಕ ಗ್ರೆಗ್ ಚಾಪೆಲ್ ಅವರು ಮೊಟ್ಟ ಮೊದಲ ಅರ್ಧ ಶತಕ ಬಾರಿಸಿದ್ದರು. ವೆಸ್ಟ್ ಇಂಡೀಸ್ ತಂಡಕ್ಕೆ ಕ್ಲೈವ್ ಲಾಡ್ ನಾಯಕರಾಗಿದ್ದರು.