Commonwealth Games 2022: ಕ್ರಿಕೆಟ್‍ನಲ್ಲಿ ಭಾರತ ಸೆಮಿಫೈನಲ್ ಪ್ರವೇಶಿಸಲು ಇದು ಕೊನೆ ಅವಕಾಶ!

ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನಲ್ಲಿ ಈ ಬಾರಿಯ ಪ್ರತಿಷ್ಠಿತ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟ ಆಯೋಜನೆಯಾಗಿದೆ. ಇನ್ನು ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾ ಕೂಟದಲ್ಲಿ ಕ್ರಿಕೆಟ್ ಆಟವನ್ನು ಕೂಡ ಸೇರ್ಪಡೆಗೊಳಿಸಿರುವುದು ಕಳೆದ ವರ್ಷಗಳಿಗಿಂತ ಈ ವರ್ಷದ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟ ವಿಭಿನ್ನ ಎನ್ನುವಂತೆ ಮಾಡಿದೆ.
ಕೇವಲ ಮಹಿಳಾ ಕ್ರಿಕೆಟ್ ಟೂರ್ನಿಯನ್ನು ಮಾತ್ರ ಕ್ರೀಡಾಕೂಟದಲ್ಲಿ ಆಯೋಜಿಸಲಾಗಿದ್ದು, ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಬಾರ್ಬಡೋಸ್ ಹೀಗೆ ಒಟ್ಟು 8 ವನಿತೆಯರ ತಂಡಗಳು ಈ ಕ್ರಿಕೆಟ್ ವಿಭಾಗದಲ್ಲಿ ಭಾಗವಹಿಸಿವೆ. 8 ತಂಡಗಳನ್ನು 2 ಗುಂಪುಗಳಾಗಿ ವಿಭಜನೆ ಮಾಡಿ ಪ್ರತಿ ತಂಡಕ್ಕೂ ಗ್ರೂಪ್ ಹಂತದಲ್ಲಿ ತಲಾ 3 ಪಂದ್ಯಗಳನ್ನು ಆಡುವ ಅವಕಾಶವನ್ನು ನೀಡಲಾಗಿತ್ತು. ಹೀಗೆ ಎರಡೂ ಗುಂಪುಗಳಲ್ಲಿ ಯಾವ ತಂಡಗಳು ಅತಿ ಹೆಚ್ಚು ಪಂದ್ಯಗಳನ್ನು ಗೆದ್ದು ಟಾಪ್ 2 ಸ್ಥಾನಗಳನ್ನು ಪಡೆದುಕೊಳ್ಳುತ್ತವೋ ಆ ತಂಡಗಳು ನೇರವಾಗಿ ಸೆಮಿಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳಲಿವೆ.
ಹೀಗಾಗಿ 8 ತಂಡಗಳ ನಡುವೆ ತೀವ್ರ ಹಣಾಹಣಿ ನಡೆದಿದ್ದು, ಸದ್ಯ ಎಲ್ಲ ತಂಡಗಳ 2 ಪಂದ್ಯಗಳು ಮುಕ್ತಾಯವಾಗುವ ಹಂತಕ್ಕೆ ಆಸ್ಟ್ರೇಲಿಯಾ ವನಿತೆಯರ ತಂಡ, ನ್ಯೂಜಿಲೆಂಡ್ ವನಿತೆಯರ ತಂಡ ಹಾಗೂ ಇಂಗ್ಲೆಂಡ್ ವನಿತೆಯರ ತಂಡಗಳು ಆಡಿರುವ ಎಲ್ಲಾ 2 ಪಂದ್ಯಗಳಲ್ಲಿಯೂ ಗೆದ್ದು ತಮ್ಮ ಸೆಮಿಫೈನಲ್ ಹಾದಿಯನ್ನು ಬಹುತೇಕ ಸುಲಭವಾಗಿಸಿಕೊಂಡಿವೆ. ಇನ್ನು ಟೂರ್ನಿಯಲ್ಲಿ ಭಾಗವಹಿಸಿರುವ ಭಾರತ ವನಿತೆಯರ ತಂಡಕ್ಕೆ ಸೆಮಿಫೈನಲ್ ಪ್ರವೇಶಿಸುವ ಅವಕಾಶವಿದೆಯಾ ಹಾಗೂ ಆ ಮಾರ್ಗವೇನು ಎಂಬುದರ ಕುರಿತಾದ ಮಾಹಿತಿ ಕೆಳಕಂಡಂತಿದೆ.

2 ಪಂದ್ಯಗಳಲ್ಲಿ 1 ಸೋಲು ಮತ್ತೊಂದು ಗೆಲುವು
ಈ ಬಾರಿಯ ಕಾಮನ್ ವೆಲ್ತ್ ಕ್ರೀಡಾಕೂಟದ ಕ್ರಿಕೆಟ್ ವಿಭಾಗದ ಉದ್ಘಾಟನಾ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರ ತಂಡದ ವಿರುದ್ಧ ಸೆಣಸಾಟ ನಡೆಸಿದ ಭಾರತ ವನಿತೆಯರ ತಂಡ ರೋಚಕ ಪಂದ್ಯದಲ್ಲಿ ಸೋಲನ್ನು ಅನುಭವಿಸಿತ್ತು. ನಂತರ ನಡೆದ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವನಿತೆಯರ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಗೆಲುವಿನ ಹಾದಿಗೆ ಮರಳಿದ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ ಖಾತೆ ತೆರೆಯಿತು. ಈ ಮೂಲಕ ಭಾರತ ತಂಡ ಸದ್ಯ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ ನಂತರ ದ್ವಿತೀಯ ಸ್ಥಾನದಲ್ಲಿದೆ.

ಸೆಮಿಫೈನಲ್ ಪ್ರವೇಶಿಸಲು ಉಳಿದಿರುವುದು ಒಂದೇ ಮಾರ್ಗ
ಒಂದೆಡೆ ಭಾರತ 2 ಪಂದ್ಯಗಳ ಪೈಕಿ 1 ಪಂದ್ಯದಲ್ಲಿ ಗೆಲುವು ಮತ್ತೊಂದು ಪಂದ್ಯದಲ್ಲಿ ಸೋತಿದ್ದರೆ, ಮತ್ತೊಂದೆಡೆ ಬಾರ್ಬಡೋಸ್ ವನಿತೆಯರ ತಂಡ ಕೂಡ ಇದೇ ರೀತಿ ಪಾಕಿಸ್ತಾನದ ವಿರುದ್ಧ ಗೆದ್ದು ಆಸ್ಟ್ರೇಲಿಯಾ ವಿರುದ್ಧ ಸೋತು ಭಾರತೀಯ ವನಿತೆಯರಷ್ಟೇ ಅಂಕಗಳನ್ನು ಪಡೆದುಕೊಂಡಿದೆ. ಭಾರತ ವನಿತೆಯರು ಉತ್ತಮ ನೆಟ್ ರನ್ ರೇಟ್ ಕಾರಣದಿಂದ ದ್ವಿತೀಯ ಸ್ಥಾನದಲ್ಲಿದ್ದರೆ, ಬಾರ್ಬಡೋಸ್ ವನಿತೆಯರು ತೃತೀಯ ಸ್ಥಾನದಲ್ಲಿದ್ದಾರೆ. ಅತ್ತ ಆಡಿರುವ ಎಲ್ಲಾ ಪಂದ್ಯಗಳನ್ನು ಸೋತಿರುವ ಪಾಕಿಸ್ತಾನ ಅಂತಿಮ ಸ್ಥಾನದಲ್ಲಿದ್ದು, ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದೆ. ಹೀಗಾಗಿ ಭಾರತ ವನಿತೆಯರ ತಂಡ ಯಶಸ್ವಿಯಾಗಿ ಸೆಮಿಫೈನಲ್ ಪ್ರವೇಶಿಸಬೇಕಾದರೆ ಉಳಿದಿರುವ ಬಾರ್ಬಡೋಸ್ ವನಿತೆಯರ ವಿರುದ್ಧದ ಪಂದ್ಯದಲ್ಲಿ ಕಡ್ಡಾಯವಾಗಿ ಗೆಲ್ಲಲೇಬೇಕಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಸೆಮಿಫೈನಲ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ.

ಭಾರತ ಮತ್ತು ಬಾರ್ಬಡೋಸ್ ವನಿತೆಯರ ನಡುವಿನ ಪಂದ್ಯ ಯಾವಾಗ?
ಭಾರತ ವನಿತೆಯರ ತಂಡಕ್ಕೆ ನಿರ್ಣಾಯಕವಾಗಿ ಪರಿಣಮಿಸಿರುವ ಈ ಬಾರ್ಬಡೋಸ್ ವನಿತೆಯರ ತಂಡದ ವಿರುದ್ಧದ ಪಂದ್ಯ ಇಂದು ( ಆಗಸ್ಟ್ 3 ) ರಾತ್ರಿ 10.30ಕ್ಕೆ ಎಡ್ಜ್‌ಬಾಸ್ಟನ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯದಲ್ಲಿ ಗೆಲ್ಲುವ ತಂಡ ಸೆಮಿಫೈನಲ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications