IPL 2025: 5 ತಂಡಗಳ ನಾಯಕರ ಹೆಸರು ಅಂತಿಮ; ಕ್ಯಾಪ್ಟನ್ ಹುಡುಕಾಟದಲ್ಲಿ ಉಳಿದ ಫ್ರಾಂಚೈಸಿ
ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್)18ನೇ ಆವೃತ್ತಿ ಮುಂದಿನ ವರ್ಷ ಮಾರ್ಚ್ 14 ರಿಂದ ಪ್ರಾರಂಭವಾಗಲಿದ್ದು, ಟೂರ್ನಿಯ ಫೈನಲ್ ಪಂದ್ಯ ಮೇ 25ರಂದು ನಡೆಯಲಿದೆ. ಕಳೆದ ಮೂರು ಆವೃತ್ತಿಗಳಂತೆ ಈ ಬಾರಿಯೂ ಒಟ್ಟು 74 ಪಂದ್ಯಗಳು ನಡೆಯಲಿವೆ. ಈಗಾಗಲೇ ಮೆಗಾ ಹರಾಜು ಪ್ರಕ್ರಿಯೆ ಕೂಡ ಮುಗಿದಿದೆ. ಐಪಿಎಲ್‌ನ ಹತ್ತು ಫ್ರಾಂಚೈಸಿಗಳು ತಮ್ಮ ನೆಚ್ಚಿನ ಸ್ಟಾರ್ ಆಟಗಾರರನ್ನು ಖರೀದಿಸಿವೆ.
ಐಪಿಎಲ್ 2025ರ ಟೂರ್ನಿಗೆ ಐದು ತಂಡಗಳು ತಮ್ಮ ನಾಯಕರ ಹೆಸರನ್ನು ಅಂತಿಮಗೊಳಿಸಿವೆ. ಆದರೆ, ಹಾಕಿ ಚಾಂಪಿಯನ್ ಆಗಿರುವ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಸೇರಿದಂತೆ ಇನ್ನುಳಿದ ತಂಡಗಳು ತನ್ನ ಹೊಸ ನಾಯಕನನ್ನು ಹುಡುಕುತ್ತಿವೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ಯಾಟ್ ಕಮಿನ್ಸ್
ಐಪಿಎಲ್ 2021 ರಿಂದ 2023 ರವರೆಗಿನ ಸತತ ಮೂರು ಆವೃತ್ತಿಗಳಲ್ಲಿ ಪ್ಲೇಆಫ್ ತಲುಪಲು ಸನ್‌ರೈಸರ್ಸ್ ಹೈದರಾಬಾದ್ ತಂಡ ವಿಫಲವಾಗಿತ್ತು. ಕಳೆದ ಬಾರಿ ಚಾಂಪಿಯನ್ ನಾಯಕ ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಫೈನಲ್ ತಲುಪಿತ್ತು. ಐಪಿಎಲ್ 2024 ಮಿನಿ ಹರಾಜಿನಲ್ಲಿ 20.50 ಕೋಟಿ ರೂ.ಗೆ ಪ್ಯಾಟ್ ಕಮಿನ್ಸ್ ಅವರನ್ನು ಹೈದರಾಬಾದ್ ಬಿಡ್ ಮಾಡಿತ್ತು. ಆದರೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲು ಕಂಡಿತ್ತು. ಇದೀಗ ಮುಂದಿನ ಆವೃತ್ತಿಗೂ ಕಮ್ಮಿನ್ಸ್ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ.
ಸಂಜು ಸ್ಯಾಮ್ಸನ್
ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 2022ರಲ್ಲಿ ರನ್ನರ್ ಅಪ್ ಆಗಿತ್ತು. ಕಳೆದ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿತ್ತು. ಐಪಿಎಲ್ 2024ರಲ್ಲಿ ರಾಜಸ್ಥಾನ ಉತ್ತಮ ಆರಂಭವನ್ನು ಮಾಡಿತು. ಆದರೆ, ದ್ವಿತೀಯಾರ್ಧದಲ್ಲಿ ರಾಜಸ್ಥಾನ ಹಳಿತಪ್ಪಿತು. ಪ್ರಸ್ತುತ ಟಿ20 ಕ್ರಿಕೆಟ್‌ನಲ್ಲಿ ಸ್ಯಾಮ್ಸನ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಂಜು ನಾಯಕತ್ವದಲ್ಲಿ ರಾಜಸ್ಥಾನ ಐಪಿಎಲ್ 2025ರ ಚಾಂಪಿಯನ್ ಆಗುವ ನಿರೀಕ್ಷೆಯಿದೆ.
ಋತುರಾಜ್ ಗಾಯಕ್ವಾಡ್
ಐಪಿಎಲ್ 2024ರ ಆವೃತ್ತಿಗೂ ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ತೊರೆದಿದ್ದರು. ಬಳಿಕ ಋತುರಾಜ್ ಗಾಯಕ್ವಾಡ್ ಸಿಎಸ್‌ಕೆ ನಾಯಕರಾಗಿ ನೇಮಕಗೊಂಡಿದ್ದರು. ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡ ಋತುರಾಜ್ ಗಾಯಕ್ವಾಡ್ ತಂಡವನ್ನು ಪ್ಲೇ-ಆಫ್ ಸಮೀಪಕ್ಕೆ ಕೊಂಡೊಯ್ದಿದರು. ಆದರೆ ಲೀಗ್ ಹಂತದ ಅಂತ್ಯಕ್ಕೆ ಸಿಎಸ್‌ಕೆ ನೆಟ್ ರನ್ ರೇಟ್ ಆಧಾರದ ಮೇಲೆ ಪ್ಲೇ-ಆಫ್ ಹೋಗಿರಲಿಲ್ಲ. ಐಪಿಎಲ್ 2025ರಲ್ಲಿ ಋತುರಾಜ್ ಗಾಯಕ್ವಾಡ್ ಮತ್ತೊಮ್ಮೆ ಸಿಎಸ್‌ಕೆ ಚಾಂಪಿಯನ್ ಮಾಡಲು ಸಜ್ಜಾಗಿದ್ದಾರೆ.
ಶುಭಮನ್ ಗಿಲ್
ಐಪಿಎಲ್ 2024 ರಲ್ಲಿ ಗುಜರಾತ್ ಟೈಟಾನ್ಸ್ ನಾಯಕನಾಗಿ ಶುಭಮನ್ ಗಿಲ್ ಅವರು ಕಾಣಿಸಿಕೊಂಡಿದ್ದರು. ಅವರಿಂದ ತಂಡ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿತ್ತು. ಆದರೆ ಗಿಲ್ ನಿರೀಕ್ಷೆಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದರು. ಏಕೆಂದರೆ ಫ್ರಾಂಚೈಸ್ ಮಾಜಿ ನಾಯಕ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದಲ್ಲಿ ಎರಡು ಬಾರಿ ಫೈನಲ್ ತಲುಪಿತ್ತು. ಹಾರ್ದಿಕ್ ಪಾಂಡ್ಯ ನಂತರ ಗಿಲ್ ನಾಯಕತ್ವದಲ್ಲಿ ಟೈಟಾನ್ಸ್ ತಂಡ 14 ಪಂದ್ಯಗಳಲ್ಲಿ ಐದರಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಅಂಕಪಟ್ಟಿಯಲ್ಲಿ ಗುಜರಾತ್ 8ನೇ ಸ್ಥಾನದಲ್ಲಿತ್ತು. ಇದೀಗ ಐಪಿಎಲ್ 2025ರಲ್ಲಿ ಗಿಲ್ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯ
ಐಪಿಎಲ್ 2024ರ ಟೂರ್ನಿಗೂ ಮುನ್ನ ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್ ಟೈಟಾನ್ಸ್‌ನಿಂದ ಖರೀದಿಸುವ ಮೂಲಕ ಮುಂಬೈ ಇಂಡಿಯನ್ಸ್ ಭಾರೀ ಸದ್ದು ಮಾಡಿತ್ತು. ಹಾರ್ದಿಕ್ ತನ್ನ ನಾಯಕತ್ವದಲ್ಲಿ ಎರಡು ಬಾರಿ ಗುಜರಾತ್ ಟೈಟಾನ್ಸ್ ಫೈನಲ್‌ಗೆ ಕರೆದುಕೊಂಡು ಹೋಗಿದ್ದರು. ಆದರೆ ಹಾರ್ದಿಕ್ ಪಾಂಡ್ಯ ಮುಂಬೈ ತಂಡವನ್ನು ಚಾಂಪಿಯನ್ ಮಾಡಲು ಸಾಧ್ಯವಾಗಲಿಲ್ಲ. ಐಪಿಎಲ್ 2024ರಲ್ಲಿ ಮುಂಬೈ ಕೇವಲ ನಾಲ್ಕು ಗೆಲುವುಗಳೊಂದಿಗೆ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿತ್ತು. ಇದೀಗ ಮುಂದಿನ ವರ್ಷವೂ ಹಾರ್ದಿಕ್ ಮುಂಬೈ ತಂಡದ ನಾಯಕರಾಗಲಿದ್ದು, ಆರನೇ ಬಾರಿಗೆ ಚಾಂಪಿಯನ್ ಮಾಡುವ ಕನಸು ಕಾಣುತ್ತಿದ್ದಾರೆ.
ಐಪಿಎಲ್ 2025ರ ಟೂರ್ನಿಗೆ ಇಲ್ಲಿಯವರೆಗೆ ಕೇವಲ 5 ತಂಡಗಳು ನಾಯಕರನ್ನು ಅಂತಿಮಗೊಳಿಸಿವೆ. ಆದರೆ ಇನ್ನುಳಿದ ಐದು ತಂಡಗಳು ನಾಯಕನ ಹುಡುಕಾಟದಲ್ಲಿವೆ. ಕೋಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ನಾಯಕನನ್ನು ಹುಡುಕುತ್ತಿವೆ. ವಿರಾಟ್ ಕೊಹ್ಲಿ ಆರ್‌ಸಿಬಿ, ಅಜಿಂಕ್ಯ ರಹಾನೆ ಕೋಲ್ಕತ್ತಾ, ಕೆಎಲ್ ರಾಹುಲ್ ಡೆಲ್ಲಿ, ರಿಷಬ್ ಪಂತ್ ಲಕ್ನೋ ಮತ್ತು ಶ್ರೇಯಸ್ ಅಯ್ಯರ್ ಪಂಜಾಬ್ ನಾಯಕತ್ವವನ್ನು ವಹಿಸಿಕೊಳ್ಳಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications