
ಪೋರ್ಟ್ ಆಫ್ ಸ್ಪೇನ್: ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ಬುಧವಾರ (ಸೆಪ್ಟೆಂಬರ್ 2) ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್ 23ನೇ ಪಂದ್ಯದಲ್ಲಿ ಸೇಂಟ್ ಕೈಟ್ಸ್ ಆ್ಯಂಡ್ ನೇವಿಸ್ ಪ್ಯಾಟ್ರಿಯೋಟ್ಸ್ ವಿರುದ್ಧ ಟ್ರಿನ್‌ಬಾಗೊ ನೈಟ್ ರೈಡರ್ಸ್ 59 ರನ್ ಸುಲಭ ಜಯ ದಾಖಲಿಸಿದೆ. ಲೆಂಡ್ಲ್ ಸಿಮನ್ಸ್ ಸ್ಫೋಟಕ ಅರ್ಧ ಶತಕದಾಟದಿಂದ ನೈಟ್ ರೈಡರ್ಸ್ ಸತತ 8 ಗೆಲುವುಗಳನ್ನು ಕಂಡಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಟ್ರಿನ್‌ಬಾಗೊ ನೈಟ್ ರೈಡರ್ಸ್‌ನಿಂದ ಆರಂಭಿಕ ಬ್ಯಾಟ್ಸ್‌ಮನ್ ಲೆಂಡ್ಲ್ ಸಿಮನ್ಸ್ 96 (63 ಎಸೆತ), ಡ್ಯಾರೆನ್ ಬ್ರಾವೊ 36 ರನ್ ಸೇರಿಸಿದರು. ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದು 174 ರನ್ ಕಲೆ ಹಾಕಿತ್ತು.
ಗುರಿ ಬೆನ್ನಟ್ಟಿದ ಸೇಂಟ್ ಕೈಟ್ಸ್ ಆ್ಯಂಡ್ ನೇವಿಸ್ ಪ್ಯಾಟ್ರಿಯೋಟ್ಸ್, ಕ್ರಿಸ್ ಲಿನ್ 34, ಜೋಶುವ ಡೆ ಸಿಲ್ವಾ 29, ರಯಾದ್ ಎಮ್ರಿತ್ 13 ರನ್ ಕೊಡುಗೆಯೊಂದಿಗೆ 20 ಓವರ್ ಮುಕ್ತಾಯಕ್ಕೆ 7 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿ ಶರಣಾಯಿತು.
ಸೇಂಟ್ ಕೈಟ್ಸ್ ಆ್ಯಂಡ್ ನೇವಿಸ್ ಪ್ಯಾಟ್ರಿಯೋಟ್ಸ್‌ನಿಂದ ಡೆಮಿನಿಕ್ ಟ್ರೇಕ್ಸ್ 2 ವಿಕೆಟ್ ಪಡೆದರೆ, ಟ್ರಿನ್ ಬಾಗೊ ನೈಟ್ ರೈಡರ್ಸ್‌ನಿಂದ ಸಿಕಂದರ್ ರಾಝ 3 ವಿಕೆಟ್‌ನೊಂದಿಗೆ ಗಮನ ಸೆಳೆದರು. ಲೆಂಡ್ಲ್ ಸಿಮನ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.