
2023ರ ಐಪಿಎಲ್ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ಆಲ್‌ರೌಂಡರ್ ಕೆಮರೂನ್ ಗ್ರೀನ್‌ರನ್ನು 17.50 ಕೋಟಿ ರುಪಾಯಿ ನೀಡಿ ಮುಂಬೈ ಇಂಡಿಯನ್ಸ್ ಖರೀದಿ ಮಾಡಿತು. 2023ರ ಐಪಿಎಲ್‌ನಲ್ಲಿ ಗ್ರೀನ್ ಮುಂಬೈ ಇಂಡಿಯನ್ಸ್ ಪರವಾಗಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಕೆಮರೂನ್ ಗ್ರೀನ್ ಸೇರ್ಪಡೆಯಿಂದ ಖುಷಿಯಾಗಿದ್ದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮತ್ತು ಅಭಿಮಾನಿಗಳಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಶಾಕ್ ನೀಡಿದೆ. ಏಪ್ರಿಲ್ 13ರವರೆಗೆ ಬೌಲಿಂಗ್ ಮಾಡದಂತೆ ಕೆಮರೂನ್ ಗ್ರೀನ್‌ಗೆ ಕ್ರಿಕೆಟ್ ಆಸ್ಟ್ರೇಲಿಯಾ ಸೂಚನೆ ನೀಡಿದೆ.
ಏಪ್ರಿಲ್ 13ರವರೆಗೆ ಗ್ರೀನ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಬ್ಯಾಟಿಂಗ್ ಮಾತ್ರ ಮಾಡಲಿದ್ದಾರೆ. ಭಾರತದ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಯಲ್ಲಿ ಆಡಲಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾದ ಮಾರ್ಗಸೂಚಿಗಳ ಬಗ್ಗೆ ಬಿಸಿಸಿಐ ಈ ಮೊದಲೇ ಎಲ್ಲಾ ಫ್ರಾಂಚೈಸಿಗಳಿಗೆ ತಿಳಿಸಿತ್ತು ಎಂದು ವರದಿಯಾಗಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವಂತೆ ಬಿಸಿಸಿಐ ಸಿಇಒ ಮತ್ತು ಐಪಿಎಲ್ ಸಿಒಒ ಹೇಮಂಗ್ ಅಮೀನ್ ಎಲ್ಲಾ 10 ಫ್ರಾಂಚೈಸಿಗಳಿಗೆ ಈ ವಿಚಾರವನ್ನು ತಿಳಿಸಿದ್ದರು.
"ಐಪಿಎಲ್ ಆವೃತ್ತಿಗೆ ಕೆಮರೂನ್ ಗ್ರೀನ್ ಸಂಪೂರ್ಣವಾಗಿ ಲಭ್ಯವಿರುತ್ತಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಆದಾಗ್ಯೂ, ಬಾರ್ಡರ್-ಗವಾಸ್ಕರ್ ಟ್ರೋಫಿಯ ಎಲ್ಲಾ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಅವರು ಕಾಣಿಸಿಕೊಂಡರೆ, 2023 ರ ಮಾರ್ಚ್ 9 ರಿಂದ ಮಾರ್ಚ್ 13 ರವರೆಗೆ ನಿಗದಿಪಡಿಸಲಾದ ನಾಲ್ಕನೇ ಟೆಸ್ಟ್‌ನ ಮುಕ್ತಾಯದಿಂದ ನಾಲ್ಕು ವಾರಗಳವರೆಗೆ ಗ್ರೀನ್ ಬೌಲಿಂಗ್ ಮಾಡಲು ಸಾಧ್ಯವಾಗುವುದಿಲ್ಲ." ಎಂದು ಹೇಮಂಗ್ ಅಮೀನ್ ತಿಳಿಸಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಗಾಯಗೊಂಡಿರುವ ಗ್ರೀನ್
ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಕೆಮರೂನ್ ಗ್ರೀನ್ ಬೆರಳಿಗೆ ಗಾಯ ಮಾಡಿಕೊಂಡರು. ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್‌ನಿಂದ ಅವರನ್ನು ಹೊರಗಿಡಲಾಗಿದೆ.
ಕೆಮರೂನ್ ಗ್ರೀನ್ ಬೆರಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಭಾರತದ ವಿರುದ್ಧದ ಟೆಸ್ಟ್ ಸರಣಿ ವೇಳೆಗೆ ಅವರು ಸಂಪೂರ್ಣವಾಗಿ ಫಿಟ್ ಆಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಮತ್ತು ಏಕದಿನ ಸರಣಿ ಮುಕ್ತಾಯವಾದ ಬಳಿಕ ಏಪ್ರಿಲ್‌ನಲ್ಲಿ ಐಪಿಎಲ್‌ಗೆ ಚಾಲನೆ ಸಿಗಲಿದೆ.
ಪ್ರಮುಖ ಆಟಗಾರರ ಗಾಯದ ಬಗ್ಗೆ ಈಗಾಗಲೇ ಬಿಸಿಸಿಐ ಕಾಳಜಿ ವಹಿಸುತ್ತಿದೆ. ಆಟಗಾರರ ಕೆಲಸದ ಹೊರೆ ನಿರ್ವಹಣೆ ಮಾಡುವ ಬಗ್ಗೆ ಐಪಿಎಲ್ ಫ್ರಾಂಚೈಸಿಗಳ ಜೊತೆ ಕೆಲಸ ಮಾಡುವಂತೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಗೆ ಸೂಚನೆ ನೀಡಿದೆ.