
ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಿಗೆ ಭಾರತ ವಿಶೇಷ ಜರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಬಗ್ಗೆ ಬಿಸಿಸಿಐ ಇನ್ನೂ ಖಚಿತವಾಗಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ ಅಭಿಮಾನಿಗಳು ಮಾತ್ರ ಈ ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲವನ್ನು ವ್ಯಕ್ತಪಡಿಸುತ್ತಿದ್ದಾರೆ.
ಔಟ್‌ಲುಕ್ ಪತ್ರಿಕೆಯ ವರದಿಯ ಪ್ರಕಾರ ಭಾರತೀಯ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ರೆಟ್ರೋ ಜರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆ 70-80ರ ದಶಕದಲ್ಲಿ ಟೀಮ್ ಇಂಡಿಯಾ ಹೊಂದಿದ್ದ ಕಡು ನೀಲಿ ಬಣ್ಣದ ಜರ್ಸಿಯಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.
ಈಗಾಲೇ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ನಾನಾ ಕಾರಣಗಳಿಂದ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಈ ಸರಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡ ಹಾಗೂ ಆಸ್ಟ್ರೇಲಿಯಾ 3 ಏಕದಿನ, 3 ಟಿ20 ಹಾಗೂ 4 ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಲಿದೆ.
ಮೂರು ಪಂದ್ಯಗಳ ಏಕದಿನ ಸರಣಿ ನವೆಂಬರ್ 27, 29 ಹಾಗೂ ಡಿಸೆಂಬರ್ 2ರಂದು ನಡೆಯಲಿದೆ. ಇದರಲ್ಲಿ ಮೊದಲ ಎರಡು ಪಂದ್ಯಗಳು ಸಿಡ್ನಿ ಕ್ರಿಕೆಟ್ ಗ್ರೌಂಡ್ ಹಾಗೂ ಅಂತಿಮ ಪಂದ್ಯ ಕ್ಯಾನ್‌ಬೆರಾದಲ್ಲಿ ನಡೆಯಲಿದೆ. 3 ಟಿ20 ಪಂದ್ಯಗಳು ಡೆಸೆಂಬರ್ 4, 6 ಹಾಗೂ 8ರಂದು ನಡೆಯಲಿದೆ. ಡಿಸೆಂಬರ್ 17ರಿಂದ ಟೆಸ್ಟ್ ಸರಣಿಗೆ ಚಾಲನೆ ದೊರೆಯಲಿದೆ.
ಇದರಲ್ಲಿ ಸೀಮಿತ ಓವರ್‌ಗಳ ಟೂರ್ನಿಯಲ್ಲಿ ವಿಶೇಷ ಜರ್ಸಿಯಲ್ಲಿ ಭಾರತ ಕಾಣಿಸಿಕೊಳ್ಳಲಿದೆ ಎನ್ನಲಾಗುತ್ತಿದೆ. ಹೀಗಾಗಿ ಅಭಿಮಾನಿಗಳು ಈ ಜರ್ಸಿ ಯಾವ ರೀತಿಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ಟ್ವಿಟ್ಟರ್‌ನಲ್ಲಿ ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದಾರೆ.