
ಟಿ-ಟ್ವೆಂಟಿ ಸ್ಪೆಶಲಿಸ್ಟ್ ಸುರೇಶ್ ರೇನಾಗೆ ಇವತ್ತು ಬರ್ತ್‌ಡೇ ಸಂಭ್ರಮ. ಭಾರತೀಯ ಕ್ರಿಕೆಟ್‌ನ ಈ ಆಲ್‌ರೌಂಡರ್ ಆಟಗಾರ ಇಂದು 33ವರ್ಷಕ್ಕೆ ಕಾಲಿಟ್ಟಿದ್ದಾರೆ. ಕ್ರಿಕೆಟ್‌ನ ಮೂರೂ ಫಾರ್ಮೆಟ್‌ನಲ್ಲಿ ಸೆಂಚುರಿ ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ರೈನಾ ಪಾತ್ರರಾಗಿದ್ದಾರೆ.
ಹುಟ್ಟುಹಬ್ದದ ಹಿನ್ನೆಲೆಯಲ್ಲಿ ರೈನಾ ಇವತ್ತು ಕ್ರಿಕೆಟ್‌ನ ಘಟಾನುಘಟಿಗಳಿಂದ ಶುಭಾಶಯಗಳನ್ನು ಸ್ವೀಕರಿಸಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ಟೀಮ್ ಇಂಡಿಯಾದ ಈ ಸ್ಪೋಟಕ ಆಟಗಾರನಿಗೆ ಸಾಮಾಜಿಕ ತಾಣಗಳ ಮೂಲಕ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ಟಿ-ಟ್ವೆಂಟಿ ಮತ್ತು ಏಕದಿನ ವಿಶ್ವಕಪ್‌ನಲ್ಲಿ ಶತಕವನ್ನು ಭಾರಿಸಿರುವ ಭಾರತದ ಏಕೈಕ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಯೂ ಸುರೇಶ್ ರೈನಾ ಅವರದ್ದು. 18 ಟೆಸ್ಟ್ ಪಂದ್ಯ 226 ಏಕದಿನ ಮತ್ತು 78 ಟಿ-20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ರೈನಾ ಪ್ರತಿನಿಧಿಸಿದ್ದಾರೆ.
2005ರಲ್ಲಿ ಏಕದಿನ ಕ್ರಿಕೆಟ್‌ಗೆ ಶ್ರೀಲಂಕಾ ವಿರುದ್ಧ ಪದಾರ್ಪಣೆ ಮಾಡಿದ ರೈನಾ 2010ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಶ್ರೀಲಂಕಾ ವಿರುದ್ದವೇ ಪದಾರ್ಪಣೆ ಮಾಡಿದ್ದಾರೆ. ತನ್ನ ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿ ಭರವಸೆಯನ್ನು ಹುಟ್ಟುಹಾಕಿದ್ದರು.
ಐಪಿಎಲ್ ಕ್ರಿಕೆಟ್‌ನಲ್ಲಿ ಮಿಂಚು ಹರಿಸಿರುವ ರೈನಾ ಅತಿಹೆಚ್ಚು ರನ್‌ಗಳಿಸಿರುವ ಆಟಗಾರರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. 189 ಇನ್ನಿಂಗ್ಸ್‌ಗಳಿಂದ 5368ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ 189 ಸಿಕ್ಸ್ ಬಾರಿಸಿರುವ ರೈನಾ ಸಿಕ್ಸರ್ ಬಾರಿಸಿರುವ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.