ಜೂನ್ 1 ಶನಿವಾರ, ಐಸಿಸಿ ಟಿ20 ವಿಶ್ವಕಪ್ 2024ರ ಆರಂಭಕ್ಕೆ ಉತ್ಸುಕರಾಗಿದ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಇದೀಗ ಕೊನೆಗೊಳ್ಳಲಿದೆ. ಏಕೆಂದರೆ ಟಿ20 ವಿಶ್ವಕಪ್ 2024 ಜೂನ್ 2 ರಿಂದ (ಭಾನುವಾರ) ನ್ಯೂಯಾರ್ಕ್‌ನಲ್ಲಿ ಅಬ್ಬರದಿಂದ ಪ್ರಾರಂಭವಾಗಲಿದೆ.
ಈ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಇದಕ್ಕೂ ಮುನ್ನ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದ ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ.

1) ಎಬಿ ಡಿವಿಲಿಯರ್ಸ್: ದಕ್ಷಿಣ ಆಫ್ರಿಕಾದ ಮಾಜಿ ದಿಗ್ಗಜ ಆಟಗಾರ ಎಬಿ ಡಿವಿಲಿಯರ್ಸ್ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಹಿಡಿದ ಮೊದಲ ಆಟಗಾರನಾಗಿ ಉಳಿದಿದ್ದಾರೆ. ಅವರು 2007 ರಿಂದ 2016 ರ ವಿಶ್ವಕಪ್ ವರೆಗೆ 30 ಪಂದ್ಯಗಳಲ್ಲಿ ಒಟ್ಟು 23 ಕ್ಯಾಚ್‌ಗಳನ್ನು ತೆಗೆದುಕೊಂಡಿದ್ದಾರೆ.

2) ಡೇವಿಡ್ ವಾರ್ನರ್: ಆಸ್ಟ್ರೇಲಿಯಾದ ಎಡಗೈ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಹಿಡಿದ ಎರಡನೇ ಆಟಗಾರನಾಗಿದ್ದಾರೆ. ವಾರ್ನರ್ 2009 ರಿಂದ 2022 ವಿಶ್ವಕಪ್ ವರೆಗೆ 34 ಪಂದ್ಯಗಳಲ್ಲಿ ಒಟ್ಟು 21 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಈ ಬಾರಿ ಮತ್ತಷ್ಟು ಕ್ಯಾಚ್‌ಗಳನ್ನು ಹಿಡಿಯುವ ಅವಕಾಶವನ್ನು ವಾರ್ನರ್ ಪಡೆದಿದ್ದಾರೆ.

3) ಮಾರ್ಟಿನ್ ಗಪ್ಟಿಲ್: ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಹಿಡಿದಿರುವ ನ್ಯೂಜಿಲೆಂಡ್‌ನ ಮಾಜಿ ಸ್ಪೋಟಕ ಬ್ಯಾಟರ್ ಮಾರ್ಟಿನ್ ಗಪ್ಟಿಲ್ ಮೂರನೇ ಸ್ಥಾನದಲ್ಲಿದ್ದಾರೆ. ಗಪ್ಟಿಲ್ 2009 ರಿಂದ 2021 ರ ವಿಶ್ವಕಪ್ ವರೆಗೆ 28 ಪಂದ್ಯಗಳಲ್ಲಿ ಒಟ್ಟು 19 ಕ್ಯಾಚ್‌ಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

4) ಗ್ಲೆನ್ ಮ್ಯಾಕ್ಸ್‌ವೆಲ್: ಟಿ20 ವಿಶ್ವಕಪ್‌ನ ಇತಿಹಾಸದಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಹಿಡಿದ ಆಟಗಾರರ ಪೈಕಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಫೋಟಕ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ನಾಲ್ಕನೇ ಸ್ಥಾನದಲ್ಲಿದ್ದಾರೆ. 2012ರಿಂದ 2022ರ ವಿಶ್ವಕಪ್‌ವರೆಗೆ 24 ಪಂದ್ಯಗಳಲ್ಲಿ 16 ಕ್ಯಾಚ್‌ಗಳನ್ನು ಪಡೆದಿದ್ದಾರೆ.

5) ರೋಹಿತ್ ಶರ್ಮಾ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಹಿಡಿದ 5ನೇ ಆಟಗಾರನಾಗಿದ್ದಾರೆ. ಆರಂಭಿಕ ಆವೃತ್ತಿ 2007ರಿಂದ 2022ರ ಟಿ20 ವಿಶ್ವಕಪ್‌ವರೆಗೆ 39 ಪಂದ್ಯಗಳಲ್ಲಿ ಒಟ್ಟು 16 ಕ್ಯಾಚ್‌ಗಳನ್ನು ಪಡೆದಿದ್ದಾರೆ. ರೋಹಿತ್ ಒಂದೇ ಇನ್ನಿಂಗ್ಸ್‌ನಲ್ಲಿ ಗರಿಷ್ಠ 3 ಕ್ಯಾಚ್‌ಗಳನ್ನು ಹಿಡಿದಿರುವ ದಾಖಲೆ ಹೊಂದಿದ್ದಾರೆ.