ಐಪಿಎಲ್ ಆಯ್ಕೆ ಮಾಡಿದ ಆಟಗಾರರಿಗೆ ದೇಶ ಪ್ರೇಮ ಇಲ್ಲ ಎಂದರ್ಥವಲ್ಲ: ಸಿಎಸ್‌ಎ ಸಿಇಒ

ಈ ಬಾರಿಯ ಐಪಿಎಲ್ ಟೂರ್ನಿಗೆ ಮುನ್ನ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಲಭ್ಯತೆ ವಿಚಾರ ಸಾಕಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದೆ. ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ರಾಷ್ಟ್ರೀಯ ತಂಡದ ಪರವಾಗಿ ಆಡುತ್ತಾರೆಯೇ ಅಥವಾ ಐಪಿಎಲ್‌ಗೆ ತೆರಳುತ್ತಾರೆಯೇ ಎಂಬುದು ಕುತೂಹಲ ಮೂಡಿಸಿತ್ತು, ಇದಕ್ಕೆ ಕಾರಣ ದಕ್ಷಿಣ ಆಫ್ರಿಕಾ ಆಟಗಾರರಿಗೆ ಅಲ್ಲಿನ ಮಂಡಳಿ ಐಪಿಎಲ್ ಹಾಗೂ ರಾಷ್ಟ್ರೀಯ ತಂಡದ ಪರವಾಗು ಆಡುವ ವಿಚಾರವಾಗಿ ಆಟಗಾರರಿಗೆ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ನೀಡಿತ್ತು.
ಆದರೆ ತಂಡದ ಕೋಚ್ ಹಾಗು ನಾಯಕ ಮಾತ್ರ ಆಟಗಾರರು ರಾಷ್ಟ್ರೀಯ ತಂಡದ ಪರವಾಗಿ ಆಡಲು ಸಾಕಷ್ಟು ಕಸರತ್ತು ನಡೆಸಿದ್ದರು. ಅಂತಿಮವಾಗಿ ಐಪಿಎಲ್‌ನಲ್ಲಿ ಒಪ್ಪಂದ ಹೊಂದಿರುವ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ಬಾಂಗ್ಲಾದೇಶ ವಿರುದ್ಧದ ಸರಣಿಯಿಂದ ಹಿಂದೆ ಸರಿದು ಐಪಿಎಲ್‌ನಲ್ಲಿ ಆರಂಭದಿಂದಲೇ ಭಾಗಿಯಾಗುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ನೂತನ ಕಾರ್ಯನಿರ್ವಾಹಕ ಅಧಿಕಾರಿ ಫೊಲೆಟ್ಸಿ ಮೊಸೆಕಿ ಆಟಗಾರರ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಐಪಿಎಲ್ ಟೂರ್ನಿ ಹಾಗೂ ದಕ್ಷಿಣ ಆಫ್ರಿಕಾದ ಸರಣಿ ಒಂದೇ ಸಮಯದಲ್ಲಿ ಆಯೋಜನೆಯಾಗುತ್ತಿರುವ ಕಾರಣದಿಂದಾಗಿ ಈ ಆಟಗಾರರು ಯಾವುದಾದರೂ ಒಂದು ತಂಡದ ಪರವಾಗಿ ಆಡುವ ನಿರ್ಧಾರವನ್ನು ತೆಗೆದುಕೊಳ್ಳುವ ಅನಿವಾರ್ಯತೆ ಉಂಟಾಗಿದೆ ಎಂದುಬು ಅಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
"ಐಪಿಎಲ್‌ನಿಂದ ಆಟಗಾರರ ಗಳಿಸುತ್ತಿರುವ ಹಣ ಕ್ರಿಕೆಟ್‌ನ ನಂತರ ಅವರ ಜೀವನ ನಡೆಸಲು ಸಾಕಷ್ಟು ಉತ್ತಮಗೊಳಿಸುತ್ತದೆ. ಐಪಿಎಲ್ ಪರವಾಗಿ ಅವರು ಆಡುವುದನ್ನು ಆಯ್ಕೆ ಮಾಡಿದರೂ ಅಂತಾರಾಷ್ಟ್ರೀಯ ಕ್ರಿಕೆಟ್‌ಅನ್ನು ಅವರೆಲ್ಲರೂ ಸಾಕಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆ. ಅವರು ಐಪಿಎಲ್ ಪರವಾಗಿ ಆಡಲು ಬಯಸುತ್ತಿದ್ದಾರೆ ಎಂದರೆ ಅವರಲ್ಲಿ ದೇಶ ಭಕ್ತಿ ಇಲ್ಲ ಎಂದರ್ಥವಲ್ಲ" ಎಂದು ಸಿಎಸ್‌ಎಯ ಸಿಇಒ ಫೊಲೆಟ್ಸಿ ಮೊಸೆಕಿ ಅಭಿಪ್ರಾಯಪಟ್ಟಿದ್ದಾರೆ
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಯೋಜಿಸಿದ್ದು ಈ ಸರಣಿ ಮಾರ್ಚ್ 31ರಿಂದ ಆರಂಭವಾಗಲಿದೆ. ಆದರೆ ಐಪಿಎಲ್ ಮಾರ್ಚ್ 26ರಿಂದ ಆರಂಭವಾಗಲಿರುವ ಕಾರಣ ಆರಂಭಿಕ ಹಂತದ ಐಪಿಎಲ್ ಪಂದ್ಯಗಳಿಗೆ ದಕ್ಷಿಣ ಆಪ್ರಿಕಾ ಆಟಗಾರರು ಅಲಭ್ಯವಾಗುವ ಅನಿವಾರ್ಯತೆ ಉಂಟಾಗಿತ್ತು. ಆದರೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಆಟಗಾರರಿಗೆ ದೇಶದ ಪರವಾಗಿ ಆಡುವ ಹಾಗೂ ಐಪಿಎಲ್‌ನಲ್ಲಿ ಭಾಗಿಯಾಗುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಆಟಗಾರರಿಗೆ ಸಂಪೂರ್ಣ ಸ್ವಾತಂತ್ಯವನ್ನು ನೀಡಿತ್ತು. ಹೀಗಾಗಿ ಬಹುತೇಕ ಆಟಗಾರರು ಐಪಿಎಲ್ ಆಯ್ಕೆ ಮಾಡುವ ಮನಸ್ಸು ಮಾಡಿದ್ದರು.
ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಆಟಗಾರರಿಗೆ ಆಯ್ಕೆಯ ಅವಕಾಶವನ್ನು ನೀಡಿದ ಕಾರಣ ದಕ್ಷಿಣ ಆಫ್ರಿಕಾ ತಂಡದ ನಾಯಕ ಡೀನ್ ಎಲ್ಗರ್ ಹಾಗೂ ತಂಡದ ಕೋಚ್ ಮಾರ್ಕ್ ಬೌಷರ್ ಹಲವು ಬಾರಿ ಆಟಗಾರರೊಂದಿಗೆ ಮಾತುಕತೆ ನಡೆಸಿ ಬಾಂಗ್ಲಾ ವಿರುದ್ಧಧ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲು ವಿನಂತಿಸಿದರು ಕೂಡ ಅದರಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ. ಬಳಿಕ ಟೆಸ್ಟ್ ನಾಯಕ ಡೀನ್ ಎಲ್ಗರ್ ಆಟಗಾರರಿಗೆ ಇದು ತಮ್ಮ ತಂಡದ ಮೇಲಿನ ನಿಷ್ಠೆಯನ್ನು ಸಾಬೀತುಪಡಿಸಲು ಇರುವ ಅವಕಾಶ ಎಂದು ಹೇಳುವ ಮೂಲಕ ಭಾವನಾತ್ಮಕವಾಗಿಯೂ ಆಟಗಾರರ ಮನಸ್ಸು ಬದಲಿಸುವ ಪ್ರಯತ್ನ ನಡೆಸಿದರು. ಆದರೆ ಅಂತಿಮವಾಗಿ ಐಪಿಎಲ್‌ನಲ್ಲಿ ಒಪ್ಪಂದ ಹೊಂದಿರುವ ಆಟಗಾರರು ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಕಗಿಸೊ ರಬಾಡ (ಪಂಜಾಬ್ ಕಿಂಗ್ಸ್), ಫಾಫ್ ಡು ಪ್ಲೆಸಿಸ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು), ಕ್ವಿಂಟನ್ ಡಿ ಕಾಕ್ (ಲಕ್ನೋ ಸೂಪರ್ ಜೈಂಟ್ಸ್), ಅನ್ರಿಚ್ ನಾರ್ನಿಯಾ (ಡೆಲ್ಲಿ ಕ್ಯಾಪಟಿಲ್ಸ್), ಮಾರ್ಕೊ ಜಾನ್ಸೆನ್ (ಸನ್‌ರೈರ್ಸ್ ಹೈದರಾಬಾದ್), ಡೇವಿಡ್ ಮಿಲ್ಲರ್ (ಗುಜರಾತ್ ಟೈಟನ್ಸ್), ಡೆವಾಲ್ಡ್ ಬ್ರೆವಿಸ್ (ಮುಂಬೈ ಇಂಡಿಯನ್ಸ್), ಏಡೆನ್ ಮಾರ್ಕ್ರಾಮ್ (ಸನ್‌ರೈರರ್ಸ್ ಹೈದರಾಬಾದ್), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (ರಾಜಸ್ಥಾನ್ ರಾಯಲ್ಸ್), ಲುಂಗಿ ಎನ್‌ಗಿಡಿ (ಡೆಲ್ಲಿ ಕ್ಯಾಪಿಟಲ್ಸ್), ಡ್ವೈನ್ ಪ್ರಿಟೋರಿಯಸ್ (ಚೆನ್ನೈ ಸೂಪರ್ ಕಿಂಗ್ಸ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications