ನಾಟ್‌ವೆಸ್ಟ್ ಜಯದ ವಾರ್ಷಿಕೋತ್ಸವದಂದೇ ಮಹಮ್ಮದ್ ಕೈಫ್ ನಿವೃತ್ತಿ

ನವದೆಹಲಿ, ಜುಲೈ 13: ಕ್ರಿಕೆಟ್ ಜಗತ್ತು ಮರೆತೇ ಬಿಟ್ಟಿದ್ದ ನಾಟ್‌ವೆಸ್ಟ್ ಸರಣಿಯ ಹೀರೋ ಮಹಮ್ಮದ್ ಕೈಫ್ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.
ಮಹಮ್ಮದ್ ಕೈಫ್ ಭಾರತದ ರಾಷ್ಟ್ರೀಯ ತಂಡದಲ್ಲಿ ಕೊನೆಯ ಬಾರಿ ಆಡಿದ್ದು 12 ವರ್ಷದ ಹಿಂದೆ. ರಣಜಿ ಪಂದ್ಯಗಳಲ್ಲಿ ಆಟ ಮುಂದುವರಿಸಿದ್ದ ಕೈಫ್, ರಾಜಕಾರಣದ ಪ್ರವೇಶದ ಪ್ರಯತ್ನದಲ್ಲಿ ವಿಫಲರಾಗಿದ್ದರು.
ಮಿಂಚಿನ ಫೀಲ್ಡಿಂಗ್‌ಗೆ ಹೆಸರುವಾಸಿಯಾಗಿದ್ದ ಕೈಫ್, 2002ರಲ್ಲಿ ಇಂಗ್ಲೆಂಡ್ ವಿರುದ್ಧದ ಐತಿಹಾಸಿಕ ನಾಟ್‌ವೆಸ್ಟ್ ಸರಣಿಯ ಫೈನಲ್‌ನಲ್ಲಿ ಅಜೇಯ 87 ಸಿಡಿಸಿ ಭಾರತಕ್ಕೆ ಅವಿಸ್ಮರಣೀಯ ಜಯ ತಂದುಕೊಟ್ಟಿದ್ದರು.
ವಿಶೇಷವೆಂದರೆ ಆ ಪಂದ್ಯ ನಡೆದಿದ್ದು 2002ರ ಜುಲೈ 13ರಂದು. ಸರಿಯಾಗಿ 16 ವರ್ಷದ ಬಳಿಕ ಅದೇ ದಿನದಂದೇ ಕೈಫ್ ನಿವೃತ್ತರಾಗಿದ್ದಾರೆ.
ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ 1980ರಲ್ಲಿ ಜನಿಸಿದ್ದ 37 ವರ್ಷದ ಕೈಫ್, 2000ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾದಾರ್ಪಣೆ ಮಾಡಿದ್ದರು.
2002ರಲ್ಲಿ ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವಾಡಿದ್ದರು. 2006 ರ ನವೆಂಬರ್‌ನಲ್ಲಿ ಅವರು ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು.
ಸತತ ವೈಫಲ್ಯ ಹಾಗೂ ಸ್ಪರ್ಧೆಯ ಕಾರಣ ಅವರು ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದರು.
ಐಪಿಎಲ್‌ನಲ್ಲಿಯೂ ಕೆಲ ವರ್ಷ ಆಡಿದ್ದ ಕೈಫ್, ರಾಜಸ್ಥಾನ ರಾಯಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡಿದ್ದರು.
ರಣಜಿಯಲ್ಲಿ ಉತ್ತರ ಪ್ರದೇಶ, ಆಂಧ್ರಪ್ರದೇಶ ಹಾಗೂ ಇತ್ತೀಚೆಗೆ ಛತ್ತೀಸಗಡ ತಂಡಗಳ ಪರವಾಗಿ ಆಡಿದ್ದರು.
2000ನೇ ಇಸವಿಯಲ್ಲಿ ಭಾರತದ ಅಂಡರ್ 19 ತಂಡ ಮೊದಲ ವಿಶ್ವಕಪ್ ಗೆದ್ದಾಗ ಮಹಮ್ಮದ್ ಕೈಫ್ ಮತ್ತು ಯುವರಾಜ್ ಸಿಂಗ್ ಖ್ಯಾತಿ ಗಳಿಸಿದ್ದರು. ಬಳಿಕ ಇಬ್ಬರೂ ಹಿರಿಯರ ತಂಡಕ್ಕೂ ಸೇರುವ ಅವಕಾಶ ಗಿಟ್ಟಿಸಿಕೊಂಡಿದ್ದರು.
ಕೈಫ್ ನಾಯಕತ್ವದಲ್ಲಿ ಉತ್ತರ ಪ್ರದೇಶ ತಂಡ ರಣಜಿ ಟ್ರೋಫಿಯನ್ನು ಸಹ ಗೆದ್ದುಕೊಂಡಿದೆ.
ಕೈಫ್ ನಿವೃತ್ತಿ ಪತ್ರ
'ಪ್ರಥಮದರ್ಜೆಯ ಎಲ್ಲ ಮಾದರಿಗಳ ಕ್ರಿಕೆಟ್‌ನಿಂದ ನನ್ನ ನಿವೃತ್ತಿಯನ್ನು ಘೋಷಿಸುತ್ತಿದ್ದೇನೆ' ಎಂದು ಕೈಫ್, ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಹಾಗೂ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಅವರಿಗೆ ಇಮೇಲ್ ರವಾನಿಸಿದ್ದಾರೆ.
'ಇಂದು ನಾನು ನಿವೃತ್ತಿ ಪಡೆಯುತ್ತಿದ್ದು, 16 ವರ್ಷ ಹಿಂದಿನ ಐತಿಹಾಸಿಕ ನಾಟ್‌ವೆಸ್ಟ್ ಸರಣಿಯ ಭಾಗವಾಗಿದ್ದಕ್ಕೆ ನನಗೆ ಹೆಮ್ಮೆ ಇದೆ.
ಭಾರತ ತಂಡದ ಕ್ಯಾಪ್ ಧರಿಸಲು ಅವಕಾಶ ಸಿಕ್ಕಿದಕ್ಕೆ ಕೃತಜ್ಞನಾಗಿದ್ದೇನೆ. ಭಾರತಕ್ಕಾಗಿ 125 ಏಕದಿನ ಹಾಗೂ 13 ಟೆಸ್ಟ್ ಪಂದ್ಯಗಳನ್ನು ಆಡಿದ ಹಾಗೂ ಅನೇಕ ನೆನಪುಗಳೊಂದಿಗೆ ನಿವೃತ್ತಿಯಾಗುತ್ತಿದ್ದೇನೆ ಎಂದು ಕೈಫ್ ಹೇಳಿದ್ದಾರೆ.

ಅದ್ಭುತ ಫೀಲ್ಡರ್
ಭಾರತದ ಪರ ಐದು ವರ್ಷ ಆಡಿದ್ದ ಕೈಫ್, 30 ಯಾರ್ಡ್ ವೃತ್ತದೊಳಗೆ ಅದ್ಭುತ ಫೀಲ್ಡಿಂಗ್‌ಗೆ ಹೆಸರುವಾಸಿಯಾಗಿದ್ದರು. ಕವರ್‌ನಲ್ಲಿ ಕೈಫ್ ಅನೇಕ ಬೌಂಡರಿಗಳನ್ನು ತಡೆದಿದ್ದರಲ್ಲದೆ, ಕಷ್ಟಸಾಧ್ಯದ ಕ್ಯಾಚ್‌ಗಳನ್ನು ಹಿಡಿದಿದ್ದರು.
ಸೌರವ್ ಗಂಗೂಲಿ ಅವರ ನಾಯಕತ್ವದ ತಂಡದಲ್ಲಿ ಕೈಫ್ ಹಾಗೂ ಯುವರಾಜ್ ಸಿಂಗ್ ಫೀಲ್ಡಿಂಗ್ ಜೋಡಿ ಭಾರತ ತಂಡದ ಬೆನ್ನೆಲುಬಾಗಿತ್ತು.
ನಾಟ್‌ವೆಸ್ಟ್ ಪಂದ್ಯವಲ್ಲದೆ, ಜಿಂಬಾಬ್ವೆ ವಿರುದ್ಧದ ಶತಕವೂ ಅವರ ಸದಾ ನೆನಪಿನಲ್ಲಿ ಇಡುವ ಇನ್ನಿಂಗ್ಸ್‌ಗಳಲ್ಲಿ ಒಂದು. ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಕೈಫ್ ಅಜೇಯ 111 ರನ್ ಗಳಿಸಿ ಆಸರೆಯಾಗಿದ್ದರು.
ಸತತ ವೈಫಲ್ಯ
ಆದರೆ, ಬ್ಯಾಟಿಂಗ್‌ನಲ್ಲಿ ಸತತ ವೈಫಲ್ಯ ಅನುಭವಿಸಿದ ಕೈಫ್, ನೀಡಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ. 2006ರ ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಅವರಿಗೆ ತಂಡದಲ್ಲಿ ಸ್ಥಾನ ಸಿಗಲಿಲ್ಲ.
ನಂತರ ದೇಶಿ ಕ್ರಿಕೆಟ್‌ನಲ್ಲಿ ಕೈಫ್ ಸಾಧಾರಣ ಪ್ರದರ್ಶನ ತೋರಿಸಿದ್ದರು. ಹೀಗಾಗಿ ರಾಷ್ಟ್ರೀಯ ತಂಡದಲ್ಲಿ ಮತ್ತೆ ಆಡುವ ಅವಕಾಶ ಅವರಿಗೆ ದೊರಕಲಿಲ್ಲ.
ಈಗಾಗಲೇ ಕ್ರಿಕೆಟ್ ವಿಶ್ಲೇಷಕರಾಗಿ ಹಾಗೂ ವೀಕ್ಷಕ ವಿವರಣೆಗಾರರಾಗಿ ಗುರುತಿಸಿಕೊಂಡಿದ್ದಾರೆ.

ವೈಯಕ್ತಿಕ ವಿವರ
ಮಹಮ್ಮದ್ ಕೈಫ್
ಬಲಗೈ ಬ್ಯಾಟ್ಸ್‌ಮನ್
ಜನನ: ಉತ್ತರ ಪ್ರದೇಶದ ಅಲಹಾಬಾದ್
ವಯಸ್ಸು: 37 (1980, ಡಿಸೆಂಬರ್ 1)
ಪ್ರತಿನಿಧಿಸಿದ ತಂಡಗಳು: ಭಾರತ, ಭಾರತ ಅಂಡರ್ 19, ಉತ್ತರ ಪ್ರದೇಶ, ಆಂಧ್ರಪ್ರದೇಶ, ಛತ್ತೀಸಗಡ, ರಾಜಸ್ಥಾನ ರಾಯಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಯಲ್ ಚಾಲೆಂಜರ್ಸ್.
ಏಕದಿನ ಪಂದ್ಯದಲ್ಲಿ ಸಾಧನೆ
ಪಂದ್ಯ: 125
ರನ್: 2,753
ಸರಾಸರಿ: 32.01
ಗರಿಷ್ಠ: 111
ಶತಕ: 2
ಅರ್ಧಶತಕ: 17
ಕ್ಯಾಚ್: 55
ಟೆಸ್ಟ್ ಸಾಧನೆ
ಪಂದ್ಯ: 13
ರನ್: 624
ಸರಾಸರಿ: 32.84
ಗರಿಷ್ಠ: 148*
ಶತಕ: 1
ಅರ್ಧಶತಕ:3
ಕ್ಯಾಚ್:14
ಟಿ20ಯಲ್ಲಿ ಸಾಧನೆ
ಪಂದ್ಯ: 49
ರನ್: 723
ಸರಾಸರಿ: 20.65
ಗರಿಷ್ಠ: 68
ಶತಕ: 0
ಅರ್ಧಶತಕ:4
ಕ್ಯಾಚ್: 23
ಪ್ರಥಮ ದರ್ಜೆ
ಪಂದ್ಯ: 129
ರನ್: 7581
ಸರಾಸರಿ: 41.88
ಗರಿಷ್ಠ: 202*
ಶತಕ: 15
ಅರ್ಧಶತಕ:45
ಕ್ಯಾಚ್: 116
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications