
ಮುಂಬೈ, ಜುಲೈ 31: ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಬಾಲಿವುಡ್ ನಟಿ, ಡ್ಯಾನ್ಸರ್ ನತಾಶಾ ಸ್ಟ್ಯಾಂಕೋವಿಕ್ ಗಂಡು ಮಗುವಿಗೆ ಜನ್ಮವಿತ್ತಿದ್ದಾರೆ. ಅಪ್ಪ-ಅಮ್ಮ ಆಗುತ್ತಿರುವ ಜೋಡಿಗೆ ಕ್ರಿಕೆಟ್ ಲೋಕದ ಸೆಲೆಬ್ರಿಟಿಗಳು ಮತ್ತು ಅನೇಕ ಖ್ಯಾತರು ಶುಭಾಶಯಗಳನ್ನು ತಿಳಿಸಿದ್ದಾರೆ.
ಗುರುವಾರ (ಜುಲೈ 30) ಹಾರ್ದಿಕ್ ಪಾಂಡ್ಯ ತನಗೆ ಗಂಡು ಮಗುವಾಗಿರುವ ಖುಷಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಮಗುವಿನ ಪುಟಾಣಿ ಕೈಗಳ ಚಿತ್ರವನ್ನು ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದ ಪಾಂಡ್ಯ, 'ನಮಗೆ ಗಂಡು ಮಗುವನ್ನು ದೇವರು ಆಶೀರ್ವದಿಸಿದ್ದಾರೆ,' ಎಂದು ಬರೆದುಕೊಂಡಿದ್ದರು.
ತಂದೆಯಾಗುತ್ತಿರುವ ಸಂಭ್ರಮ ಹಂಚಿಕೊಂಡಿರುವ ಹಾರ್ದಿಕ್-ನತಾಶ ಜೋಡಿಗೆ ಕನ್ನಡಿಗ ಕೆಎಲ್ ರಾಹುಲ್, ಶ್ರೇಯಸ್ ಐಯ್ಯರ್, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸ್ಪಿನ್ನರ್ ಯುಜುವೇಂದ್ರ ಚಾಹಲ್, ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್, ನಟಿ ಆತಿಯಾ ಶೆಟ್ಟಿ, ನಟಿ ಸೋನಾ ಚೌಹಾಣ್, ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಝಾ ಸೇರಿದಂತೆ ಅನೇಕರು ಶುಭ ಕೋರಿದ್ದಾರೆ.

ಕಳೆದ ಜೂನ್‌ನಲ್ಲೇ ಹಾರ್ದಿಕ್, ತನ್ನ ಗೆಳತಿ ನತಾಶಾ ಗರ್ಭಿಣಿಯಾಗಿರುವ ವಿಚಾರವನ್ನು ಸಾಮಾಜಿಕ ತಾಲತಾಣದಲ್ಲಿ ಬಹಿರಂಗಪಡಿಸಿದ್ದ ಹಾರ್ದಿಕ್ ತಾವು ಸರಳವಾಗಿ ಮದುವೆಯಾಗಿರುವುದಾಗಿ ತಿಳಿಸಿದ್ದರು. ನತಾಶಾ-ಹಾರ್ದಿಕ್ ಪಾಂಡ್ಯ ನಿಶ್ಚಿತಾರ್ಥವಷ್ಟೇ ನಡೆದಿದ್ದರಿಂದ ಮದುವೆಗೂ ಮುನ್ನವೇ ಅಪ್ಪನಾಗುತ್ತಿರುವ ವಿಚಾರ ಬಹಿರಂಗಪಡಿಸಿದ್ದ ಪಾಂಡ್ಯ ಅವರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದರು.