ಎಲ್ಲಾ ಮಾದರಿಯ ಕ್ರಿಕೆಟ್‍ಗೂ ಎಬಿಡಿ ನಿವೃತ್ತಿ: ಮಿಸ್ಟರ್ 360ಗೆ ಧನ್ಯವಾದ ತಿಳಿಸಿದ ಕ್ರಿಕೆಟ್ ಜಗತ್ತು

ಮಿಸ್ಟರ್ 360, ಆಪತ್ಬಾಂಧವ, ಏಲಿಯನ್, ಫಿನಿಶರ್ ಎಂದು ಖ್ಯಾತಿಯನ್ನು ಪಡೆದಿದ್ದ ಕ್ರಿಕೆಟ್ ಜಗತ್ತು ಕಂಡ ಅತ್ಯದ್ಭುತ ಪ್ರತಿಭೆ ಎಬಿ ಡಿವಿಲಿಯರ್ಸ್ ಇಂದು ( ನವೆಂಬರ್ 19 ) ಎಲ್ಲಾ ಮಾದರಿಯ ಕ್ರಿಕೆಟ್‌ಗೂ ನಿವೃತ್ತಿಯನ್ನು ಘೋಷಿಸಿದ್ದಾರೆ. ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಯ ಮೂಲಕ ನಿವೃತ್ತಿಯ ನಿರ್ಧಾರವನ್ನು ಎಬಿ ಡಿವಿಲಿಯರ್ಸ್ ಪ್ರಕಟಿಸಿದ್ದಾರೆ.
ಅಂತಾರಾಷ್ಟ್ರೀಯ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಿ ಕಾರ್ಯನಿರ್ವಹಿಸಿದ್ದ ಎಬಿ ಡಿವಿಲಿಯರ್ಸ್ 2017ರಲ್ಲಿ ನಾಯಕ ಸ್ಥಾನದಿಂದ ಕೆಳಗಿಳಿದಿದ್ದರು ಮತ್ತು 2018ರ ಮೇ ತಿಂಗಳಿನಲ್ಲಿ ಎಬಿ ಡಿವಿಲಿಯರ್ಸ್ ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿಯನ್ನು ಘೋಷಣೆ ಮಾಡಿದ್ದರು. ಹೀಗೆ ಅಂತರರಾಷ್ಟ್ರೀಯ ಕ್ರಿಕೆಟ್‍ನಿಂದ 3 ವರ್ಷಗಳ ಹಿಂದೆಯೇ ನಿವೃತ್ತಿ ಪಡೆದಿದ್ದ ಎಬಿ ಡಿವಿಲಿಯರ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಭಾಗವಹಿಸುತ್ತಾ ಬಂದಿದ್ದರು. ಈ ವರ್ಷ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ತಮ್ಮ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿದಿದ್ದ ಎಬಿ ಡಿವಿಲಿಯರ್ಸ್ ಹಲವಾರು ವರ್ಷಗಳಿಂದ ಬೆಂಗಳೂರು ಅಭಿಮಾನಿಗಳನ್ನು ರಂಜಿಸುತ್ತಾ ಬಂದಿದ್ದರು.
ಆದರೆ ಇದೀಗ ಎಬಿ ಡಿವಿಲಿಯರ್ಸ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ನೋಡಬಹುದಾಗಿದ್ದ ಅವಕಾಶವೂ ಕೈ ತಪ್ಪಿದ್ದು ಎಬಿ ಡಿವಿಲಿಯರ್ಸ್ ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗಳು ಸೇರಿದಂತೆ ಎಲ್ಲ ಮಾದರಿಯ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದ್ದಾರೆ. "ಬಾಲ್ಯದಲ್ಲಿ ಸೋದರರ ಜೊತೆಗೆ ಕ್ರಿಕೆಟ್ ಆಡಲು ಆರಂಭಿಸಿದಾಗಿನಿಂದ ಶುದ್ಧ ಆನಂದ ಹಾಗೂ ಉತ್ಸಾಹದಿಂದಲೇ ಈವರೆಗೂ ಆಡಿದ್ದೇನೆ. ಈಗ 37ನೇ ವಯಸ್ಸಿನಲ್ಲಿ ನನಗೆ ತುಂಬಾ ಪ್ರಖರವಾಗಿ ಬೆಳಗಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಈ ಸತ್ಯವನ್ನು ನಾನು ಒಪ್ಪಿಕೊಳ್ಳಬೇಕಿದೆ. ಇದು ತಕ್ಷಣದ ನಿರ್ಧಾರದಂತೆ ಅನಿಸಿದರೂ ಈ ನಿರ್ಧಾರವನ್ನು ತೆಗೆದುಕೊಳ್ಳಲು ನಾನು ಸಮಯ ತೆಗೆದುಕೊಂಡಿದ್ದೇನೆ. ಕ್ರಿಕೆಟ್ ನನ್ನ ಮೇಲೆ ಅಸಾಧಾರಣವಾದ ಪ್ರಭಾವ ಬೀರಿದೆ" ಎಂದು ಎಬಿ ಡಿವಿಲಿಯರ್ಸ್ ಟ್ವಿಟ್ಟರ್‌ನಲ್ಲಿ ತಮ್ಮ ನಿವೃತ್ತಿಯನ್ನು ಘೋಷಿಸುತ್ತಾ ಬರೆದುಕೊಂಡಿದ್ದಾರೆ.
ಹೀಗೆ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿರುವ ಎಬಿ ಡಿವಿಲಿಯರ್ಸ್ ಅವರಿಗೆ ಕ್ರಿಕೆಟ್ ಜಗತ್ತು ಈ ಕೆಳಕಂಡಂತೆ ಪ್ರತಿಕ್ರಿಯಿಸುವುದರ ಮೂಲಕ ಧನ್ಯವಾದಗಳನ್ನು ತಿಳಿಸಿದೆ..
ಎಬಿ ಡಿವಿಲಿಯರ್ಸ್ ಅವರ ಬ್ಯಾಟಿಂಗ್ ವೈಖರಿಯನ್ನು ತುಂಬ ಪ್ರೀತಿಯಿಂದ ನೋಡುತ್ತಿದ್ದೆವು. ಕ್ರಿಕೆಟ್‍ನ ಯಾವುದೇ ಮಾದರಿಯಲ್ಲೂ ಎಬಿ ಡಿವಿಲಿಯರ್ಸ್ ಅತ್ಯುತ್ತಮ ಎಂದು ವಾದ ಮಾಡುವಂತಹ ಆಟಗಾರನಾಗಿದ್ದರು. ಎಬಿ ಡಿವಿಲಿಯರ್ಸ್ ಓರ್ವ ದಂತಕತೆ ಎಂದು ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಬರೆದುಕೊಂಡಿದ್ದಾರೆ.
ನನ್ನ ಕ್ರಿಕೆಟ್ ಜೀವನದ ಆರಂಭದ ದಿನಗಳಲ್ಲಿ ನಿಮ್ಮ ಆಟವನ್ನು ನೋಡುತ್ತಾ ಬೆಳೆದೆ, ನಂತರ ನಿಮ್ಮ ವಿರುದ್ಧವೇ ಪಂದ್ಯಗಳನ್ನಾಡಿದ್ದು ಗೌರವದ ವಿಷಯ. ಎಬಿ ಡಿವಿಲಿಯರ್ಸ್ ನಿಮಗೆ ಶುಭವಾಗಲಿ, ನೀವು ಕ್ರಿಕೆಟ್‍ಗೆ ನೀಡಿದ ಕೊಡುಗೆಗಳಿಗೆ ಧನ್ಯವಾದಗಳು ಎಂದು ಶ್ರೇಯಸ್ ಐಯ್ಯರ್ ಬರೆದುಕೊಂಡಿದ್ದಾರೆ.
ಇಂಗ್ಲೆಂಡ್ ತಂಡದ ಆಟಗಾರ ಲಿಯಾಮ್ ಲಿವಿಂಗ್ ಸ್ಟನ್ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಎಬಿ ಡಿವಿಲಿಯರ್ಸ್ ನಿವೃತ್ತಿ ವಿಷಯದ ಕುರಿತಾಗಿ ಟ್ವೀಟ್ ಮಾಡಿದ್ದು ತನ್ನ ಪ್ರದರ್ಶನದಿಂದ ಆಟವನ್ನೇ ಬದಲಾಯಿಸಿದಂತಹ ದಂತಕತೆ ಎಂದು ಬರೆದುಕೊಂಡಿದ್ದಾರೆ.
ನಿವೃತ್ತಿಯ ಶುಭಾಶಯಗಳು ಎಬಿ ಡಿ ವಿಲಿಯರ್ಸ್, ಕ್ರಿಕೆಟ್ ಜಗತ್ತು ಕಂಡ ಅತ್ಯುತ್ತಮರಲ್ಲಿ ನೀವೊಬ್ಬರು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಲಸಿತ್ ಮಾಲಿಂಗ ಟ್ವೀಟ್ ಮಾಡಿದ್ದಾರೆ.
ನಿಮ್ಮ ಅಪೂರ್ವ ಕ್ರಿಕೆಟ್ ವೃತ್ತಿ ಜೀವನಕ್ಕೆ ಅಭಿನಂದನೆಗಳು ಎಬಿ ಡಿವಿಲಿಯರ್ಸ್, ಆಧುನಿಕ ಕ್ರಿಕೆಟ್ ಜಗತ್ತಿನಲ್ಲಿ ಅತಿ ಹೆಚ್ಚು ಪ್ರೀತಿ ಮತ್ತು ಮೆಚ್ಚುಗೆಗಳನ್ನು ಪಡೆದ ಕ್ರಿಕೆಟಿಗರಲ್ಲಿ ನೀವೂ ಒಬ್ಬರು. ನಿಮಗೆ ನಿವೃತ್ತಿಯ ಶುಭಾಶಯಗಳು ಎಂದು ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದು ಎಬಿ ಡಿವಿಲಿಯರ್ಸ್ ಮಿಸ್ಟರ್ 360 ಎಂಬ ವಿಶೇಷವಾದ ಮೀಮ್ ಹಂಚಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications