
ಕೇಪ್‌ಟೌನ್, ಆಗಸ್ಟ್ 17: ಕ್ರಿಕೆಟ್ ದಕ್ಷಿಣ ಆಫ್ರಿಕಾದ (ಸಿಎಸ್‌ಎ) ಅಧ್ಯಕ್ಷ ಕ್ರಿಸ್ ನೆಂಜಾನಿ ತಕ್ಷಣದಿಂದಲೇ ರಾಜೀನಾಮೆ ನೀಡಿದ್ದಾರೆ. ತನ್ನ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದರಿಂದ ನೆಂಜಾನಿ ತನ್ನ ಕರ್ತವ್ಯದಿಂದ ಕೆಳಗಿಳಿದಿರುವುದಾಗಿ ತಿಳಿದು ಬಂದಿದೆ.
ಮಾಹಿತಿಯ ಪ್ರಕಾರ, ನೆಂಜಾನಿ ಅವರು ಕಳೆದ ಶುಕ್ರವಾರವೇ ಜವಾಬ್ದಾರಿಯಿಂದ ಕೆಳಗಿಳಿದಿದ್ದಾರೆ. ವಾರ್ಷಿಕ ಸಭೆಗೆ 1 ತಿಂಗಳು ಬಾಕಿಯಿರುವಾಗಲೇ ಅಂದರೆ ಸೆಪ್ಟೆಂಬರ್ 5ಕ್ಕೂ ಮೊದಲೇ ನೆಂಜಾನಿ ರಾಜೀನಾಮೆ ನೀಡಿದ್ದಾರೆ. 2019ರಲ್ಲಿ ನೆಂಜಾನಿ ಅವರ ಕಾರ್ತವ್ಯವನ್ನು 12 ತಿಂಗಳ ಕಾಲ ಹೆಚ್ಚಿಸಲಾಗಿತ್ತು.
'ನೆಂಜಾನಿ ಅವರು ಅಮೂಲ್ಯವಾದ ನಾಯಕತ್ವ, ಒಳನೋಟ, ಸಹಾಯ ಮತ್ತು ನಿರ್ದೇಶನದ ಮೂಲಕ ದಕ್ಷಿಣ ಆಫ್ರಿಕಾ ಕ್ರಿಕೆಟ್‌ಗೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ,' ದಕ್ಷಿಣ ಆಫ್ರಿಕಾ ಕ್ರಿಕೆಟ್ ತನ್ನ ಹೇಳಿಕೆಯ ಮೂಲಕ ತಿಳಿಸಿದೆ.
2013ರಿಂದ ನೆಂಜಾನಿ ಅವರು ದಕ್ಷಿಣ ಆಫ್ರಿಕಾ ಕ್ರಿಕೆಟ್ ಅನ್ನು ಮುನ್ನಡೆಸಿದ್ದರು. ಸದ್ಯ ತೆರವಾಗಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ಅಧ್ಯಕ್ಷರ ಸ್ಥಾನಕ್ಕೆ ಬೇರೆಯವರನ್ನು ಆಯ್ಕೆ ಮಾಡುವವರೆಗೆ ಉಪಾಧ್ಯಕ್ಷ ಬೆರೆಸ್‌ಫೋರ್ಡ್ ವಿಲಿಯಮ್ಸ್ ಅವರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಎಸ್‌ಸಿಎ ಹೇಳಿದೆ.