IPL 2025 KKR vs CSK: ಡೆವಾಲ್ಡ್ ಬ್ರೆವಿಸ್ ಅಬ್ಬರದ ಆಟ ಚೆನ್ನೈಗೆ ಜಯ: ಕೆಕೆಆರ್ ಪ್ಲೇ ಆಫ್ ಆಸೆ ಕ್ಷೀಣ
ಮಧ್ಯಮ ಕ್ರಮಾಂಕದಲ್ಲಿ ಡೆವಾಲ್ಡ್ ಬ್ರೆವಿಸ್ (52) ಹಾಗೂ ಶಿವಂ ದುಬೆ (45) ಇವರ ಜವಾಬ್ದಾರಿಯುತ ಆಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ 18ನೇ ಆವೃತ್ತಿಯ 57ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮಣಿಸಿದೆ. ಇನ್ನು ಕೆಕೆಆರ್ ತಂಡ ಪ್ಲೇ ಆಫ್‌ಗೆ ತಲುಪುವುದು ಕಷ್ಟವಾಗಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 179 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಚೆನ್ನೈ 19.4 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 183 ರನ್ ಸೇರಿಸಿ ಜಯ ಸಾಧಿಸಿತು. ಈ ಮೂಲಕ ಚೆನ್ನೈ ಟೂರ್ನಿಯಲ್ಲಿ ಮೂರನೇ ಗೆಲುವಿನ ನಗೆ ಬೀರಿತು.

ಪವರ್ ಪ್ಲೇನಲ್ಲಿ 5 ವಿಕೆಟ್
ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಆಯುಷ್ ಮಾತ್ರೆ ಹಾಗೂ ಡ್ವೇನ್ ಕಾನ್ವೆ ಸೊನ್ನೆ ಸುತ್ತಿದರು. ಇನ್ನು ದೇಶಿಯ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಉರ್ವಿಲ್ ಪಟೇಲ್ 1 ಬೌಂಡರಿ, 4 ಸಿಕ್ಸರ್ ಸಹಾಯದಿಂದ 31 ರನ್ ಸಿಡಿಸಿ ಔಟ್ ಆದರು. ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ (8), ರವೀಂದ್ರ ಜಡೇಜಾ (19) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಚೆನ್ನೈ ಪವರ್ ಪ್ಲೇನಲ್ಲಿ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಆರನೇ ವಿಕೆಟ್‌ಗೆ ಶಿವಂ ದುಬೆ ಹಾಗೂ ಡೆವಾಲ್ಡ್ ಬ್ರೇವಿಸ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 41 ಎಸೆತಗಳಲ್ಲಿ 67 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ವೈಭವ್ ಆರೋರಾ ಎಸೆದ 11ನೇ ಓವರ್‌ನಲ್ಲಿ ಡೇವಾಲ್ಡ್ ಬ್ರೇವಿಸ್ ಆರ್ಭಟಿಸಿದರು. 6 ಎಸೆತದಲ್ಲಿ 30 ರನ್ ಬಾರಿಸಿದ ಬ್ರೇವಿಸ್ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಡೇವಾಲ್ಡ್ ಬ್ರೇವಿಸ್ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 52 ರನ್ ಬಾರಿಸಿ ವರುಣ್ ಚಕ್ರವರ್ತಿ ತೋಡಿದ ಖೆಡ್ಡಾಗೆ ಬಲಿಯಾದರು.
ಶಿವಂ ದುಬೆ 2 ಬೌಂಡರಿ, 3 ಸಿಕ್ಸರ್ ಸಹಾಯದಿಂದ 45 ರನ್ ಸಿಡಿಸಿದರು. ನೂರ್ ಅಹ್ಮದ್ (2) ಇಲ್ಲದ ಶಾಟ್ ಬಾರಿಸಲು ಹೋಗಿ ಔಟ್ ಆದರು.
ರಹಾನೆ ಜವಾಬ್ದಾರಿಯುತ ಆಟ
ಕೆಕೆಆರ್ ತಂಡದ ಆರಂಭ ಸಾಧರಣವಾಗಿತ್ತು. ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್ (11) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಎರಡನೇ ವಿಕೆಟ್‌ಗೆ ಸುನಿಲ್ ನರೈನ್ ಹಾಗೂ ಅಜಿಂಕ್ಯ ರಹಾನೆ ಎರಡನೇ ವಿಕೆಟ್‌ಗೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಪವರ್ ಪ್ಲೇನಲ್ಲಿ ವಿಕೆಟ್ ಬೀಳದಂತೆ ನೋಡಿಕೊಂಡು ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿತು. ರಹಾನೆ, ನರೈನ್ 34 ಎಸೆತಗಳಲ್ಲಿ 58 ರನ್ ಸೇರಿಸಿ ತಂಡಕ್ಕೆ ಆಧರವಾದರು. ಸುನಿಲ್ ನರೈನ್ 26 ರನ್ ಬಾರಿಸಿ ನೂರ್ ಅಹ್ಮದ್‌ಗೆ ಕ್ಯಾಚ್ ನೀಡಿದರು. ಇವರು ಔಟ್ ಆಗುತ್ತಿದ್ದಂತೆ ಅಂಗ್‌ಕ್ರಿಶ್ ರಘುವಂಶಿ (1) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ.

ಪ್ರಸಕ್ತ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಅಜಿಂಕ್ಯ ರಹಾನೆ ಮತ್ತೊಮ್ಮೆ ಸ್ಥಿರ ಪ್ರದರ್ಶನ ನೀಡಿದರು. 33 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 48 ರನ್ ಬಾರಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಆಂಡ್ರೆ ರಸೆಲ್ 4 ಬೌಂಡರಿ, 3 ಸಿಕ್ಸರ್ ಸೇರಿದಂತೆ 38 ರನ್ ಸಿಡಿಸಿದರು. ಕರ್ನಾಟಕದ ಸ್ಟಾರ್ ಆಟಗಾರ ಮನೀಶ್ ಪಾಂಡೆ ಅಜೇಯ 36 ರನ್ ಬಾರಿಸಿದರು.
ಸಿಎಸ್‌ಕೆ ತಂಡದ ಪರ ನೂರ್ ಅಹ್ಮದ್ 4 ವಿಕೆಟ್ ಕಬಳಿಸಿದರು. ರವೀಂದ್ರ ಜಡೇಜಾ ಹಾಗೂ ಅನ್ಶುಲ್ ಕಾಂಬೋಜ್ ತಲಾ ಒಂದು ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications