ಎಂಎಸ್ ಧೋನಿ ಜರ್ಸಿ ನಂಬರ್ 7 ಯಾಕೆ?: ಮಾಹಿಯೇ ಬಿಚ್ಚಿಟ್ರು ಏಳರ ರಹಸ್ಯ!

ಐಪಿಎಲ್ ಆರಂಭಕ್ಕೆ ಇನ್ನು ಬೆರಳೆಣಿಕೆಯ ದಿನಗಳು ಮಾತ್ರವೇ ಬಾಕಿಯಿದೆ. ಈ ಸಂದರ್ಭದಲ್ಲಿ ಎಲ್ಲಾ ಅಭಿಮಾನಿಗಳ ಕುತೂಹಲ ಕೂಡ ಈ ಟೂರ್ನಿ ಮೇಲೆ ನೆಟ್ಟಿದೆ. ಬಹುತೇಕ ಎಲ್ಲಾ ಆಟಗಾರರು ಕೂಡ ಅಭ್ಯಾಸವನ್ನು ಆರಂಭಿಸಿದ್ದು ತಂಡಗಳ ಸದಸ್ಯರು ಬಯೋಬಬಲ್‌ಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ತಮ್ಮ ಜರ್ಸಿ ಸಂಖ್ಯೆಯ ಬಗ್ಗೆ ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ವೈಟ್‌ಬಾಲ್ ಕ್ರಿಕೆಟ್‌ನಲ್ಲಿ 1992ರ ವಿಶ್ವಕಪ್‌ನ ನಂತರ ಬಣ್ಣದ ಜರ್ಸಿಯನ್ನು ತೊಡಲು ಆರಂಭಿಸಿದ ಬಳಿಕ ಜರ್ಸಿ ನಂಬರ್ ಕೂಡ ಏಕದಿನ ಕ್ರಿಕೆಟ್‌ನಲ್ಲಿ ಸಾಮಾನ್ಯವಾಗಿತ್ತು. ಆಟಗಾರರು ತಮ್ಮ ತಮ್ಮ ನೆಚ್ಚಿನ ಸಂಖ್ಯೆಗಳನ್ನು ತಮ್ಮದೇ ಆದ ಕಾರಣಕ್ಕೆ ಜರ್ಸಿ ಸಂಖ್ಯೆಯಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಇದರಲ್ಲಿ ಕೆಲ ಆಟಗಾರರ ಜರ್ಸಿ ಸಂಖ್ಯೆಗಳು ಸಾಕಷ್ಟು ಖ್ಯಾತಿಯನ್ನು ಪಡೆದಿದೆ. ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ವಿರಾಟ್ ಕೊಹ್ಲಿಯಂತಾ ಆಟಗಾರರ ಜರ್ಸಿ ಸಂಖ್ಯೆ ಅಭಿಮಾನಿಗಳ ವಲಯದಲ್ಲಿ ಜನಪ್ರಿಯತೆ ಪಡೆದುಕೊಂಡಿದೆ.
ಈ ಆಟಗಾರರ ಪೈಕಿ ಮಾಜಿ ನಾಯಕ ಎಂಎಸ್ ಧೋನಿ ತನ್ನ ಜರ್ಸಿ ಸಂಖ್ಯೆಯಾಗಿ 7 ಸಂಖ್ಯೆಯನ್ನು ಯಾವ ಕಾರಣಕ್ಕಾಗಿ ಆಯ್ಕೆ ಮಾಡಿಕೊಂಡರು ಎಂಬುದು ಅಭಿಮಾನಿಗಳ ಕುತೂಹಲ. ಈ ವಿಚಾರವಾಗಿ ಸ್ವತಃ ಎಂಎಸ್ ಧೋನಿಯೇ ಕುತೂಹಲಕಾರಿ ಅಂಶವನ್ನು ಬಿಚ್ಚಿಟ್ಟಿದ್ದಾರೆ. ಹಾಗಾದರೆ ಎಂಎಸ್ ಧೋನಿ ಜರ್ಸಿ ಸಂಖ್ಯೆಯಾಗಿ ಎಂಎಸ್ ಧೋನಿ ಆಯ್ಕೆ ಮಾಡಿಕೊಂಡಿದ್ದೇಕೆ? ಮುಂದೆ ಓದಿ..

ಪದಾರ್ಪಣಾ ಪಂದ್ಯದಿಂದಲೂ ಧೋನಿ ಜರ್ಸಿ ನಂಬರ್ 7
ಎಂಎಸ್ ಧೋನಿ ಭಾರತ ಕ್ರಿಕೆಟ್ ತಂಡಕ್ಕೆ 2004ರ ಡಿಸೆಂಬರ್ ತಿಂಗಳಿನಲ್ಲಿ ಪದಾರ್ಪಣೆ ಮಾಡಿದರು. ತಮ್ಮ ಮೊದಲ ಪಂದ್ಯದಿಂದಲೇ ಧೋನಿ ಜರ್ಸಿ ಸಂಖ್ಯೆಯಾಗಿ ಏಳನ್ನು ಆಯ್ಕೆ ಮಾಡಿಕೊಂಡಿದ್ದರು. ಧೋನಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗುತ್ತಿದ್ದಂತೆಯೇ ಧೋನಿ ಜರ್ಸಿ ಸಂಖ್ಯೆ ಕೂಡ ಪ್ರಖ್ಯಾತಗೊಳ್ಳತೊಡಗಿತ್ತು. ಈ ಸಂದರ್ಭದಲ್ಲಿ ಧೋನಿ ಜರ್ಸಿ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಲು ಕಾರಣವೇನಿರಬಹುದು ಎಂಬ ಬಗ್ಗೆ ಅಭಿಮಾನಿಗಳು ಸಾಕಷ್ಟು ಅಭಿಪ್ರಾಯಗಳನ್ನು ವ್ಯಕ್ತಪಡಿಸತೊಡಗಿದ್ದರು. ಸಂಖ್ಯೆಯ ಮೇಲಿನ ಮೂಢನಂಬಿಕೆಯೂ ಇದಕ್ಕೆ ಕಾರಣವಾಗಿರಬಹುದು ಎಂಬ ಅಭಿಪ್ರಾಯವನ್ನೂ ಅಭಿಮಾನಿಗಳು ವ್ಯಕ್ತಪಡಿಸಿದ್ದರು.

7 ಸಂಖ್ಯೆಯ ಆಯ್ಕೆಗೆ ಸಿಂಪಲ್ ಕಾರಣ ಎಂದ ಮಾಹಿತಿ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿರುವ ಮಹೇಂದ್ರ ಸಿಂಗ್ ಧೋನಿ ಫ್ರಾಂಚೈಸಿಯ ಮಾತೃಸಂಸ್ಥೆ ಇಂಡಿಯಾ ಸಿಮೆಂಟ್ಸ್ ಅಭಿಮಾನಿಗಳೊಂದಿಗೆ ಸಂವಾದವನ್ನು ಏರ್ಪಡಿಸಿತ್ತು. ಈ ಸಂವಾದದಲ್ಲಿ ಎಂಎಸ್ ಧೋನಿ ಜರ್ಸಿ ಬಗೆಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ತಾನು ಕೂಡ ಜರ್ಸಿ ಸಂಖ್ಯೆ 7ನ್ನು ಆಯ್ಕೆ ಮಾಡಿಕೊಂಡಿರುವ ವಿಚಾರವಾಗಿ ಚರ್ಚೆಗಳು ನಡೆದಿರುವುದನ್ನು ಗಮನಿಸಿದ್ದೇನೆ. ಆದರೆ ಈ ಸಂಖ್ಯೆಯನ್ನು ತಾನು ಆಯ್ಕ ಮಾಡಿಕೊಳ್ಳಲು ಸರಳವಾದ ಕಾರಣವಿದೆ ಎಂದಿದ್ದಾರೆ ಎಂಎಸ್ ಧೋನಿ. ಈ ಮೂಲಕ ಅದೃಷ್ಟದ ಸಂಖ್ಯೆಯಾಗಿರಬಹುದು ಎಂಬ ಚರ್ಚೆಗಳಿಗೆ ತೆರೆಯೆಳೆಯುವ ಪ್ರಯತ್ನ ಮಾಡಿದ್ದಾರೆ ಧೋನಿ.

ಹುಟ್ಟಿದ ದಿನಾಂಕವನ್ನೇ ಜರ್ಸಿ ಸಂಖ್ಯೆಯಾಗಿ ಆಯ್ಕೆ
"ಸಾಕಷ್ಟು ಜನರು ಆರಂಭಿಕ ದಿನಗಳಲ್ಲಿ 7 ನನ್ನ ಅದೃಷ್ಟದ ಸಂಖ್ಯೆಯಾಗಿರಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೆ ನಾನು ಈ ಸಂಖ್ಯೆಯನ್ನು ಅತ್ಯಂತ ಸರಳ ಕಾರಣಕ್ಕೆ ಆಯ್ಕೆ ಮಾಡಿಕೊಂಡಿದ್ದೆ. ನಾನು ಜುಲೈ ತಿಂಗಳ 7ನೇ ತಾರೀಕಿನಂದು ಜನಿಸಿದ್ದೆ. ಅದು 7ನೇ ತಿಂಗಳ 7ನೇ ತಾರೀಕಾಗಿತ್ತು. ಅಲ್ಲದೆ ಹುಟ್ಟಿದ ವರ್ಷ 81 ಆಗಿತ್ತು. ಅಂದರೆ 8-1 ಕೂಡ 7 ಆಗುತ್ತದೆ. ಯಾವ ಸಂಖ್ಯೆಯನ್ನು ಜರ್ಸಿ ನಂಬರ್ ಆಗಿ ಆಯ್ಕೆ ಮಾಡಿಕೊಳ್ಳಬೇಕು ಯಾವ ಸಂಖ್ಯೆ ಉತ್ತಮ ಎಂಬ ಅಂಶಗಳು ಬಂದಾಗ ನಾನು ನನ್ನ ಹುಟ್ಟಿದ ದಿನಾಂಕವನ್ನೇ ಆಯ್ಕೆ ಮಾಡಿಕೊಳ್ಳಲು ಬಯಸಿದ್ದೆ" ಎನ್ನುವ ಮೂಲಕ ಧೋನಿ ಜರ್ಸಿ ಸಂಖ್ಯೆಯ ಬಗೆಗಿನ ಕುತೂಹಲಕ್ಕೆ ಉತ್ತರ ನೀಡಿದ್ದಾರೆ.

15ನೇ ಆವೃತ್ತಿಗೆ ಚೆನ್ನೈ ಸೂಪರ್ ಕಿಂಗ್ಸ್ ಸಜ್ಜು
ಇನ್ನು ಈ ಬಾರಿಯ ಐಪಿಎಲ್ ಟೂರ್ನಿ ಆರಂಭಕ್ಕೆ ಇನ್ನು ಬೆರಳೆಣಿಕೆಯ ದಿನಗಳು ಮಾತ್ರವೇ ಬಾಕಿಯಿದೆ. ಚೆನ್ನೈ ಸೂಪರ್ ಕಿಂಗ್ಸ್ ಈ ಟೂರ್ನಿಗೆ ಭರ್ಜರಿ ತರಾರಿಯನ್ನು ನಡೆಸುತ್ತಿದೆ. ಎಂಎಸ್ ಧೋನಿ ನಾಯಕತ್ವದಲ್ಲಿಯೇ ಈ ಬಾರಿಯೂ ಟೂರ್ನಿಗೆ ಕಣಕ್ಕಿಳಿಯುತ್ತಿರುವ ಸಿಎಸ್‌ಕೆ ಸೂರತ್‌ನಲ್ಲಿ ಟೂರ್ನಿಯ ಆರಂಭಕ್ಕೂ ಮುನ್ನ ಭರ್ಜರಿ ಸಿದ್ಧತೆ ನಡೆಸಿದೆ. ಮುಂಬೈನಲ್ಲಿ ಮಾರ್ಚ್ 26ರಿಂದ 15ನೇ ಐಪಿಎಲ್ ಆವೃತ್ತಿ ಆರಂಭವಾಗುತ್ತಿದೆ. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಪಂದ್ಯಗಳು ಮುಖಾಮುಖಿಯಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications