CWG 2022: ಕಾಮನ್‌ಸೆನ್ಸ್ ಇಲ್ಲದ ಬ್ಯಾಟಿಂಗ್!!: ಭಾರತ ಮಹಿಳಾ ತಂಡದ ಪ್ರದರ್ಶನಕ್ಕೆ ಅಜರುದ್ದೀನ್ ಕಿಡಿ

ಕಾಮನ್‌ವೆಲ್ತ್ ಗೇಮ್ಸ್‌ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರ ತಂಡದ ವಿರುದ್ಧ ಭಾರತೀಯ ಮಹಿಳಾ ತಂಡ 9 ರನ್‌ಗಳ ಅಂತರದಿಂದ ಸೋಲು ಅನುಭವಿಸಿತು. ಈ ಮೂಲಕ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್‌ಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ದೊರೆತ ಅವಕಾಶದಲ್ಲಿ ಚಿನ್ನದ ಪದಕ ಗೆಲ್ಲುವ ಅವಕಾಶವನ್ನು ಭಾರತ ತಂಡ ಕಳೆದುಕೊಂಡಿದೆ. ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ. ಈ ಪಂದ್ಯದಲ್ಲಿ ಭಾರತದ ಮಹಿಳಾ ತಂಡದ ಬ್ಯಾಟರ್‌ಗಳ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಪ್ರತಿಕ್ರಿಯಿಸಿದ್ದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಗೆಲ್ಲಬಹುದಾಗಿದ್ದ ಪಂದ್ಯವನ್ನು ಭಾರತ ತಂಡದ ಆಟಗಾರ್ತಿಯರು ತಮ್ಮ ತಪ್ಪಿನಿಂದಾಗಿಯೇ ಕಳೆದುಕೊಂಡರು ಎಂದು ಮೊಹಮ್ಮದ್ ಅಜರುದ್ದೀನ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇದು ಕಳಪೆ ಬ್ಯಾಟಿಂಗ್. ಸಾಮಾನ್ಯ ಜ್ಞಾನವೇ ಇರಲಿಲ್ಲ. ಗೆಲ್ಲುವ ಪಂದ್ಯವನ್ನು ಎದುರಾಳಿಗೆ ಸುಲಭವಾಗಿ ನೀಡಿದರು ಎಂದು ಅಜರುದ್ದೀನ್ ಭಾರತದ ಮಹಿಳಾ ಕ್ರಿಕೆಟ್ ತಂಡದ ಪ್ರದರ್ಶನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೆಲುವಿನತ್ತ ಕೊಂಡೊಯ್ದಿದ್ದ ಹರ್ಮನ್-ಜೆಮಿಮಾ
ಈ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲ್ಲುವ ಅದ್ಭುತ ಅವಕಾಶವಿತ್ತು. ಆರಂಭಿಕ ಆಟಗಾರ್ತಿಯರನ್ನು ಅಗ್ಗಕ್ಕೆ ಕಳೆದುಕೊಂಡ ಭಾರತ ತಂಡದ ಪರವಾಗಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಜೆಮಿಮಾ ರೋಡ್ರೊಗಸ್ ಅದ್ಭುತ ಜೊತೆಯಾಟ ನೀಡುವ ಮೂಲಕ ತಂಡವನ್ನು ಮೇಲಕ್ಕೆತ್ತಿದರು. ಜಾಣ್ಮೆಯ ಬ್ಯಾಟಿಂಗ್ ನಡೆಸಿದ ಈ ಇಬ್ಬರು ಆಟಗಾರ್ತಿಯರು 96 ರನ್‌ಗಳ ಜೊತೆಯಾಟವನ್ನು ನೀಡಿದರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಭಾರತ ತಂಡ ನಾಟಕೀಯವಾಗಿ ಕುಸಿಯಲು ಆರಂಭಿಸಿತು. ಅಗತ್ಯ ಜೊತೆಯಾಟವೇ ಭಾರತಕ್ಕೆ ದೊರೆಯಲಿಲ್ಲ. ಒಂದರ ಬಳಿಕ ಮತ್ತೊಂದರಂತೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಅಂತಿಮವಾಗಿ 9 ವಿಕೆಟ್‌ಗಳ ಅಂತರದಿಂದ ಸೋಲು ಅನುಭವಿಸಿತು.

ಮೆಚ್ಚುಗೆ ವ್ಯಕ್ತಪಡಿಸಿದ ರವಿ ಶಾಸ್ತ್ರಿ
ಇನ್ನು ಮಹಿಳಾ ಕ್ರಿಕೆಟ್ ತಂಡ ಫೈನಲ್ ಪಂದ್ಯದಲ್ಲಿ ನೀಡಿದ ಹೋರಾಟವನ್ನು ಭಾರತದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಕೋಚ್ ರವಿ ಶಾಸ್ತ್ರಿ ಪ್ರಶಂಸಿಸಿದ್ದಾರೆ. "ಅದ್ಭುತವಾಗಿ ಆಡಿದ್ದೀರಿ. ಫೈನಲ್‌ನಲ್ಲಿ ನೀಡಿದ ಹೋರಾಟ ಅಮೋಘವಾಗಿತ್ತು. ಇದಕ್ಕಿಂತ ದೊಡ್ಡದು ಶೀಘ್ರದಲ್ಲಿಯೇ ಬರಲಿದೆ" ಎಂದು ಭಾರತ ಮಹಿಳಾ ತಂಡವನ್ನು ಪ್ರಶಂಸಿಸಿದ್ದಾರೆ.

ಮೆಚ್ಚುಗೆ ಸೂಚಿಸಿದ ಭಜ್ಜಿ, ಡಿಕೆ
ಇನ್ನು ಭಾರತ ತಂಡದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಹಾಗೂ ಟೀಮ್ ಇಂಡಿಯಾ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಕೂಡ ಭಾರತೀಯ ಮಹಿಳಾ ತಂಡದ ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಬಹಳಾ ಪೈಪೋಟಿಯ ಪಂದ್ಯವಾಗಿತ್ತು. ಆದರೂ ಬೆಳ್ಳಿ ಪದಕ ಗೆದ್ದುಕೊಂಡಿರುವುದಕ್ಕೆ ಅಭಿನಂದನೆಗಳು ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಇನ್ನು ಫ್ಲೋರಿಡಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯ ನಡೆಯುತ್ತಿದ್ದರೂ ಅಲ್ಲಿಂದ ಮಹಿಳಾ ತಂಡದ ಪಂದ್ಯವನ್ನು ವೀಕ್ಷಣೆ ಮಾಡಿದ್ದ ದಿನೇಶ್ ಕಾರ್ತಿಕ್ ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಟೂರ್ನಿಯಿದ್ದಕ್ಕೂ ಅದ್ಭುತ ಆಟವನ್ನು ಆಡಿದ್ದೀರಿ. ನಿಮ್ಮ ಆಟಕ್ಕೆ ಬಹಳ ಹೆಮ್ಮೆಯಾಗುತ್ತಿದೆ" ಎಂದು ದಿನೇಶ್ ಕಾರ್ತಿಕ್ ಟ್ವೀಟ್ ಮಾಡಿ ಮೆಚ್ಚಿಗೆ ಸೂಚಿಸಿದ್ದಾರೆ.

ಚಿನ್ನ ಗೆದ್ದ ಆಸ್ಟ್ರೇಲಿಯಾ, ಭಾರತಕ್ಕೆ ಬೆಳ್ಳಿ
ಮೊದಲಿಗೆ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 161 ರನ್‌ಗಳನ್ನು ಗಳಿಸಲು ಶಕ್ತವಾಯಿತು. ಭಾರತ ತಂಡದ ಬೌಲಿಂಗ್ ವಿಭಾಗ ಅಂತಿಮ ಹಂತದಲ್ಲಿ ಅಮೋಘ ಬೌಲಿಂಗ್ ಪ್ರದರ್ಶಿಸಿದ ಕಾರಣ ಆಸ್ಟ್ರೇಲಿಯಾ ದೊಡ್ಡ ಮೊತ್ತದ ಗುರಿ ನೀಡಲು ವಿಫಲವಾಗಿ ಸವಾಲಿನ ಮೊತ್ತ ಸೇರಿಸಲಷ್ಟೇ ಶಕ್ತವಾಯಿತು. ಈ ಗುರಿಯನ್ನು ರೋಚಕವಾಗಿ ಬೆನ್ನಟ್ಟಿದ ಭಾರತದ ಆಟಗಾರ್ತಿಯರು ಅಂತಿಮವಾಗಿ 9 ರನ್‌ಗಳ ಅಂತರದಿಂದ ಶರಣಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications