ರಾಜ್‌ಕೋಟ್: ಭರವಸೆಯ ಬ್ಯಾಟರ್ ಡ್ಯಾರಿಲ್ ಮಿಚೆಲ್ ಭರ್ಜರಿ ಶತಕ ಹಾಗೂ ವಿಲ್ ಯಂಗ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ನ್ಯೂಜಿಲೆಂಡ್ ಎರಡನೇ ಏಕದಿನ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಭಾರತ ತಂಡವನ್ನು ಮಣಿಸಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡೂ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದು ಬೀಗಿವೆ. ಹೀಗಾಗಿ ಮೂರನೇ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
285 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ಡೆವೊನ್ ಕಾನ್ವೆ (16), ಹೆನ್ರಿ ನಿಕೋಲ್ಸ್ (10) ರನ್ ಕಲೆ ಹಾಕುವಲ್ಲಿ ವಿಫಲರಾದರು. 46 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಭರವಸೆಯ ಆಟಗಾರರಾದ ವಿಲ್ ಯಂಗ್ ಹಾಗೂ ಡ್ಯಾರಿಲ್ ಮಿಚೆಲ್ ಅವರು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು.

ವಿಲ್ ಯಂಗ್ ಹಾಗೂ ಡ್ಯಾರಿಲ್ ಮಿಚೆಲ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಮಿಡ್ಲ್ ಓವರ್‌ಗಳಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಿತು. ಈ ಜೋಡಿ 152 ಎಸೆತಗಳಲ್ಲಿ 162 ರನ್ ಸೇರಿಸಿತು. ಈ ಅವಧಿಯಲ್ಲಿ ವಿಲ್ ಯಂಗ್ 7 ಬೌಂಡರಿ ನೆರವಿನಿಂದ 87 ರನ್ ಸೇರಿಸಿ ಕುಲ್‌ದೀಪ್ ಯಾದವ್ ಎಸೆತದಲ್ಲಿ ಔಟ್ ಆದರು.
4ನೇ ವಿಕೆಟ್‌ಗೆ ಡ್ಯಾರಿಲ್ ಮಿಚೆಲ್ ಅವರನ್ನು ಸೇರಿಕೊಂಡ ಗ್ಲೆನ್ ಫಿಲಿಪ್ಸ್ ತಂಡಕ್ಕೆ ಆಧಾರವಾಯಿತು. ಈ ಜೋಡಿ ತಂಡಕ್ಕೆ ಅಗತ್ಯ ರನ್‌ಗಳನ್ನು ಕಲೆ ಹಾಕಿ ಮಿಂಚಿದರು. ಈ ಜೋಡಿ 4ನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವನ್ನು ನೀಡಿತು. ತಮ್ಮ ವೃತ್ತಿ ಜೀವನದ 58ನೇ ಏಕದಿನ ಪಂದ್ಯವನ್ನು ಆಡಿದ ಮಿಚೆಲ್ 8ನೇ ಶತಕವನ್ನು ಬಾರಿಸಿ ಮಿಂಚಿದರು. ಇವರು 117 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 131 ರನ್ ಸಿಡಿಸಿದರು. ಗ್ಲೇನ್ ಫಿಲಿಪ್ಸ್ ಅಜೇಯ 32 ರನ್ ಸಿಡಿಸಿದರು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಜೋಡಿ ಮೊದಲ ವಿಕೆಟ್‌ಗೆ 12.2 ಓವರ್‌ಗಳಲ್ಲಿ 70 ರನ್ ಸೇರಿಸಿತು. ರೋಹಿತ್ ಶರ್ಮಾ 4 ಬೌಂಡರಿ ನೆರವಿನಿಂದ 24 ರನ್ ಬಾರಿಸಿ ಔಟ್ ಆದರು. ನಾಯಕ ಶುಭಮನ್ ಗಿಲ್ 9 ಬೌಂಡರಿ, 1 ಸಿಕ್ಸರ್ ನೆರವಿನಿಂದ 56 ರನ್ ಸಿಡಿಸಿದರು. ಸತತ ಐದು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ್ದ ವಿರಾಟ್ ಕೊಹ್ಲಿ ಎರಡನೇ ಏಕದಿನ ಪಂದ್ಯದಲ್ಲಿ ರನ್ ಕಲೆ ಹಾಕುವಲ್ಲಿ ಎಡವಿದರು. ವಿರಾಟ್ 23 ರನ್‌ಗಳಿಗೆ ಆಟ ಮುಗಿಸಿದರು. ಉಪನಾಯಕ ಶ್ರೇಯಸ್ ಅಯ್ಯರ್ (8) ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.

118 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ರವೀಂದ್ರ ಜಡೇಜಾ (27) ಹಾಗೂ ಕೆಎಲ್ ರಾಹುಲ್ ಜೋಡಿ ಆಧಾರವಾಯಿತು. ಈ ಜೋಡಿ 88 ಎಸೆತಗಳಲ್ಲಿ 73 ರನ್ ಸೇರಿಸಿತು. 6ನೇ ವಿಕೆಟ್‌ಗೆ ನಿತೀಶ್ ಕುಮಾರ್ ರೆಡ್ಡಿ (20) ಹಾಗೂ ರಾಹುಲ್ ಜೋಡಿ 57 ರನ್ ಸೇರಿಸಿತು.
ಕನ್ನಡಿಗ ಕೆಎಲ್ ರಾಹುಲ್ 794 ದಿನಗಳ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದರು. ಇವರು 92 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ನೆರವಿನಿಂದ ಅಜೇಯ 112 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 284 ರನ್ ಸೇರಿಸಿತು.