
ಭಾರತ ಹಾಗೂ ಶ್ರೀಲಂಕಾ ನಡುವಿನ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಈ ಸರಣಿಯಲ್ಲಿ ಶ್ರೀಲಂಕಾ ತಂಡವನ್ನು ನೂತನ ನಾಯಕ ಮುನ್ನಡೆಸುವ ಸಾಧ್ಯತೆ ದಟ್ಟವಾಗಿದೆ. ಕುಸಲ್ ಪೆರೆರ ನಾಯಕನಾಗಿದ್ದ ಶ್ರೀಲಂಕಾ ಸೀಮಿತ ಓವರ್‌ಗಳ ತಂಡವನ್ನು ಅವರ ಬದಲಿಗೆ ಆಲ್‌ರೌಂಡರ್ ದಸುನ್ ಶನಕ ಮುನ್ನಡೆಸಲಿದ್ದಾರೆ ಎನ್ನಲಾಗಿದೆ.
ಭಾರತ ಹಾಗೂ ಶ್ರೀಲಂಕಾ ತಂಡಗಳು ಜುಲೈ 13ರಿಂದ ಸೀಮಿತ ಓವರ್‌ಗಳ ಸರಣಿಯಲ್ಲಿ ಕಾದಾಡಲಿವೆ. 29ರ ಹರೆಯದ ಸ್ಪೋಟಕ ಬ್ಯಾಟ್ಸ್‌ಮನ್ ಹಾಗೂ ವೇಗದ ಬೌಲರ್ ದಸುನ್ ಶನಕ ನಾಯಕನಾಗುವ ಮೂಲಕ ಕಳೆದ ನಾಲ್ಕು ವರ್ಷಗಳ ಅಂತರದಲ್ಲಿ ಶ್ರೀಲಂಕಾ ತಂಡವನನು ಮುನ್ನಡೆಸುವ ಆರನೇ ನಾಯಕ ಎನಿಸಲಿದ್ದಾರೆ.
2018ರ ಆರಂಭದಿಂದ ಶ್ರೀಲಂಕಾ ಕ್ರಿಕೆಟ್ ತಂಡವನ್ನು ಐದು ಮಂದಿ ಆಟಗಾರರು ಮುನ್ನಡೆಸಿಕೊಂಡು ಬಂದಿದ್ದಾರೆ. ದಿನೇಶ್ ಚಾಂಡಿಮಲ್, ಏಂಜಲೋ ಮ್ಯಾಥ್ಯೂಸ್, ಲಸಿತ್ ಮಲಿಂಗ, ದಿಮುತ್ ಕರುಣ ರತ್ನೆ ಹಾಗೂ ಕುಸಲ್ ಪೆರೆರ ಶ್ರೀಲಂಕಾ ತಂಡದ ನಾಯಕತ್ವದ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದರು. ಇದಕ್ಕೂ ಮುನ್ನ 2019ರಲ್ಲಿ ಪಾಕಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಶ್ರೀಲಂಕಾ ತಂಡವನ್ನು ಮುನ್ನಡೆಸಿದ್ದರು. ಆಗ ಪಾಕಿಸ್ತಾನ ವಿರುದ್ಧ ಶ್ರೀಲಂಕಾ ಕ್ಲೀನ್ ಸ್ವೀಪ್ ಸಾಧನೆ ಮಾಡಿತ್ತು.
ಭಾರತ ಹಾಗೂ ಶ್ರೀಲಂಕಾ ತಂಡಗಳು ಮೊದಲಿಗೆ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿದೆ. ಈ ಸರಣಿಯ ಪಂದ್ಯಗಳು ಜುಲೇ 13, 16 ಹಾಗೂ 18ರಂದು ನಡೆಯಲಿದೆ. ಅದಾದ ಬಳಿಕ ಮೂರು ಟಿ20 ಪಂದ್ಯಗಳ ಸರಣಿ ನಡೆಯಲಿದ್ದು ಜುಲೈ 21, 23 ಹಾಗೂ 25ರಂದು ನಡೆಯಲಿದೆ. ಎಲ್ಲಾ ಪಂದ್ಯಗಳು ಕೂಡ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.