ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಡೇವಿಡ್ ವಾರ್ನರ್‌ಗೆ ಸಂಕಷ್ಟ: ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆರೋಪದಡಿ ಪ್ರಕರಣ ದಾಖಲು
David Warner: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆರೋಪದ ಮೇಲೆ ಸಿಡ್ನಿ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಾಗಾದ್ರೆ ಈ ಘಟನೆ ನಡೆದಿದ್ದು ಯಾವಾಗ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ವರದಿಗಳ ಪ್ರಕಾರ, ಏಪ್ರಿಲ್ 5, 2026ರ ಭಾನುವಾರ ಸಂಜೆ ಸುಮಾರು 5:30ರ ಸುಮಾರಿಗೆ ಸಿಡ್ನಿಯ ಮರೂಬ್ರಾ ಎಂಬಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ವಾರ್ನರ್ ಚಲಾಯಿಸುತ್ತಿದ್ದ ವಾಹನ ತಪಾಸಣಾ ಕೇಂದ್ರದ ಸಮೀಪ ಬರುತ್ತಿದ್ದಂತೆ ನಿಂತಿದೆ. ಇದನ್ನು ಕಂಡು ಅನುಮಾನಗೊಂಡ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವಾರ್ನರ್ ಮದ್ಯಪಾನ ಮಾಡಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

ಮದ್ಯಪಾನ ಮಾಡಿ ವಾಹನ ಚಲಾಯಿಸಿದ ವಾರ್ನರ್
ನ್ಯೂ ಸೌತ್ ವೇಲ್ಸ್ ಕಾನೂನಿನ ಪ್ರಕಾರ ರಕ್ತದಲ್ಲಿ ಮದ್ಯದ ಪ್ರಮಾಣ 0.05 ಕ್ಕಿಂತ ಕಡಿಮೆ ಇರಬೇಕು. ಆದರೆ ವಾರ್ನರ್ ಅವರ ರಕ್ತದಲ್ಲಿ ಮದ್ಯದ ಪ್ರಮಾಣ 0.104 ಇರುವುದು ಪತ್ತೆಯಾಗಿದೆ. ಅಂದರೆ ನಿಗದಿತ ಮಿತಿಗಿಂತ ಎರಡು ಪಟ್ಟು ಹೆಚ್ಚು ಮದ್ಯ ಸೇವಿಸಿ ಅವರು ವಾಹನ ಚಲಾಯಿಸುತ್ತಿದ್ದರು. ತಕ್ಷಣವೇ ವಾರ್ನರ್ ಅವರನ್ನು ಮರೂಬ್ರಾ ಪೊಲೀಸ್ ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಲಾಗಿದೆ. ನಂತರ ಅವರನ್ನು ಬಿಡುಗಡೆ ಮಾಡಲಾಗಿದ್ದು, ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ.
ಪ್ರಸ್ತುತ ಪಾಕಿಸ್ತಾನ ಸೂಪರ್ ಲೀಗ್ 2026ನಲ್ಲಿ ಕರಾಚಿ ಕಿಂಗ್ಸ್ ತಂಡದ ನಾಯಕನಾಗಿ ಆಡುತ್ತಿರುವ ವಾರ್ನರ್, ಪಂದ್ಯಗಳ ನಡುವೆ ಬಿಡುವು ಸಿಕ್ಕಿದ್ದರಿಂದ ಆಸ್ಟ್ರೇಲಿಯಾಕ್ಕೆ ಮರಳಿದ್ದರು. ಈ ಘಟನೆಯ ನಂತರ ಅವರು ಮತ್ತೆ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದುಬಂದಿದೆ. ಆದರೂ, ಈ ಪ್ರಕರಣದ ವಿಚಾರಣೆಗಾಗಿ ಅವರು ಮೇ 7, 2026ರಂದು ಸಿಡ್ನಿಯ ಡೌನಿಂಗ್ ಸೆಂಟರ್ ಸ್ಥಳೀಯ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.
ವಾರ್ನರ್‌ಗೆ ಕಠಿಣ ಶಿಕ್ಷೆ ಭೀತಿ
ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರೂ, ವಾರ್ನರ್ ಐಪಿಎಲ್ ಮತ್ತು ಬಿಗ್ ಬ್ಯಾಷ್ ಲೀಗ್‌ಗಳಂತಹ ಪ್ರತಿಷ್ಠಿತ ಟೂರ್ನಿಗಳಲ್ಲಿ ಸಕ್ರಿಯರಾಗಿದ್ದಾರೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಆಸ್ಟ್ರೇಲಿಯಾದಲ್ಲಿ ಗಂಭೀರ ಅಪರಾಧವಾಗಿದ್ದು, ನ್ಯಾಯಾಲಯವು ಅವರಿಗೆ ಭಾರಿ ಮೊತ್ತದ ದಂಡ ಅಥವಾ ಚಾಲನಾ ಪರವಾನಗಿ ರದ್ದತಿಯಂತಹ ಕಠಿಣ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ. ಇದು ಅವರ ವೃತ್ತಿಜೀವನ ಮತ್ತು ಬ್ರ್ಯಾಂಡ್ ಮೌಲ್ಯದ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications