ಬ್ರಾಡ್ಮನ್ ಹೆಸರಿನಲ್ಲಿದ್ದ 88 ವರ್ಷಗಳ ದಾಖಲೆ ಮುರಿದ ಡೇವಿಡ್ ವಾರ್ನರ್!

ಅಡಿಲೇಡ್, ನವೆಂಬರ್ 30: ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ದಾಖಲೆ ಪುಸ್ತಕದ ಪುಟ ನೇರಿದ್ದಾರೆ. ಅಡಿಲೇಡ್ ಓವಲ್ ಸ್ಟೇಡಿಯಂನಲ್ಲಿ ಶನಿವಾರ (ನವೆಂಬರ್ 30) ನಡೆದ, ಪ್ರವಾಸಿ ಪಾಕಿಸ್ತಾನ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಅಜೇಯ ತ್ರಿಶತಕ ಬಾರಿಸಿದ ವಾರ್ನರ್ ದಾಖಲೆ ನಿರ್ಮಿಸಿದ್ದಾರೆ.
ಅಸಲಿಗೆ ಡೇವಿಡ್ ವಾರ್ನರ್, ವೆಸ್ಟ್ ಇಂಡೀಸ್ ದಂತಕತೆ ಬ್ರಿಯಾನ್ ಲಾರಾ ಹೆಸರಿನಲ್ಲಿದ್ದ ದಾಖಲೆ ಮುರಿಯುವುದರಲ್ಲಿದ್ದರು. ಆದರೆ ಆಸೀಸ್ ನಾಯಕ ಟಿಮ್ ಪೈನೆ ಡಿಕ್ಲೇರ್ ಘೋಷಿಸಿದ್ದರಿಂದ ವಾರ್ನರ್ 418 ಎಸೆತಗಳಿಗೆ 335 ರನ್ ಬಾರಿಸಿ ಆಟ ನಿಲ್ಲಿಸಬೇಕಾಯ್ತು.
127 ಓವರ್‌ಗೆ ಪೈನೆ ಡಿಕ್ಲೇರ್ ಘೋಷಿಸಿದ್ದರಿಂದ ಆಸೀಸ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ನಷ್ಟದಲ್ಲಿ 589 ರನ್ ಮಾಡಿತು.

ಟೆಸ್ಟ್‌ನಲ್ಲಿ 2ನೇ ಅತ್ಯಧಿಕ ರನ್
ಅಜೇಯ 335 ರನ್ ಮೂಲಕ ವಾರ್ನರ್, ಡಾನ್ ಬ್ರಾಡ್ಮನ್ ಹೆಸರಿನಲ್ಲಿದ್ದ 334 ರನ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾ ಪರ ಅತ್ಯಧಿಕ ಟೆಸ್ಟ್ ರನ್ ಬಾರಿಸಿದ 2ನೇ ಆಟಗಾರನಾಗಿ ಡೇವಿಡ್ ಗುರುತಿಸಿಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿರುವ ಮ್ಯಾಥ್ಯೂ ಹೇಡನ್ 2003ರಲ್ಲಿ ಜಿಂಬಾಬ್ವೆ ವಿರುದ್ಧ 380 ರನ್ ಬಾರಿಸಿದ್ದರು.

88 ವರ್ಷಗಳ ದಾಖಲೆ ಧೂಳೀಪಟ
ಇಷ್ಟೇ ಅಲ್ಲ ಡೇವಿಡ್ ವಾರ್ನರ್ ಅವರು ಬ್ರಾಡ್ಮನ್ ಹೆಸರಿನಲ್ಲಿದ್ದ 88 ವರ್ಷಗಳ ಹಿಂದಿನ ದಾಖಲೆಯೊಂದನ್ನೂ ಸರಿಗಟ್ಟಿದ್ದಾರೆ. ಬ್ರಾಡ್ಮನ್, 1931-32ರಲ್ಲಿ ಅಡಿಲೇಡ್‌ನಲ್ಲಿ 299 ರನ್ ಬಾರಿಸಿದ್ದರು. ಇದು ಅಡಿಲೇಡ್ ಸ್ಟೇಡಿಯಂನಲ್ಲಿ ದಾಖಲಾದ ವೈಯಕ್ತಿಕ ಅತ್ಯಧಿಕ ಟೆಸ್ಟ್ ರನ್ ಆಗಿತ್ತು.

ಸೆಹ್ವಾಗ್ ದಾಖಲೆ ಧೂಳೀಪಟ
ಡೇ-ನೈಟ್ ಟೆಸ್ಟ್‌ನಲ್ಲಿ ತ್ರಿಶತಕ ಬಾರಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ದಾಖಲೆಗೂ ಡೇವಿಡ್ ವಾರ್ನರ್ ಕಾರಣರಾಗಿದ್ದಾರೆ. ಪಾಕಿಸ್ತಾನ ನಾಯಕ ಅಝರ್ ಅಲಿ ಇದಕ್ಕೂ ಮುನ್ನ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ತ್ರಿಶತಕ ಬಾರಿಸಿದ್ದರು. ಇಷ್ಟೇ ಅಲ್ಲ, ಪಾಕಿಸ್ತಾನ ವಿರುದ್ಧ ಟೆಸ್ಟ್‌ನಲ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರನಾಗಿ ವಾರ್ನರ್ (335 ರನ್), ಭಾರತದ ವೀರೇಂದ್ರ ಸೆಹ್ವಾಗ್ ಹೆಸರಿನಲ್ಲಿ 2004ರಲ್ಲಿ ನಿರ್ಮಾಣವಾಗಿದ್ದ 309 ರನ್ ಸಾಧನೆಯನ್ನು ಮೀರಿಸಿದ್ದಾರೆ.

ದಾಖಲೆ ಬರೆದ ಸ್ಮಿತ್
ಇದೇ ಅಡಿಲೇಡ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮತ್ತೊಬ್ಬ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಕೂಡ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಕಡಿಮೆ ಇನ್ನಿಂಗ್ಸ್‌ನಲ್ಲಿ 7000 ರನ್ ಬಾರಿಸಿದ ವಿಶ್ವದ ಆಟಗಾರರಲ್ಲಿ ಸ್ಮಿತ್ ಅಗ್ರಸ್ಥಾನ (126 ಇನ್ನಿಂಗ್ಸ್) ಪಡೆದುಕೊಂಡಿದ್ದಾರೆ. ಈ ದಾಖಲೆ ಸಾಲಿನಲ್ಲಿ ಇಂಗ್ಲೆಂಡ್‌ನ ವಾಲಿ ಹ್ಯಾಮಂಡ್ (131 ಇನ್ನಿಂಗ್ಸ್), ವೀರೇಂದ್ರ ಸೆಹ್ವಾಗ್ (134 ಇನ್ನಿಂಗ್ಸ್), ಸಚಿನ್ ತೆಂಡೂಲ್ಕರ್ (136 ಇನ್ನಿಂಗ್ಸ್) ಅನಂತರ ಸ್ಥಾನ ಪಡೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications