
ಸಿಡ್ನಿ, ಏಪ್ರಿಲ್ 18: ಕೊರೊನಾವೈರಸ್ ಕಾರಣದಿಂದ ನಿಷೇಧ ಹೇರಲ್ಪಟ್ಟಿರುವುದರಿಂದ ಬರೀ ಭಾರತದ ಕ್ರಿಕೆಟರ್ಸ್ ಅಷ್ಟೇ ಅಲ್ಲ, ವಿದೇಶಿಗರೂ ಬಿಡುವಿನ ವೇಳೆ ಕಳೆಯಲು ವಿಭಿನ್ನ ದಾರಿ ಹುಡುಕುತ್ತಿದ್ದಾರೆ. ಭಾರತದ ಕ್ರಿಕೆಟಿಗರು ಮತ್ತು ಭಾರತೀಯರ ಬಗ್ಗೆ ಅಭಿಮಾನ ಹೊಂದಿರುವ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಈ ಬಾರಿ ಡ್ಯಾನ್ಸ್ ವೀಡಿಯೋ ಮೂಲಕ ಗಮನ ಸೆಳೆದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುವ ಡೇವಿಡ್ ವಾರ್ನರ್, ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ವಾರ್ನರ್ ಮತ್ತು ಅವರ ಪುತ್ರಿ ಇಂಡಿ ಡ್ಯಾನ್ಸ್ ಮಾಡುತ್ತಿರುವ ದೃಶ್ಯವಿದೆ.
ವಾರ್ನರ್ ತನ್ನ ಪುಟಾಣಿ ಪುತ್ರಿಯೊಂದಿಗೆ ಡ್ಯಾನ್ಸ್ ಮಾಡಿದ್ದು ಭಾರತೀಯರನ್ನು ಹೆಚ್ಚು ಸೆಳೆದಿದ್ದು ಯಾಕೆಂದರೆ ಆ ಡ್ಯಾನ್ಸ್‌ಗೆ ಬಳಸಿಕೊಂಡ ಮ್ಯೂಸಿಕ್ ಬಾಲಿವುಡ್‌ನದ್ದು. ಕತ್ರೀನ ಕೈಫ್ ಮತ್ತು ಅಕ್ಷಯ್ ಕುಮಾರ್ ಅಭಿನಯದ 'ತೀಸ್ ಮಾರ್ ಖಾನ್' ಚಿತ್ರದ 'ಶೀಲಾ ಕಿ ಜವಾನಿ' ಸಾಂಗಿಗೆ ವಾರ್ನರ್ ಮತ್ತವರ ಪುತ್ರಿ ಕುಣಿದಿದ್ದಾರೆ.
'ನಿಮಗಾಗಿ ಹೀಗೊಂದು ನೃತ್ಯ ಮಾಡಲು ಇಂಡಿ ಕೇಳಿಕೊಂಡಳು. ಯಾರಾದರೂ ನನಗೆ ಸಹಾಯ ಮಾಡಿ' ಅಂತ ಡೇವಿಡ್ ವಾರ್ನರ್ ತನ್ನ ಇನ್‌ಸ್ಟಾಗ್ರಾಮ್ ವೀಡಿಯೋದ ಜೊತೆ ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಭಾರತೀಯರಿಂದ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿದೆ.