ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅತಿ ಹೆಚ್ಚು ಪ್ರೀತಿಸುವ ವಿದೇಶಿ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಕೂಡ ಒಬ್ಬರು. ವಾರ್ನರ್ ಕೂಡ ಅಷ್ಟೇ. ಭಾರತವನ್ನು ತನ್ನ ಎರಡನೇ ತವರು ಎಂದು ಮನಃಪೂರ್ವಕವಾಗಿ ಹೇಳುತ್ತಿರುತ್ತಾರೆ. ಹಾಗೂ ಅವರ ನಡೆಗಳು ಕೂಡ ಅದಕ್ಕೆ ಪೂರಕವಾಗಿಯೇ ಇದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್‌ಗಳಲ್ಲಿ ಭಾರತೀಯ ಚಿತ್ರರಂಗದ ಹಾಡುಗಳಿಗೆ ಸ್ಟಪ್‌ಗಳನ್ನು ಹಾಕಿ ಅಭಿಮಾನಿಗಳನ್ನು ಮನರಂಜಿಸುವ ವಾರ್ನರ್ ಮೈದಾನದಲ್ಲಿಯೂ ಅವಕಾಶ ಸಿಕ್ಕಾಗ ಅದನ್ನು ಬಳಸಿಕೊಂಡಿರುವುದನ್ನು ಐಪಿಎಲ್ ಸಂದರ್ಭದಲ್ಲಿ ಹಲವು ಬಾರಿ ನೋಡಿದ್ದೇವೆ.
ಇದೀಗ ವಿಶ್ವಕಪ್ ಅಧಿಕೃತವಾಗಿ ಆರಂಭವಾಗುವುದಕ್ಕೂ ಮುನ್ನ ನಡೆದ ಕೊನೆಯ ಅಭ್ಯಾಸ ಪಂದ್ಯದಲ್ಲಿ ವಾರ್ನರ್ ಅಭಿಮಾನಿಗಳ ಹೃದಯವನ್ನು ಮತ್ತೊಮ್ಮೆ ಗೆದ್ದಿದ್ದಾರೆ. ಹೈದರಾಬಾದ್‌ನಲ್ಲಿ ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯಾ ಅಭ್ಯಾಸ ಪಂದ್ಯವನ್ನು ಆಡಿತ್ತು. ಈ ಪಂದ್ಯದ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿ ಟಾಲಿವುಡ್‌ನ ಬ್ಲಾಕ್‌ಬಸ್ಟರ್ 'ಪುಷ್ಪ' ಸಿನಿಮಾದ ಹಾಡನ್ನು ಹಾಕಲಾಗಿತ್ತು. ಈ ಸಂದರ್ಭದಲ್ಲಿ ಈ ಹಾಡಿಗೆ ಡೇವಿಡ್ ವಾರ್ನರ್ ಸ್ಟೆಪ್ ಹಾಕಿದ್ದಾರೆ.

ಕ್ರೀಡಾಂಗಣದಲ್ಲಿ ಹಾಡು ಕೇಳುಬರುತ್ತಿದ್ದಂತೆಯೇ ಡೇವಿಡ್ ವಾರ್ನರ್ ಹಾಡಿಗೆ ಸ್ಪಂದಿಸಲು ಆರಂಭಿಸಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಗಳು ಕೂಡ ಜೋರಾಗಿ ಕರತಾಡನ ಶುರು ಮಾಡಿದರು. ನಂತರ ವಾರ್ನರ್ ಆ ಸಿನಿಮಾದ ಜನಪ್ರಿಯ ಸ್ಟಪ್ ಆಕುವ ಮೂಲಕ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದಾರೆ. ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದೆ.
ಇನ್ನು ಈ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಆಸ್ಟ್ರೇಲಿಯಾ ಮಣಿಸುವಲ್ಲಿ ಯಶಸ್ವಿಯಾಗಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 351 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡಕ್ಕೆ ನಾಯಕ ಬಾಬರ್ ಅಜಂ ಅವರ ಅದ್ಭುತ ಪ್ರದರ್ಶನದ ಹೊರತಾಗಿಯೂ ಗುರಿ ತಲುಪಲು ಸಾಧ್ಯವಾಗಲಿಲ್ಲ. 337 ರನ್‌ಗಳಿಸಿದ ಪಾಕ್ ತಂಡ ಆಲೌಟ್ ಆಯಿತು. ಈ ಮೂಲಕ ಆಸ್ಟ್ರೇಲಿಯಾ 14 ರನ್‌ಗಳ ಅಂತರದ ಗೆಲುವು ಸಾಧಿಸಿದೆ.
ಪಾಕಿಸ್ತಾನ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಆಜಮ್, ಸೌದ್ ಶಕೀಲ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಫಖರ್ ಜಮಾನ್, ಮೊಹಮ್ಮದ್ ನವಾಜ್, ಶದಾಬ್ ಖಾನ್ (ನಾಯಕ), ಉಸಾಮಾ ಮಿರ್, ಮೊಹಮ್ಮದ್ ರಿಜ್ವಾನ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಮೊಹಮ್ಮದ್ ವಾಸಿಂ ಜೂನಿಯರ್
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಜೋಶ್ ಇಂಗ್ಲಿಸ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ಮ್ಯಾಥ್ಯೂ ಶಾರ್ಟ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಮಾರ್ಕಸ್ ಸ್ಟೊಯಿನಿಸ್, ಸೀನ್ ಅಬಾಟ್, ಟ್ರಾವಿಸ್ ಹೆಡ್, ಆಡಮ್ ಝಂಪಾ