ಬಹುನಿರೀಕ್ಷಿತ ಬಾರ್ಡರ್- ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾದಲ್ಲಿ ವೇದಿಕೆ ಸಜ್ಜಾಗಿದೆ. ಕಳೆದ 10 ವರ್ಷಗಳಿಂದ ಭಾರತ ವಿರುದ್ಧ ಆಸ್ಟ್ರೇಲಿಯಾ ಬಾರ್ಡರ್- ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಗೆದಿಲ್ಲ. ಈ ಬಾರಿ 10 ವರ್ಷಗಳ ಪ್ರಶಸ್ತಿ ಬರವನ್ನು ಕೊನೆಗೊಳಿಸಲು ಆಸ್ಟ್ರೇಲಿಯಾ ಭರ್ಜರಿ ತಂತ್ರ ರೂಪಿಸಿದೆ.
ಪ್ರಸ್ತುತ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ತವರಿನಲ್ಲಿ ಆಡುತ್ತಿದೆ. ಎರಡೂ ತಂಡಗಳು ಬಲಿಷ್ಠ ಆಟಗಾರರನ್ನು ಹೊಂದಿವೆ. ಆದರೆ ಇದೀಗ ಆಸ್ಟ್ರೇಲಿಯಾದ ಮಾಜಿ ಸ್ಪೋಟಕ ಬ್ಯಾಟರ್ ಡೇವಿಡ್ ವಾರ್ನರ್ ಅಚ್ಚರಿಯ ಹೇಳಿಕೆಯ ಮೂಲಕ ಟೀಮ್ ಇಂಡಿಯಾ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದ್ದಾರೆ. ಭಾರತ ವಿರುದ್ಧ ಆಡಲು ಸಿದ್ಧ ಎಂದು ವಾರ್ನರ್ ಹೇಳಿದ್ದಾರೆ.

ಡೇವಿಡ್ ವಾರ್ನರ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಈಗಾಗಲೇ ವಿದಾಯ ಹೇಳಿದ್ದಾರೆ. ಆದರೆ ಈಗ ಅವರು ಯು ಟರ್ನ್ ಹೊಡೆಯಲು ರೆಡಿಯಾಗಿದ್ದಾರೆ. ಮುಂಬರುವ ಭಾರತ ವಿರುದ್ಧ ಬಾರ್ಡರ್- ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ನವೆಂಬರ್ 22 ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಸರಣಿಗಾಗೆ ಸಿದ್ಧತೆ ಆರಂಭಿಸಿರುವ ವಾರ್ನರ್ ಶೆಫೀಲ್ಡ್ ಶೀಲ್ಡ್‌ನಲ್ಲಿ ಆಡಲು ಸಜ್ಜಾಗಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಡೇವಿಡ್ ವಾರ್ನರ್, 'ನಾನು ತಂಡದ ಪರ ಆಡಲು ಯಾವಾಗಲೂ ಲಭ್ಯವಿದ್ದೇನೆ. ಕೇವಲ ಫೋನ್ ಕರೆ ದೂರದಲ್ಲಿದ್ದು, ಯಾವಾಗಲೂ ಕ್ರಿಕೆಟ್ ಬಗ್ಗೆ ಗಂಭೀರವಾಗಿರುತ್ತೇನೆ. ಫೆಬ್ರವರಿ ನಂತರ ಆಸ್ಟ್ರೇಲಿಯಾ ಒಂದು ಟೆಸ್ಟ್ ಪಂದ್ಯವನ್ನು ಆಡಿದೆ. ನಾನು ಬಹುತೇಕ ಸಿದ್ಧನಾಗಿದ್ದೇನೆ. ಟೂರ್ನಿಯಲ್ಲಿ ಆಡಲು ಖುಷಿಯಾಗುತ್ತದೆ. ಕೆಲವು ಕಾರಣಗಳಿಗಾಗಿ ಆಟಕ್ಕೆ ವಿದಾಯ ಹೇಳಿದ್ದೇನೆ. ಆದರೆ ನಾನು ಯಾವಾಗಲೂ ತಂಡವನ್ನು ಮುನ್ನಡೆಸುತ್ತೇನೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಗೆ ನಿಜವಾಗಿಯೂ ನನ್ನ ಅಗತ್ಯವಿದ್ದರೆ, ಮುಂದಿನ ಶೀಲ್ಡ್ ಆಟವನ್ನು ಆಡಲು ನಾನು ಸಿದ್ಧನಿದ್ದೇನೆ. ಅವರಿಗೆ ಯಾರಾದರೂ ತೀರಾ ಅಗತ್ಯವಿದ್ದರೆ, ನಾನು ಸಿದ್ಧ. ಇದರಿಂದ ನಾನು ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.
ವಾರ್ನರ್ ನಿವೃತ್ತಿಯ ನಂತರ ಆಸ್ಟ್ರೇಲಿಯಾ ಅವರ ಸ್ಥಾನದಲ್ಲಿ ಸ್ಟೀವ್ ಸ್ಮಿತ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಿತ್ತು. ಆದರೆ ಈ ಪ್ರಯೋಗ ವಿಫಲವಾಯಿತು. ಸ್ಮಿತ್ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ 28.50 ಸರಾಸರಿಯಲ್ಲಿ ಕೇವಲ 171 ರನ್ ಗಳಿಸಿದ್ದರು. ಇದರೊಂದಿಗೆ, ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಸ್ಮಿತ್ ಎಂದಿನಂತೆ ತಮ್ಮ ನಾಲ್ಕನೇ ಸ್ಥಾನದಲ್ಲಿ ಆಡಲಿದ್ದಾರೆ ಎಂದು ಇತ್ತೀಚೆಗೆ ಆಸ್ಟ್ರೇಲಿಯಾದ ಮುಖ್ಯ ಆಯ್ಕೆಗಾರ ಜಾರ್ಜ್ ಬೈಲಿ ಸ್ಪಷ್ಟಪಡಿಸಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ಉಸ್ಮಾನ್ ಖವಾಜಾ ಅವರೊಂದಿಗೆ ಇನ್ನಿಂಗ್ಸ್ ತೆರೆಯಲು ಪಾಲುದಾರನನ್ನು ಹುಡುಕುತ್ತಿದೆ. ಟ್ರಾವಿಸ್ ಹೆಡ್ ಪ್ರಬಲ ಅಭ್ಯರ್ಥಿಯಂತೆ ಕಾಣುತ್ತಿದ್ದಾರೆ. ಆದರೆ, ಗಾಯದಿಂದಾಗಿ ಸರಣಿಯಿಂದ ಹೊರಗುಳಿದಿರುವ ಕ್ಯಾಮರೂನ್ ಗ್ರೀನ್ ಅವರ ಸ್ಥಾನದಲ್ಲಿ ಆಡುವ ಸಾಧ್ಯತೆಯಿದೆ. ಇದರೊಂದಿಗೆ ಆಸ್ಟ್ರೇಲಿಯಾ ಮತ್ತೊಬ್ಬ ಆರಂಭಿಕ ಆಟಗಾರನನ್ನು ಸರಣಿಗೆ ಪರಿಗಣಿಸಬಹುದು. ವಾರ್ನರ್ ಅವರ ಪ್ರಸ್ತಾಪವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪರಿಗಣಿಸಿದರೆ, ಸಮಸ್ಯೆ ಬಗೆಹರಿಯಲಿದೆ ಎನ್ನುತ್ತಾರೆ ಕ್ರಿಕೆಟ್ ಪಂಡಿತರು.