
ಸಿಡ್ನಿ, ಮಾರ್ಚ್ 24: ಕೊರೊನಾವೈರಸ್‌ನಿಂದಾಗಿ ಎಲ್ಲಾ ಕ್ರೀಡಾ ಸ್ಪರ್ಧೆಗಳು ರದ್ದಾಗಿರುವಾಗ, ಯಾವಾಗಲೂ ಬ್ಯುಸಿಯಾಗಿ ಇರುತ್ತಿದ್ದ ಕ್ರೀಡಾಪಟುಗಳು ಈ ಅನಿವಾರ್ಯ ಬಿಡುವಿನಲ್ಲಿ ಏನು ಮಾಡುತ್ತಿದ್ದಾರೆ ಅನ್ನೋದನ್ನು ಹೆಚ್ಚಿನವರು ಅವರಾಗೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಕೂಡ ತನ್ನನ್ನು ಬ್ಯುಸಿಯಾಗಿಟ್ಟುಕೊಳ್ಳಲು ಹೊಸ ದಾರಿ ಕಂಡುಕೊಂಡಿದ್ದಾರೆ.
ಆತಂಕಕಾರಿಯಾಗಿ ಹಬ್ಬುತ್ತಿರುವ ಕೊರೊನಾವೈರಸ್‌ನಿಂದಾಗಿ ಕ್ರೀಡಾಸ್ಪರ್ಧೆಗಳು, ಪ್ರಮುಖ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಹೀಗಾಗಿ ಮನೆಯಲ್ಲೇ ಇರಬೇಕಾದ ಅನಿವಾರ್ಯತೆಯಲ್ಲಿ ಕ್ರೀಡಾಪಟುಗಳು ಇದ್ದಾರೆ. ಕೋವಿಡ್ 19ನಿಂದ ಪಾರಾಗಲು ಮನೆಯಲ್ಲೇ ಸುರಕ್ಷಿತವಾಗಿ ಉಳಿದುಕೊಳ್ಳೋದು ಎಂಬುದನ್ನು ಎಲ್ಲಾ ದೇಶಗಳೂ ಒಪ್ಪಿಕೊಂಡಿವೆ ಕೂಡ.
ಆದರೆ ಯಾವಗಲೂ ಏನಾದರೊಂದು ಚಟುವಟಿಕೆ, ಅಭ್ಯಾಸದಲ್ಲಿರುವ ಕ್ರೀಡಾಪಟುಗಳಿಗೆ ಮನೆಯಲ್ಲಿ ಸುಮ್ಮನೆ ಕೂರಲಾಗುತ್ತಿಲ್ಲ. ಡೇವಿಡ್ ವಾರ್ನರ್ ಕೂಡ ಮನೆಯಲ್ಲೇ ಕ್ರಿಕೆಟ್ ಅಭ್ಯಾಸದಲ್ಲಿ ತೊಡಗಿದ್ದಾರೆ. ಆದರೆ ಟೆನಿಸ್ ಬ್ಯಾಟ್, ಬಾಲ್ ಮೂಲಕ ವಾರ್ನರ್ ಕ್ರಿಕೆಟ್ ಅಭ್ಯಾಸ ನಡೆಸುತ್ತಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ವಾರ್ನರ್ ವೀಡಿಯೋವೊಂದನ್ನು ಹಾಕಿಕೊಂಡಿದ್ದಾರೆ. ಇದರಲ್ಲಿ ವಾರ್ನರ್, ಟೆನಿಸ್ ಬಾಲ್, ಬ್ಯಾಟ್ ಮೂಲಕ 'ಕ್ಯಾಚ್' ಅಭ್ಯಾಸ ನಡೆಸುತ್ತಿರುವ ದೃಶ್ಯವಿದೆ. 'ಕ್ಯಾಚಿಂಗ್ ಅಭ್ಯಾಸದ ಮೂಲಕ ಕ್ರಿಕೆಟ್‌ನ ಕೌಶಲ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ,' ಎಂದು ಡೇವಿಡ್ ಸಾಲೊಂದನ್ನೂ ಬರೆದುಕೊಂಡಿದ್ದಾರೆ.