ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ ಹಲವು ಸ್ಟಾರ್ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಏಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಸೂಪರ್ ಸ್ಟಾರ್‌ಗಳ ಹೆಸರುಗಳು ಸಹ ಐಪಿಎಲ್ ಹರಾಜು ಅಂಗಳದಲ್ಲಿ ಕೇಳಿಸಲಿದೆ. ನಿವೃತ್ತಿಯನ್ನು ಹೊಂದಿದ ಆಟಗಾರರ ಪಟ್ಟಿಯನ್ನು ನೋಡಿದರೆ ಅದರಲ್ಲಿ ಎದ್ದು ಕಾಣುವ ಹೆಸರು ಡೇವಿಡ್ ವಾರ್ನರ್. ಆಸ್ಟ್ರೇಲಿಯಾ ತಂಡದ ಮಾಜಿ ಸ್ಫೋಟಕ ಬ್ಯಾಟರ್, ಈ ಬಾರಿ ಹರಾಜಿನಲ್ಲಿ ಮಾಲೀಕರ ಚಿತ್ತ ಕದಿಯಲು ಸಿದ್ಧರಾಗಿದ್ದಾರೆ.
17ನೇ ಆವೃತ್ತಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಿದ್ದ ಡೇವಿಡ್ ವಾರ್ನರ್ ಅವರನ್ನು ಕ್ಯಾಪಿಟಲ್ಸ್ ಕೈ ಬಿಟ್ಟಿದೆ. ಹೀಗಾಗಿ ಅನುಭವಿ ಬ್ಯಾಟರ್ ಹರಾಜು ಅಂಗಳದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಇವರು ಒಬ್ಬ ಮಲ್ಟಿ ಟ್ಯಾಲೆಂಟೆಡ್ ಪ್ಲೇಯರ್. ಆರಂಭಿಕರಾಗಿ ಕಣಕ್ಕೆ ಇಳಿದು, ರನ್ ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಇವರನ್ನು ಕೊಳ್ಳಲು ಐಪಿಎಲ್ ಹಲವು ಮಾಲೀಕರು ಹಣದ ಹೊಳೆಯನ್ನೇ ಹರಿಸಬಲ್ಲರು. ಆದರೆ ಈ ಮೂರು ತಂಡಗಳು ಮಾತ್ರ ಇವರಿಗೆ ಹೆಚ್ಚಿನ ಬಾಜಿ ಕಟ್ಟಲು ಸಿದ್ಧವಾಗಿವೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಹರಾಜಿನಲ್ಲಿ ಸ್ಟಾರ್ ಆಟಗಾರರಿಗೆ ಮಣೆ ಹಾಕಲಿದೆ. ಈ ಮೂಲಕ 17 ಆವೃತ್ತಿಗಳಲ್ಲಿ ಮಾಯಾ ಜಿಂಕೆಯಂತೆ ಕಾಡಿರುವ ಟ್ರೋಫಿಯನ್ನು ಎತ್ತಲು ಪ್ಲ್ಯಾನ್ ಮಾಡಿಕೊಂಡಿದೆ. ಈ ಬಾರಿ ವಿರಾಟ್ ಕೊಹ್ಲಿಗೆ ಆರಂಭಿಕ ಬ್ಯಾಟರ್ ಹುಡುಕಾಟವನ್ನು ಆರ್‌ಸಿಬಿ ನಡೆಸಲಿದೆ.
ಈ ನಿಟ್ಟಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೈ ಬಿಟ್ಟಿರುವ ಡೇವಿಡ್ ವಾರ್ನರ್ ಬೆಸ್ಟ್ ಚಾಯ್ಸ್. ಇವರು ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡಬಲ್ಲರು. ಅಲ್ಲದೆ ಎದುರಾಳಿ ಬೌಲರ್‌ಗಳನ್ನು ಕಾಡಬಲ್ಲ ಕ್ಷಮತೆ ಹೊಂದಿದ್ದಾರೆ. ಆರ್‌ಸಿಬಿ ಯಾವುದೇ ವಿದೇಶಿ ಪ್ಲೇಯರ್‌ನ್ನು ಉಳಿಸಿಕೊಂಡಿಲ್ಲ. ಹೀಗಾಗಿ ಡೇವಿಡ್ ವಾರ್ನರ್ ಅವರನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಿರಿಯ ಹಾಗೂ ಭವಿಷ್ಯದ ತಾರೆಗಳನ್ನು ತಂಡದಲ್ಲಿ ಉಳಿಸಿಕೊಂಡಿದೆ. ಚೆನ್ನೈ ತಂಡ ಒಬ್ಬ ಬೆಸ್ಟ್ ಆರಂಭಿಕ ಆಟಗಾರನ ಹುಡುಕಾಟದಲ್ಲಿದೆ. ಈ ವೇಳೆ ವಾರ್ನರ್ ಉತ್ತಮ ಆಯ್ಕೆ. ಇವರು ತಂಡಕ್ಕೆ ಸೇರಿದರೆ, ರುತುರಾಜ್ ಗಾಯಕ್ವಾಡ್ ಜೊತೆಗೆ ರೈಟ್ ಹಾಗೂ ಲೆಫ್ಟ್ ಕಾಂಬಿನೇಷನ್‌ನಲ್ಲಿ ಬ್ಯಾಟಿಂಗ್ ನಡೆಸಬಲ್ಲರು. ಅಲ್ಲದೆ ತಂಡಕ್ಕೆ ಅಗತ್ಯವಿದ್ದರೆ ಇವರು ನಾಯಕನ ಪಾತ್ರವನ್ನು ನಿಭಾಯಿಸಬಲ್ಲರು. ಇವರ ಮುಂದಾಳತ್ವದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿತ್ತು.
ಚೆನ್ನೈ, ಆರ್‌ಸಿಬಿ ತಂಡಗಳಂತೆ ಆಸ್ಟ್ರೇಲಿಯಾದ ಆಟಗಾರನಿಗೆ ಬಾಜಿ ಕಟ್ಟಲು ಪಂಜಾಬ್ ಕಿಂಗ್ಸ್ ಸಹ ಪ್ಲ್ಯಾನ್ ಮಾಡಿಕೊಂಡಿದೆ. ರಿಕಿ ಪಾಂಟಿಂಗ್ ಅವರಿಗೆ ಡೇವಿಡ್ ವಾರ್ನರ್ ಅವರ ಕ್ಷಮತೆ ಚೆನ್ನಾಗಿ ತಿಳಿದುರುವದರಿಂದ ಇವರನ್ನು ತಂಡಕ್ಕೆ ಸೇರಿಸಿಕೊಂಡರೆ ಏನೆಲ್ಲಾ ಲಾಭಗಳು ಆಗುತ್ತವೆ ಎಂಬ ಅರಿವು ಅವರಿಗಿದೆ. ಅಲ್ಲದೆ ಇವರ ತಂಡದಲ್ಲಿ ಸದ್ಯ ಖಾಲಿ ಇರುವ ಆರಂಭೀಕ ಆಟಗಾರನ ಸ್ಥಾನಕ್ಕೆ ಇವರು ಸೂಕ್ತ ಆಟಗಾರ.