ನಾನೆಂದೂ ಈ ಪ್ರವಾಸ ಮರೆಯಲಾರೆ: ಲಂಕಾ ಕ್ರಿಕೆಟ್ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದ ವಾರ್ನರ್

ಎರಡನೇ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸುವ ಮೂಲಕ ಆಸ್ಟ್ರೇಲಿಯಾದ ಶ್ರೀಲಂಕಾ ಪ್ರವಾಸ ಅಂತ್ಯವಾಗಿದೆ. ಈ ಪ್ರವಾಸದಲ್ಲಿ ಆಸ್ಟ್ರೇಲಿಯಾ ತಂಡ ಮಿಶ್ರ ಅನುಭವವನ್ನು ಪಡೆದುಕೊಂಡಿದೆ. ಟಿ20 ಸರಣಿಯನ್ನು ಗೆದ್ದುಕೊಂಡ ಬಳಿಕ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ಸೋಲು ಅನುಭವಿಸಿತ್ತು. ನಂತರ ಟೆಸ್ಟ್ ಸರಣಿಯಲ್ಲಿ 1-1 ಅಂತರದಿಂದ ಡ್ರಾ ಮಾಡಿಕೊಂಡಿದೆ.
ಈ ಪ್ರವಾಸದ ಮುಕ್ತಾಯದ ಬಳಿಕ ಆಸ್ಟ್ರೇಲಿಯಾದ ಆರಂಬಿಕ ಆಟಗಾರ ಡೇವಿಡ್ ವಾರ್ನರ್ ಶ್ರೀಲಂಕಾ ಪ್ರವಾಸದ ಬಗ್ಗೆ ಭಾವನಾತ್ಮಕವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಪ್ರವಾಸದಲ್ಲಿ ಶ್ರೀಲಂಕಾ ಕ್ರಿಕೆಟ್ ಅಭಿಮಾನಿಗಳು ನೀಡಿದ ಪ್ರೀತಿಯನ್ನು ಎಂದಿಗೂ ನಾನು ಮರೆಯುವುದಿಲ್ಲ ಎಂದಿದ್ದಾರೆ ಡೇವಿಡ್ ವಾರ್ನರ್. ತಮ್ಮ ಸಂಕಷ್ಟದ ಸಂದರ್ಭದಲ್ಲಿಯೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮೇಲೆ ತೋರಿಸಿರುವ ಪ್ರೀತಿಯನ್ನು ವಾರ್ನರ್ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಕಠಿಣ ಸಂದರ್ಭದಲ್ಲಿ ಆತಿಥ್ಯ ನೀಡಿದ್ದಕ್ಕೆ ಧನ್ಯವಾದ
ಶ್ರೀಲಂಕಾ ತಂಡ ಆರ್ಥಿಕ ಹಾಗೂ ರಾಜಕೀಯವಾಗಿ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಆರ್ಥಿಕ ಸಂಕಷ್ಟದ ಬಳಿಕ ಇದೀಗ ಪ್ರಭುತ್ವದ ವಿರುದ್ಧ ಜನ ದಂಗೆ ಎದ್ದಿದ್ದು ದೇಶದಲ್ಲಿ ಅರಾಜಕತೆ ಉಂಟಾಗಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ಶ್ರೀಲಂಕಾ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. "ಅತ್ಯಂತ ಕಠಿಣ ಸಂದರ್ಭದಲ್ಲಿಯೂ ನಮಗೆ ಆತಿಥ್ಯ ನೀಡಿದ್ದಕ್ಕೆ ಶ್ರೀಲಂಕಾಗೆ ಧನ್ಯವಾದಗಳು. ಇಂತಾ ಸಂದರ್ಭದಲ್ಲಿ ನಾವು ಇಷ್ಟ ಪಡುವ ಕ್ರಿಡೆಯನ್ನು ಆಡಲು ಸಾಧ್ಯವಾಗಿದ್ದಕ್ಕೆ ಕೃತಜ್ಞರಾಗಿದ್ದೇವೆ. ನೀವೆಲ್ಲರೂ ನಮಗೆ ಅದ್ಭುತವಾಗಿ ಬೆಂಬಲವನ್ನು ನೀಡಿದ್ದೀರಿ. ನಿಮ್ಮ ಎರಡೂ ಕೈಗಳನ್ನು ನಮಗೆ ನೀಡಿ ಆಲಂಗಿಸಿದ್ದೀರಿ. ನಾವೆಂದಿಗೂ ಈ ಪ್ರವಾಸವನ್ನು ಮರೆಯುವುದಿಲ್ಲ" ಎಂದಿದ್ದಾರೆ ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್.

ಸಂಕಷ್ಟದ ಸಂದರ್ಭದಲ್ಲಿಯೂ ನಗುಮುಖ
"ನಿಮ್ಮ ದೇಶದ ವಿಚಾರವಾಗಿ ನನಗೆ ಅತ್ಯಂತ ಇಷ್ಟವಾಗುವ ಸಂಗತಿ ಏನು ಗೊತ್ತಾ? ಎಂಥಾದ್ದೇ ಸಂಕಷ್ಟದ ಸಂದರ್ಭವಿರಲಿ. ನೀವು ನಿಮ್ಮ ಮುಖದಲ್ಲಿನ ನಗುವನ್ನು ಕಳೆದುಕೊಂಡಿಲ್ಲ ಹಾಗೂ ನೀವು ಯಾವಾಗಲೂ ಸ್ವಾಗತ ನೀಡುತ್ತೀರಿ" ಎಂದು ವಾರ್ನರ್ ಶ್ರೀಲಂಕಾ ಜನರಿಂದ ದೊರೆತ ಪ್ರೀತಿಯನ್ನು ಪದಗಳಲ್ಲಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಖಂಡಿತವಾಗಿಯೂ ಮುಂದೆ ತಾನು ಒಂದು ದಿನದ ಪ್ರವಾಸಕ್ಕಾಗಿ ಶ್ರೀಲಂಕಾಗೆ ಆಗಮಿಸಲಿದ್ದೇನೆ ಎಂದಿದ್ದಾರೆ ವಾರ್ನರ್.

ಶ್ರೀಲಂಕಾದಲ್ಲಿ ಅರಾಜಕ ಪರಿಸ್ಥಿತಿ
ದ್ವೀಪರಾಷ್ಟ್ರ ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ಅತ್ಯಂತ ಹೀನಾಯ ಸ್ಥಿತಿಗೆ ತಲುಪಿದೆ. ಹೀಗಾಗಿ ಶ್ರೀಲಂಕಾ ಜನ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದು ಶ್ರೀಲಂಕಾದ ಅಧ್ಯಕ್ಷರ ನಿವಾಸಕ್ಕೆ ನುಗ್ಗಿ ಕ್ಷಿಪ್ರಕ್ರಾಂತಿ ನಡೆಸಿದ್ದಾರೆ. ಈ ಕ್ರಾಂತಿಗೆ ಬೆದರಿರುವ ಶ್ರೀಲಂಕಾ ಅಧ್ಯಕ್ಷರಾಗಿದ್ದ ಗೊಟಬಯ ರಾಜಪಕ್ಸೆ ತಲೆಮರೆಸಿಕೊಂಡಿದ್ದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕಡೆಗೂ ಘೋಷಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications