DC vs CSK: ಮಹತ್ವದ ಪಂದ್ಯದಲ್ಲಿ ಸಿಎಸ್‌ಕೆ ಡೆಲ್ಲಿ ಸವಾಲು
ನವದೆಹಲಿ: 19ನೇ ಆವೃತ್ತಿ ಐಪಿಎಲ್‌ನ 48ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿನ ಕನಸು ಕಾಣುತ್ತಿವೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಳ್ಳುವ ಬಯಕೆ ಎರಡೂ ತಂಡಗಳದ್ದಾಗಿದೆ.
ಉಭಯ ತಂಡಗಳು ಅಂಕಪಟ್ಟಿಯಲ್ಲಿ ಹಿಂದೆ ಮುಂದೆ ನಿಂತಿವೆ. ಚೆನ್ನೈ ತಂಡ ಆಡಿದ 9 ಪಂದ್ಯಗಳಲ್ಲಿ 4 ಜಯ, 5 ಸೋಲು ಕಂಡಿದ್ದು, 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಸಹ ಆಡಿದ 9 ಪಂದ್ಯದಲ್ಲಿ 4 ಗೆಲುವು ಸಾಧಿಸಿದ್ದು, 8 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಪ್ಲೇ ಆಫ್ ಪ್ರವೇಶಿಸುವ ಕನಸು ನನಸಾಗಿಟ್ಟುಕೊಳ್ಳುವ ಆಸೆ ಹೊಂದಿವೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಸ್ಟಾರ್ ಆಟಗಾರರು ಇದ್ದಾರೆ. ಡೆಲ್ಲಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಎಂದೇ ಖ್ಯಾತಿ ಪಡೆದಿರುವ ಕೆಎಲ್ ರಾಹುಲ್ (433 ರನ್) ಗರಿಷ್ಠ ರನ್ ಸಾಧಕರ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಟ್ರಿಸ್ಟನ್ ಸ್ಟಬ್ಸ್ (219 ರನ್), ಸಮೀರ್ ರಿಜ್ವಿ, ಪತುಮ್ ನಿಸ್ಸಂಕಾ ಸಹ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದು ತಂಡದ ಚಿಂತೆಯನ್ನು ದೂರ ಮಾಡಿದೆ. ಉಳಿದ ಬ್ಯಾಟರ್‌ಗಳು ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡುವ ಅನಿವಾರ್ಯತೆ ಇದೆ.
ಸ್ಟಾರ್ಕ್ ಬಲ
ಆಸ್ಟ್ರೇಲಿಯಾ ತಂಡದ ಸ್ಟಾರ್ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ತಂಡ ಸೇರಿಕೊಂಡಿದ್ದು ತಂಡದ ಮನೋಬಲವನ್ನು ಹೆಚ್ಚಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಜಯ ಸಾಧಿಸುವಲ್ಲಿ ಸ್ಟಾರ್ಕ್ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಉಳಿದಂತೆ ಕೈ ಜೇಮಿಸನ್, ಟಿ ನಟರಾಜನ್ ಸರಿಯಾದ ಸ್ಥಳದಲ್ಲಿ ಬೌಲಿಂಗ್ ನಡೆಸುವ ಅನಿವಾರ್ಯತೆ ಇದೆ. ಇನ್ನು ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಅಕ್ಷರ್ ಪಟೇಲ್ ಹಾಗೂ ಕುಲ್‌ದೀಪ್ ಯಾದವ್ ಕಮಾಲ್ ಪ್ರದರ್ಶನ ನೀಡಬೇಕಿದೆ. ಅಂದಾಗ ಎರಡು ಅಂಕದ ಕನಸು ನನಸಾಗುತ್ತದೆ.
ಕಾರ್ತಿಕ್ ಶರ್ಮಾ ಆಕರ್ಷಣೆ
ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಂದು ಜಯದ ಕನಸು ಕಾಣುತ್ತಿದೆ. ಆರಂಭಿಕರಾದ ಸಂಜು ಸ್ಯಾಮ್ಸನ್, ರುತುರಾಜ್ ಗಾಯಕ್ವಾಡ್ ದೊಡ್ಡ ಇನಿಂಗ್ಸ್ ಕಟ್ಟುವ ಅನಿವಾರ್ಯತೆ ಇದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಜ್ ಖಾನ್, ಶಿವಂ ದುಬೆ, ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಕಾರ್ತಿಕ್ ಶರ್ಮಾ ಪ್ರಮುಖ ಆಕರ್ಷಣೆ ಆಗಲಿದ್ದಾರೆ.

ಚೆನ್ನೈ ಬೌಲಿಂಗ್ ವಿಭಾಗವನ್ನು ಅನ್ಶುಲ್ ಕಾಂಬೋಜ್, ಜೇಮಿ ಓವರ್‌ಟನ್ ತಮ್ಮ ಬಿಗುವಿನ ದಾಳಿಯ ಮೂಲಕ ಎದುರಾಳಿಗಳನ್ನು ಕಾಡಬೇಕಿದೆ. ಇನ್ನು ಸ್ಪಿನ್ ಬೌಲಿಂಗ್‌ನಲ್ಲಿ ನೂರ್ ಅಹ್ಮದ್ ಲಯಕ್ಕೆ ಮರಳಿದ್ದು ವಿಶ್ವಾಸ ಮೂಡಿಸಿದ್ದಾರೆ. ಮಂಗಳವಾರದ ಪಂದ್ಯದಲ್ಲಿ ಗೆಲ್ಲುವುದು ಯಾರು? ಎಂಬ ಪ್ರಶ್ನೆಗೆ ರಾತ್ರಿಯ ವೇಳೆ ಉತ್ತರ ಸಿಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications