ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ 29ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುಂಬೈ ಇಂಡಿಯನ್ಸ್ 12 ರನ್‌ಗಳಿಂದ ಸೋಲಿಸಿದೆ. ಇದರೊಂದಿಗೆ ಮುಂಬೈ ಇಂಡಿಯನ್ಸ್ ಗೆಲುವಿನ ಹಾದಿಗೆ ಮರಳಿದೆ. ಮುಂಬೈ ಇಂಡಿಯನ್ಸ್ ಸತತ ಸೋಲಿನಿಂದ ಕಂಗೆಟ್ಟಿತ್ತು. ತವರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಐದನೇ ಗೆಲುವಿನ ಕನಸು ಭಗ್ನವಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 205 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ 19 ಓವರ್‍ಗಳಲ್ಲಿ 193 ರನ್‌ಗಳಿಗೆ ಆಲೌಟಾಯಿತು. ಈ ಮೂಲಕ ಮುಂಬೈ ಐಪಿಎಲ್ 2025 ರಲ್ಲಿ ಎರಡನೇ ಗೆಲುವು ದಾಖಲಿಸಿತು.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ತಂಡ ಗೆಲುವಿನ ಹೊಸ್ತಿಲಲ್ಲಿತ್ತು. ಆದರೆ ಕೊನೆಯಲ್ಲಿ ತಂಡವು 64 ರನ್‌ಗಳೊಳಗೆ 9 ವಿಕೆಟ್‌ಗಳನ್ನು ಕಳೆದುಕೊಂಡಿತು. ಅದರಲ್ಲಿ ಸತತ ಮೂರು ರನ್ ಔಟ್‌ಗಳ ಪಂದ್ಯದ ಗತಿಯನ್ನು ಬದಲಾಯಿಸಿತು. ಇಷ್ಟೇ ಅಲ್ಲ, ಒಬ್ಬ ಬ್ಯಾಟರ್ ಕೂಡ ಸ್ಟಂಪಿಂಗ್‌ಗೆ ಬಲಿಯಾದರು. ಕರುಣ್ ನಾಯರ್ ಡೆಲ್ಲಿ ಪರ 89 ರನ್‌ಗಳ ಇನ್ನಿಂಗ್ಸ್ ಆಡಿ ಮಿಂಚಿದರು. ಆದರೆ, ದುರದೃಷ್ಟವಶಾತ್ ಅವರ ಏಕಾಂಗಿ ಹೋರಾಟ ವ್ಯರ್ಥವಾಯಿತು.
ಮುಂಬೈ ನೀಡಿದ 206 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡವು ಉತ್ತಮ ಆರಂಭವನ್ನು ನೀಡಿತು. ಮೊದಲ ವಿಕೆಟ್ 0 ರನ್‌ಗಳಿಗೆ ಪತನವಾದರೂ, ಎರಡನೇ ವಿಕೆಟ್ 119 ರನ್‌ಗಳಿಗೆ ಪತನವಾಯಿತು. ಕರುಣ್ ನಾಯರ್ ಕೇವಲ 40 ಎಸೆತಗಳಲ್ಲಿ 12 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಿಂದ 89 ರನ್ ಗಳಿಸಿದರು. ಕರುಣ್ ಔಟಾದ ನಂತರ ಡೆಲ್ಲಿ ತಂಡ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದರು.
ಜೇಕ್ ಫ್ರೇಸರ್-ಮೆಕ್‌ಗುರ್ಕ್ (0), ಅಭಿಷೇಕ್ ಪೊರೆಲ್ (33), ಕೆಎಲ್ ರಾಹುಲ್ (15), ಟ್ರಿಸ್ಟಾನ್ ಸ್ಟಬ್ಸ್ (1), ಅಕ್ಷರ್ ಪಟೇಲ್ (9), ಅಶುತೋಷ್ ಶರ್ಮಾ (17), ವಿಪ್ರಜ್ ನಿಗಮ್ (14), ಕುಲ್ದೀಪ್ ಯಾದವ್ (1), ಮೋಹಿತ್ ಶರ್ಮಾ (0) ವಿಕೆಟ್ ಕಳೆದುಕೊಂಡು ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಮಿಚೆಲ್ ಸ್ಟಾರ್ಕ್ 1 ರನ್ ಗಳಿಸಿ ಅಜೇಯರಾಗುಳಿದರು.
ಕೊನೆಯಲ್ಲಿ ಡೆಲ್ಲಿ ತಂಡಕ್ಕೆ 9 ಎಸೆತಗಳಲ್ಲಿ 15 ರನ್‌ಗಳು ಬೇಕಾಗಿತ್ತು. 18ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಅಶುತೋಷ್ ಶರ್ಮಾ ಔಟಾದರು, ನಂತರ ಕುಲದೀಪ್ ಮತ್ತು ಮೋಹಿತ್ ಕೂಡ ರನೌಟ್‌ಗೆ ಬಲಿಯಾದರು.
ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಮೊದಲು ಬೌಲಿಂಗ್ ನಿರ್ಧರಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಮತ್ತು ರಯಾನ್ ರಿಕೆಲ್ಟನ್ ಉತ್ತಮ ಆರಂಭ ನೀಡಿದರು. ರೋಹಿತ್ ಶರ್ಮಾ ಕೂಡ ಸ್ಥಿರ ಪ್ರದರ್ಶನ ನೀಡುವ ರೀತಿ ಕಾಣಿಸಿಕೊಂಡರು. ಆದರೆ, ರೋಹಿತ್ 12 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು. ನಂತರ ರಯಾನ್ ರಿಕೆಲ್ಟನ್ ಮತ್ತು ಸೂರ್ಯಕುಮಾರ್ ಯಾದವ್ ಉತ್ತಮ ಜೊತೆಯಾಟ ಆಡಿದರು.
ರಯಾನ್ ರಿಕೆಲ್ಟನ್ 25 ಎಸತೆಗಳಲ್ಲಿ 41 ರನ್ ಗಳಿಸಿ ಔಟಾದರು. ಬಳಿಕ ಒಂದಾದ ತಿಲಕ್ ವರ್ಮಾ ಮತ್ತು ಸೂರ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ರನ್ ಸೇರಿಸಿದರು. ಡೆಲ್ಲಿ ಬೌಲರ್ಸ್ ಕಾಡಿದ ಈ ಜೋಡಿ 60 ರನ್‌ಗಳ ಜೊತೆಯಾಟ ಆಡಿದರು. ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದ ಸೂರ್ಯ 28 ಎಸೆತಗಲ್ಲಿ 40 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ನಂತರ ಬಂದ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಕೇವಲ 2 ರನ್ ಗಳಿಸಿ ಪೆವಿಲಿಯನ್ ಕಡೆ ಸಾಗಿದರು.
ಬಿರುಸಿನ ಬ್ಯಾಟಿಂಗ್ ಮಾಡಿದ ತಿಲಕ್ ವರ್ಮಾ 33 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 59 ರನ್ ಬಾರಿಸಿದರು. ಈ ಮೂಲಕ ತಿಲಕ್ ವರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು 200 ರನ್‌ಗಳ ಗಡಿ ದಾಟಿಸಿದರು. ಮತ್ತೊಂದೆಡೆ ಕೊನೆಯಲ್ಲಿ ನಮನ್ ಧೀರ್ 17 ಎಸೆತಗಳಲ್ಲಿ ಅಜೇಯ 38 ರನ್ ಗಳಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ವಿಪ್ರಜ್ ನಿಗಮ್ ಮತ್ತು ಕುಲ್‌ದೀಪ್ ಯಾದವ್ ತಲಾ 2 ವಿಕೆಟ್ ಪಡೆದರೆ, ಮುಖೇಶ್ ಕುಮಾರ್ 1 ವಿಕೆಟ್ ಕಬಳಿಸಿದರು.
ಡೆಲ್ಲಿ ಕ್ಯಾಪಿಟಲ್ಸ್: ಜೇಕ್ ಫ್ರೇಸರ್-ಮೆಕ್‌ಗುರ್ಕ್, ಅಭಿಷೇಕ್ ಪೊರೆಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್ (ನಾಯಕ), ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಮೋಹಿತ್ ಶರ್ಮಾ, ಕುಲ್ದೀಪ್ ಯಾದವ್, ಮುಖೇಶ್ ಕುಮಾರ್.
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್), ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ.