
ಪ್ರತಿ ಬಾರಿ ನೀವು ಗೆಲುವು ಸಾಧಿಸಲು ಸಾಧ್ಯವಾಗುವುದಿಲ್ಲ ಎಂಬ ಸಂದೇಶವನ್ನು ಡೆಲ್ಲಿ ತಂಡದ ಡೇವಿಡ್ ವಾರ್ನರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ವೇಳೆ ಡೇವಿಡ್ ವಾರ್ನರ್ ಕೇವಲ 38 ಎಸೆತಗಳಲ್ಲಿ 66 ರನ್‌ಗಳ ಭರ್ಜರಿ ಇನ್ನಿಂಗ್ಸ್‌ಗಳನ್ನು ಆಡಿದರು. ಆದಾಗ್ಯೂ, ಹಸರಂಗಾ ಅವರ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಗೆ ಬಲಿಯಾಗಿ ವಿಕೆಟ್ ಅರ್ಪಿಸಿದಾಗ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ವಾರ್ನರ್ ಅವರ ಮಕ್ಕಳು ನಿರಾಸೆಗೊಂಡಿರುವುದನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿತ್ತು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಪಂದ್ಯ ವೀಕ್ಷಣೆಗೆ ಆಗಮಿಸಿದ್ದ ವಾರ್ನರ್ ಅವರ ಪತ್ನಿ ಮತ್ತು ಮಕ್ಕಳು ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ಡೆಲ್ಲಿ ತಂಡದ ಪರವಾಗಿ ಚಿಯರ್ ಮಾಡುತ್ತಿದ್ದರು. ವಾರ್ನರ್ ಅವರ ಭರ್ಜರಿ ಹೊಡೆತಗಳಿಗೆ ಕುಣಿದು ಸಂತೋಷ ವ್ಯಕ್ತಪಡಿಸುತ್ತಿದ್ದ ಮಕ್ಕಳು, ಹಸರಂಗಾ ಅವರಿಗೆ ವಾರ್ನರ್ ವಿಕೆಟ್ ಒಪ್ಪಿಸಿದಾಗ ಹತಾಶೆಗೊಂಡಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಡೆಲ್ಲಿ ಕ್ಯಾಪಿಟಲ್ಸ್‌ಗಾಗಿ ಕಳೆದ ಎರಡು ಪಂದ್ಯಗಳಲ್ಲಿ ವಾರ್ನರ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಪೃಥ್ವಿ ಶಾ ಅವರೊಂದಿಗೆ ಮೊದಲ ವಿಕೆಟ್‌ಗೆ 50 ರನ್ ಜೊತೆಯಾಟದೊಂದಿಗೆ ಉತ್ತಮವಾಗಿ ಪ್ರಾರಂಭಿಸಿದರು. ಪೃಥ್ವಿ ಶಾ ಔಟಾದ ನಂತರ, ಗೆಲುವಿನ ಜವಾಬ್ದಾರಿಯನ್ನು ವಾರ್ನರ್ ತನ್ನ ಮೇಲೆ ವಹಿಸಿಕೊಂಡರು. 5 ಸಿಕ್ಸರ್, 4 ಬೌಂಡರಿಗಳ ಸಹಾಯದಿಂದ 66 ರನ್ ಗಳಿಸಿದ್ದರು. ಇದು ಅವರ ಸತತ ಎರಡನೇ ಅರ್ಧಶತಕವಾಗಿತ್ತು. ಆದ್ರೆ, ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗದೆ ಕೊನೆಯಲ್ಲಿ 16 ರನ್‌ಗಳಿಂದ ಡೆಲ್ಲಿ ಸೋಲು ಅನುಭವಿಸಬೇಕಾಯಿತು.
ಮಕ್ಕಳು ನಿರಾಶೆಗೊಂಡಿರುವ ಕ್ಷಣಗಳನ್ನು ನೋಡಿದ ವಾರ್ನರ್, ನಮ್ಮ ಮಕ್ಕಳು ಕ್ರಿಕೆಟ್ ಆಟವನ್ನು ಅರ್ಥಮಾಡಿಕೊಳ್ಳುವುದರ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದರು.

ಮಕ್ಕಳು ಪಂದ್ಯವನ್ನು ಅರ್ಥಮಾಡಿಕೊಳ್ಳುವ ಪ್ರೌಡಿಮೆ ಹೊಂದಿರುವುದು ಸಂತೋಷದ ಸಂಗತಿ. ಕ್ರೀಡಾಂಗಣದಲ್ಲಿ ನಮ್ಮ ಪ್ರತಿ ಚಲನವಲನಗಳನ್ನು ಅವರು ಗಮನಿಸುತ್ತಿದ್ದರು.ಬೌಂಡರಿಗಳಿಸಿದ ಸಂದರ್ಭದಲ್ಲಿ ಸಂಭ್ರಮಿಸಿರುವ ಮಕ್ಕಳು, ವಿಕೆಟ್ ನೀಡಿದಾಗ ನಿರಾಸೆಯ ಭಾವ ವ್ಯಕ್ತಪಡಿಸಿದ್ದಾರೆ. ನಾವು ಪ್ರತಿ ಬಾರಿ ವಿಜಯಶಾಲಿಯಾಗಲು ಸಾಧ್ಯವಿಲ್ಲ, ಎನೇ ಆಗಲಿ ನಾವು ಪ್ರತಿ ಬಾರಿ ಮೈದಾನಕ್ಕಿಳಿದಾಗಲೆಲ್ಲ ಗೆಲವು ಸಾಧಿಸಲುಪೂರ್ಣ ಪ್ರಮಾಣದಲ್ಲಿ ಪ್ರಯತ್ನಿಸುತ್ತೇವೆ ಎಂದು ವಾರ್ನರ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಮೆಗಾ ಹರಾಜಿನಲ್ಲಿ 6.25 ಕೋಟಿ ರೂ.ಗೆ ವಾರ್ನರ್ ಅವರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಡೇವಿಡ್ ವಾರ್ನರ್ ಇಲ್ಲಿಯವರೆಗೆ, 146 ಪಂದ್ಯಗಳಲ್ಲಿ 5417 ರನ್ ಗಳಿಸಿದ್ದಾರೆ.
ಈ ಆವೃತ್ತಿಯಲ್ಲಿ ಮೂರು ಪಂದ್ಯಗಳನ್ನಾಡಿರುವ ಅವರು, ಎರಡು ಅರ್ಧಶತಕದ ಸಹಾಯದಿಂದ 131 ರನ್ ಗಳಿಸಿದ್ದಾರೆ. ಒಟ್ಟು 6 ಪಂದ್ಯಗಳನ್ನಾಡಿರುವ ಡೆಲ್ಲಿ ತಂಡ 4ರಲ್ಲಿ ಜಯಶಾಲಿಯಾಗುವ ಮೂಲಕ 8 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 5 ಸ್ಥಾನದಲ್ಲಿದೆ.