ಮಸಾಜರ್ ಗೆ ಗೇಲ್ 'ಗುಪ್ತಾಂಗ ಪ್ರದರ್ಶಿಸಿದ್ರು' ಎಂದ ಮಾಧ್ಯಮಕ್ಕೆ ದಂಡ


ಸಿಡ್ನಿ, ಡಿಸೆಂಬರ್ 03: ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರು ಮೈದಾನದ ಒಳಗೂ ಹೊರಗೂ ಸದಾಕಾಲ ಮೋಜಿನ ಆಟಕ್ಕೆ ಹೆಸರಾದವರು. ಮೈದಾನದ ಹೊರಗಿನ ಅವರ ಚಟುವಟಿಕೆಗಳು ಯಾವಾಗಲೂ ಚರ್ಚೆಗೆ ಗ್ರಾಸವಾಗುತ್ತದೆ.
ಮೋಜು ಮಸ್ತಿಗೆ ಹೆಸರಾದ ಗೇಲ್ ಅವರು 2015ರ ವಿಶ್ವಕಪ್ ವೇಳೆ ಮಹಿಳಾ ಥೆರಪಿಸ್ಟ್ ಮುಂದೆ ತಮ್ಮ ಗುಪ್ತಾಂಗ ಪ್ರದರ್ಶಿಸಿದ್ದರು ಎಂದು ವರದಿ ಮಾಡಿದ್ದ ಫೇರ್ ಫಾಕ್ಸ್ ಮೀಡಿಯಾ ನ್ಯೂಸ್ ಪೇಪರ್ ಗೆ ಭಾರಿ ದಂಡ ಬಿದ್ದಿದೆ.
ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ ಸುಪ್ರೀಂಕೋರ್ಟಿನ ಜಸ್ಟೀಸ್ ಲೂಸಿ ಮೆಕ್ ಕಲಮ್ ಅವರು ಸೋಮವಾರ(ಡಿಸೆಂಬರ್ 03)ದಂದು ಮಹತ್ವದ ತೀರ್ಪು ನೀಡಿದ್ದಾರೆ. ಕ್ರಿಸ್ ಗೇಲ್ ಅವರಿಗೆ 3,00,000ಡಾಲರ್ ಮೊತ್ತವನ್ನು ನೀಡುವಂತೆ ಆಸ್ಟ್ರೇಲಿಯಾದ ಮಾಧ್ಯಮ ಸಂಸ್ಥೆಗೆ ಆದೇಶಿಸಿದ್ದಾರೆ.
2016ರಲ್ಲಿ ಫೇರ್ ಫಾಕ್ಸ್ ಮೀಡಿಯಾ, ಸಿಡ್ನಿ ಮಾರ್ನಿಂಗ್ ಹೆರಾಲ್ಡ್, ದಿ ಏಜ್ ಹಾಗೂ ದಿ ಕೆನ್ ಬೆರಾ ಟೈಮ್ಸ್ ಮುಂತಾದ ಮಾಧ್ಯಮಗಳು ಗೇಲ್ ವಿರುದ್ಧ ಸರಣಿ ವರದಿಗಳನ್ನು ಪ್ರಕಟಿಸಿದ್ದವು.
ನ್ಯೂಸೌತ್ ವೇಲ್ಸ್ ಕೋರ್ಟಿನ ಮುಂದೆ ಮಸಾಜರ್ ನೀಡಿರುವ ಹೇಳಿಕೆಯಲ್ಲಿ ಗೇಲ್ ಅವರ ಜತೆಗಿನ 2015ರ ವಿಶ್ವಕಪ್ ವೇಳೆ ಡ್ರೆಸಿಂಗ್ ರೂಮಿನಲ್ಲಿ ನಡೆದ ಘಟನೆ ವಿವರಗಳು ಬಹಿರಂಗವಾಗಿತ್ತು. ಆದರೆ, ಮಾಧ್ಯಮಗಳಲ್ಲಿ ಮಸಾಜರ್ ಹೇಳಿಕೆ ಸೇರಿದಂತೆ ಯಾವುದೇ ಅಂಶಕ್ಕೂ ಪೂರಕ ಸಾಕ್ಷಿ ಇರಲಿಲ್ಲ. ಹೀಗಾಗಿ, ಫೇರ್ ಫ್ಯಾಕ್ಸ್ ಮೀಡಿಯಾ ವಿರುದ್ಧ ತೀರ್ಪು ಬಂದಿದೆ.

ಮಸಾಜರ್ ಲೀನ್ ರಸೆಲ್ ನೀಡಿದ್ದ ಹೇಳಿಕೆ
ನ್ಯೂ ಸೌತ್ ವೇಲ್ಸ್ ಕೋರ್ಟಿನ ಮುಂದೆ ಮಸಾಜರ್ ಲೀನ್ ಅವರು ನೀಡಿದ ಹೇಳಿಕೆ ಸಾರಾಂಶ:
ಗೇಲ್ : 'ಏನನ್ನು ದಿಟ್ಟಿಸಿ ನೋಡುತ್ತಿದ್ದೀಯಾ?' ಎಂದು ಕೇಳಿದರು.
'ನಾನು 'ಟವೆಲ್' ಎಂದು ಉತ್ತರಿಸಿದೆ. ತಕ್ಷಣ ಅವರು ಅವರ ಗುಪ್ತಾಂಗದ ಮೇಲಿದ್ದ ಟವೆಲ್ ಎಳೆದುಬಿಟ್ಟರು. ನಾನು ಅವರ ಶಿಶ್ನದ ಅರ್ಧ ಭಾಗವನ್ನು ನೋಡಿದೆ. ಅವರು ನಗುತ್ತಿದ್ದರು.
ಮಸಾಜ್ ಮಾಡಲಾರೆ ಕ್ಷಮಿಸಿ ಎಂದು ಹೇಳಿ, ಅಲ್ಲಿಂದ ಹೊರಟೆ. ಇದಾದ ಬಳಿಕ ನಾನು ವೆಸ್ಟ್ ಇಂಡೀಸ್ ನ ಫಿಜಿಯೋ ಥೆರಪಿಸ್ಟ್ ಗೆ ಘಟನೆ ಬಗ್ಗೆ ಹೇಳಿದೆ.
ನನಗೆ ತೀವ್ರವಾಗಿ ಆಘಾತವಾಯಿತು. ನಂತರ ನನ್ನ ರೂಮಿಗೆ ಹೋಗಿ ಮಕ್ಕಳಂತೆ ಗಳಗಳನೆ ಕಣ್ಣೀರಿಟ್ಟೆ ಎಂದು ಕೋರ್ಟ್ ಮುಂದೆ ಲೀನ್ ರಸೆಲ್ ಹೇಳಿದ್ದರು.

2015ರ ವಿಶ್ವಕಪ್ ವೇಳೆ ಡ್ರೆಸಿಂಗ್ ರೂಮಿನಲ್ಲಿ
2015ರ ವಿಶ್ವಕಪ್ ವೇಳೆ ಡ್ರೆಸಿಂಗ್ ರೂಮಿನಲ್ಲಿ ಈ ಘಟನೆ ನಡೆದಿದ್ದು, ಮಸಾಜ್ ಮಾಡಲು ಬಂದಿದ್ದ ಮಹಿಳಾ ಥೆರಪಿಸ್ಟ್ ಅವರಿಗೆ ಗೇಲ್ ಅವರು ತಮ್ಮ ದೇಹ ಸಿರಿ ಪ್ರದರ್ಶಿಸಿದ್ದರು ಇದರಿಂದ ಮಹಿಳೆಗೆ ಮುಜುಗರ ಉಂಟಾಗಿತ್ತು. ಆದರೆ, ಈ ಬಗ್ಗೆ ಕ್ರಿಕೆಟ್ ಮಂಡಳಿ, ಮ್ಯಾನೇಜ್ಮೆಂಟ್ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಈ ಕುರಿತಂತೆ ಫೇಸ್ ಫಾಕ್ಸ್ ಮೀಡಿಯಾ ನ್ಯೂಸ್ ಪೇಪರ್, ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್, ದಿ ಏಜ್ ಹಾಗೂ ದಿ ಕೆನ್ ಬೆರಾ ಟೈಮ್ಸ್ ಮುಂತಾದ ಮಾಧ್ಯಮಗಳು ಸರಣಿ ವರದಿಗಳನ್ನು ಪ್ರಕಟಿಸಿದ್ದವು.

ಗೇಲ್ ಪರ ವಾದಿಸಿ, ಕೇಸು ಗೆದ್ದ ಬ್ಯಾರಿಸ್ಟರ್ ಬ್ರೂಸ್ ಮೆಕ್
ಫೇರ್ ಫ್ಯಾಕ್ಸ್ ಮೀಡಿಯಾದಲ್ಲಿ ಸರಣಿ ವರದಿ ಮಾಡಿ ಗೇಲ್ ಅವರ ಮಾನ ಕಳೆಯಲಾಗಿದೆ ಎಂದು ನ್ಯೂ ಸೌಥ್ ವೇಲ್ಸ್ ಸುಪ್ರೀಂಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಗೇಲ್ ಮೇಲಿನ ಆರೋಪಗಳೆಲ್ಲವೂ ನಿರಾಧಾರವಾಗಿದ್ದು, ಗೇಲ್ ಅವರ ಘನತೆ, ಗೌರವಕ್ಕೆ ಧಕ್ಕೆ ತರಲು ಮಾಡಿರುವ ಹುನ್ನಾರ. ವರದಿಗಳಿಗೆ ಯಾವುದೇ ಸಾಕ್ಷಿ ಒದಗಿಸಿಲ್ಲ ಎಂದು ಗೇಲ್ ಪರ ಬ್ಯಾರಿಸ್ಟರ್ ಬ್ರೂಸ್ ಮೆಕ್ ಕ್ಲಿನ್ಟೋಕ್ ಹೇಳಿದ್ದಾರೆ.

ಮಸಾಜ್ ವಿವಾದದ ನಂತರ ಕೂಡಾ ಗೇಲ್ ಟಾರ್ಗೆಟ್
ಈ ವರದಿಗಳು ಬಂದ ಕೆಲ ದಿನಗಳಲ್ಲೇ ಗೇಲ್ ಅವರು ಟಿವಿ ವರದಿಗಾರ್ತಿಯೊಬ್ಬರ ಕ್ಷಮೆಯಾಚಿಸಿದ ಪ್ರಸಂಗ ನಡೆದಿತ್ತು. ಟಿವಿ ವರದಿಗಾರ್ತಿ ಲೈವ್ ಕವರೇಜ್ ನಲ್ಲಿದ್ದಾಗ 'ಡ್ರಿಂಕ್ಸ್ ಗೆ ಹೋಗೋಣ ಬಾ' ಎಂದು ಗೇಲ್ ನಗುತ್ತಾ ಕರೆದಿದ್ದರು. ನಂತರ 'ನಾಚಿಕೊಳ್ಳಬೇಡ' ಎಂಬರ್ಥದಲ್ಲಿ ಮಾತನಾಡಿದ್ದು ಸಾಕಷ್ಟು ವೈರಲ್ ಆಗಿತ್ತು. ನಂತರ ಈ ಬಗ್ಗೆ ಗೇಲ್ ಕ್ಷಮೆ ಯಾಚಿಸಿದ್ದರು. ಹೀಗಾಗಿ, ಈ ರೀತಿ ನಡೆದುಕೊಳ್ಳುವುದು ಗೇಲ್ ಗೆ ಹೊಸದೇನಲ್ಲ ಎಂದು ವಾದಿಸಿ, ಆಸೀಸ್ ಮಾಧ್ಯಮಗಳು ಗೇಲ್ ರನ್ನು ಟಾರ್ಗೆಟ್ ಮಾಡಿದ್ದವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications