19ನೇ ಆವೃತ್ತಿಯ ಐಪಿಎಲ್‌ಗೆ ಕ್ಷಣಗಣನೆ ಆರಂಭವಾಗಿದೆ. ಈ ಶ್ರೀಮಂತ ಲೀಗ್‌ನ ಉದ್ಘಾಟನಾ ಪಂದ್ಯ ಬೆಂಗಳೂರಿನ ಐಕಾನಿಕ್ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಆರ್‌ಸಿಬಿ ಗೆಲ್ಲುವ ನೆಚ್ಚಿನ ತಂಡ. ಬಹುದಿನಗಳ ಬಳಿಕ ಕ್ರಿಕೆಟ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಈ ಪಂದ್ಯಗಳನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
17 ವರ್ಷಗಳ ಕಾಯುವಿಕೆಯ ಬಳಿಕ ಆರ್‌ಸಿಬಿ ಕಳೆದ ಬಾರಿ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈ ಬಾರಿ ಬೆಂಗಳೂರು ತಂಡ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಲಿದೆ. ಈ ವೇಳೆ ತಂಡ ಸಂಘಟಿತ ಆಟವನ್ನು ಆಡಿ ಸತತ ಎರಡನೇ ಬಾರಿ ಟ್ರೋಫಿಗೆ ಮುತ್ತಿಡುವ ಕನಸು ರಜತ್ ಪಾಟಿದಾರ್ ಪಡೆಯದ್ದಾಗಿದೆ. ಈ ವರೆಗೆ ಐಪಿಎಲ್ ಇತಿಹಾಸದಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಕೇವಲ ಎರಡು ತಂಡಗಳು ಮಾತ್ರ ಸಫಲವಾಗಿವೆ.

ಐಪಿಎಲ್‌ನ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಈ ಸಾಧನೆಯನ್ನು ಮಾಡಿರುವ ಮೊದಲ ತಂಡ ಎಂಬ ಹಗ್ಗಳಿಕೆ ತನ್ನದಾಗಿಸಿಕೊಂಡಿದೆ. 2010 ಹಾಗೂ 2011ರಲ್ಲಿ ಚೆನ್ನೈ ಸತತ ಎರಡು ಬಾರಿ ಪ್ರಶಸ್ತಿಯನ್ನು ಎತ್ತಿ ಸಂಭ್ರಮಿಸಿತ್ತು. ಇದಾದ ಬಳಿಕ 2019 ಹಾಗೂ 2020ರಲ್ಲಿ ಮುಂಬೈ ಇಂಡಿಯನ್ಸ್ ಸಹ ಸತತ ಎರಡು ಬಾರಿ ಟ್ರೋಫಿಗೆ ಮುತ್ತಿಟ್ಟಿದೆ. ಅಲ್ಲಿಂದ ಈ ವರೆಗೆ ಯಾವೊಂದು ತಂಡ ಸಹ ಈ ಸಾಧನೆಯನ್ನು ಮಾಡಿಲ್ಲ. ಈ ಸಾಧನೆಯ ಮೇಲೆ ಆರ್‌ಸಿಬಿ ಕಣ್ಣು ನೆಟ್ಟಿದೆ.
ಈ ಎರಡೂ ತಂಡಗಳ ಎಲೈಟ್ ಕ್ಲಬ್‌ಗೆ ಎಂಟ್ರಿ ನೀಡಲು ಆರ್‌ಸಿಬಿ ಉತ್ತಮ ಅವಕಾಶ ಇದೆ. ಅಲ್ಲದೆ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಈ ಆಟಗಾರರು ತಮ್ಮ ಸ್ಥಿರ ಪ್ರದರ್ಶನದ ಬಲದಿಂದ ಆರ್‌ಸಿಬಿ ಜಯದಲ್ಲಿ ಮಿಂಚಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆರ್‌ಸಿಬಿ ಕಳೆದ ಬಾರಿಯ ತಂಡವನ್ನೇ ಹೆಚ್ಚಾಗಿ ಉಳಿಸಿಕೊಂಡಿದ್ದು, ಕೆಲವೊಂದು ಚಿಕ್ಕ ಪುಟ್ಟ ಬದಲಾವಣೆಗಳನ್ನು ಕಾಣಬಹುದಾಗಿದೆ. ಉಳಿದಂತೆ ಯುವ ಹಾಗೂ ಅನುಭವಿ ಆಟಗಾರರ ದಂಡು ಎದುರಾಳಿಗಳನ್ನು ಕಾಡಲು ಸಿದ್ಧವಾಗಿದೆ.
ಆರ್‌ಸಿಬಿ ತಂಡದಲ್ಲಿರುವ ಸ್ಟಾರ್ ಆಟಗಾರರು ಸಹ ಉತ್ತಮ ಲಯದಲ್ಲಿದ್ದಾರೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಆಡಿದ ಧಾಟಿ ಅವರ ಮೇಲೆ ವಿಶ್ವಾಸ ಹೆಚ್ಚಾಗುವಂತೆ ಮಾಡಿದೆ. ದೇಶೀಯ ಟೂರ್ನಿಯಲ್ಲಿ ರನ್ ಗಳನ್ನು ಕಲೆ ಹಾಕಿ ಬೀಗಿರುವ ದೇವದತ್ ಪಡಿಕ್ಕಲ್ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಬಲ್ಲರು. ರಜತ್ ಪಾಟಿದಾರ್, ರೊಮಾರಿಯೋ ಶೆಫರ್ಡ್, ಟೀಮ್ ಡೇವಿಡ್, ಸಹ ರನ್ ವೇಗಕ್ಕೆ ಚುರುಕು ಮುಟ್ಟಿಸಬಲ್ಲರು. ಜಿತೇಶ್ ಶರ್ಮಾ ತಮ್ಮ ನೈಜ ಆಟವನ್ನು ಆಡಿದರೂ ಸಹ ದೊಡ್ಡ ಸ್ಕೋರ್ ಕನಸು ನನಸಾಗುತ್ತದೆ.