WPL 2026: ಪ್ರಶಸ್ತಿಗಾಗಿ ಡೆಲ್ಲಿ, ಆರ್‌ಸಿಬಿ ನಡುವೆ ಬಿಗ್ ಫೈಟ್
ವಡೋದರಾ: ನಾಯಕಿ ಜೆಮಿಮಾ ರೊಡ್ರಿಗಸ್ ಹಾಗೂ ಲಿಜೇಲ್ ಲಿ ಅವರು ಭರ್ಜರಿ ಆಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿತು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಸತತ ನಾಲ್ಕನೇ ಬಾರಿಗೆ ಟೂರ್ನಿಯ ಫೈನಲ್‌ಗೆ ಪ್ರವೇಶ ಪಡೆದಿದೆ. ಚೊಚ್ಚಲ ಬಾರಿಗೆ ಪ್ರಶಸ್ತಿ ಸುತ್ತು ಪ್ರವೇಶಿಸುವ ಗುಜರಾತ್ ಆಸೆ ಕಮರಿದೆ.
ಗುರುವಾರ (ಫೆ.5) ನಡೆಯಲಿರುವ ಫೈನಲ್ ಪಂದ್ಯದಲ್ಲಿ ಎರಡನೇ ಪ್ರಶಸ್ತಿ ಹುಡುಕಾಟದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಚೊಚ್ಚಲ ಪ್ರಶಸ್ತಿ ಕನಸಿನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಟ ನಡೆಸಲಿವೆ.

ಗುಜರಾತ್ ಜೈಂಟ್ಸ್ ನೀಡಿದ್ದ 169 ರನ್ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭ ಉತ್ತಮವಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕರಾದ ಲಿಜೇಲ್ ಲಿ ಹಾಗೂ ಶಫಾಲಿ ವರ್ಮಾ ಜೋಡಿ ಆರಂಭದಿಂದಲೂ ಅಬ್ಬರದ ಬ್ಯಾಟಿಂಗ್‌ಗೆ ಮಣೆ ಹಾಕಿತು. ಈ ಜೋಡಿಯ ಆಟಕ್ಕೆ ಬ್ರೇಕ್ ಹಾಕುವಲ್ಲಿ ಗುಜರಾತ್ ಜೈಂಟ್ಸ್ ಬೌಲರ್‌ಗಳು ವಿಫಲರಾದರು. ಪವರ್ ಪ್ಲೇನ ಸಂಪೂರ್ಣ ಲಾಭ ಪಡೆದು ಬ್ಯಾಟ್ ಮಾಡಿದ ಜೋಡಿ ರನ್ ಮಹಲ್ ಕಟ್ಟಿತು.
ಭರ್ಜರಿ ಜೊತೆಯಾಟ
ಲಿಜೇಲ್ ಲಿ ಹಾಗೂ ಶಫಾಲಿ ಮೊದಲ ವಿಕೆಟ್‌ಗೆ 7.1 ಓವರ್‌ಗಳಲ್ಲಿ 89 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಆರಂಭಿಕ ಆಟಗಾರ್ತಿ ಲಿಜೇಲ್ ಲಿ 24 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ನೆರವಿನಿಂದ 43 ರನ್ ಬಾರಿಸಿ ಮಿಂಚಿದರು. ಇನ್ನೋರ್ವ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ 7 ಬೌಂಡರಿ ಸಹಾಯದಿಂದ 31 ರನ್ ಸಿಡಿಸಿ ಔಟ್ ಆದರು. ಮೂರನೇ ವಿಕೆಟ್‌ಗೆ ಲಾರಾ ವೋಲ್ವಾರ್ಡ್ ಹಾಗೂ ನಾಯಕಿ ಜೆಮಿಮಾ ರೊಡ್ರಿಗಸ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 42 ಎಸೆತಗಳಲ್ಲಿ 68 ರನ್ ಸಿಡಿಸಿತು. ಈ ವೇಳೆ 4 ಬೌಂಡರಿ, 1 ಸಿಕ್ಸರ್ ನೆರವಿನಿಂದ 41 ರನ್ ಬಾರಿಸಿದ್ದ ಜೆಮಿಮಾ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.

ಭರವಸೆಯ ಆಟಗಾರ್ತಿ ಲಾರಾ ವೋಲ್ವಾರ್ಡ್ ಅಜೇಯ 32 ರನ್ ಸಿಡಿಸಿ ತಂಡಕ್ಕೆ ಜಯದ ಮಾಲೆ ತೊಡಿಸಿದರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ 15.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 169 ರನ್ ಸೇರಿಸಿ ಭರ್ಜರಿ ಜಯ ಸಾಧಿಸಿತು.
ಬೆತ್ ಮೂನಿ ಅರ್ಧಶತಕ
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ಆರಂಭ ಕಳಪೆಯಾಗಿತ್ತು. ಆರಂಭಿಕ ಆಟಗಾರ್ತಿ ಸೋಫಿ ಡಿವೈನ್ (6), ಅನುಷ್ಕಾ ಶರ್ಮಾ (16), ಆಶ್ಲೆ ಗಾರ್ಡ್ನರ್ (0), ಕನಿಕಾ ಅಹುಜಾ (6) ರನ್ ಕಲೆ ಹಾಕುವಲ್ಲಿ ವಿಫಲರಾದರು. ಐದನೇ ವಿಕೆಟ್‌ಗೆ ಬೆತ್ ಮೂನಿ ಹಾಗೂ ಜಾರ್ಜಿಯಾ ವೇರ್‌ಹೋಮ್ (35) ಜೋಡಿ 46 ಎಸೆತಗಳಲ್ಲಿ 61 ರನ್ ಕಾಣಿಕೆ ನೀಡಿತು. ಕಾಶ್ವಿ ಗೌತಮ್ 18 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಆರಂಭಿಕ ಆಟಗಾರ್ತಿ ಬೆತ್ ಮೂನಿ 6 ಬೌಂಡರಿ ನೆರವಿನಿಂದ ಅಜೇಯ 62 ರನ್ ಸಿಡಿಸಿದರು. ಅಂತಿಮವಾಗಿ ಗುಜರಾತ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 168 ರನ್ ಸೇರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications