ಐಪಿಎಲ್ 2025 ರ 10 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ. ಉಭಯ ತಂಡಗಳ ನಡುವಿನ ಈ ಪಂದ್ಯ ವಿಶಾಖಪಟ್ಟಣದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಸನ್‌ರೈಸರ್ಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಬೌಲಿಂಗ್ ದಾಳಿಗಿಳಿದ ಡೆಲ್ಲಿ ಕ್ಯಾಪಿಟಲ್ಸ್ ಪರ ವೇಗಿ ಮಿಚೆಲ್ ಸ್ಟಾರ್ಕ್ ಮತ್ತು ಕುಲದೀಪ್ ಯಾದವ್ ಹೈದರಾಬಾದ್ ತಂಡವನ್ನು ಕಟ್ಟಿ ಹಾಕಿದರು. ಉರಿ ಬೌಲಿಂಗ್ ದಾಳಿ ನಡೆಸಿದ ಮಿಚೆಲ್ ಸ್ಟಾರ್ಕ್ ಹೈದರಾಬಾದ್ ತಂಡದ ಟಾಪ್ ಆರ್ಡರ್ ಅನ್ನು ಉಡೀಸ್ ಮಾಡಿದರೆ, ಕುಲದೀಪ್ ಯಾದವ್ ಮಧ್ಯಮ ಓವರ್‍ಗಳಲ್ಲಿ ಮಿಂಚಿದರು.
ಮಿಚೆಲ್ ಸ್ಟಾರ್ಕ್ ಮತ್ತು ಕುಲದೀಪ್ ಯಾದವ್ ದಾಳಿಗೆ ತತ್ತರಿಸಿ ಹೈದರಾಬಾದ್ 18.4 ಓವರ್‍ಗಳಲ್ಲಿ 163 ರನ್‌ಗಳಿಗೆ ಆಲೌಟಾಯಿತು. ಹೈದರಬಾದ್ ಅನಿಕೇತ್ ವರ್ಮ್ 74 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಡೆಲ್ಲಿ ಪರ ಮಿಚೆಲ್ ಸ್ಟಾರ್ಕ್ 5 ವಿಕೆಟ್ ಕಬಳಿಸಿದರೆ, ಕುಲದೀಪ್ ಯಾದವ್ 3 ವಿಕೆಟ್ ಉರುಳಿಸಿ ಸಂಭ್ರಮಿಸಿದರು.

ಕಳೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸಾಧ್ಯವಾಗದ 300 ರನ್ ಗಳಿಸುವ ಕನಸನ್ನು ನನಸು ಮಾಡಲು ಮತ್ತೊಮ್ಮೆ ಸನ್ ರೈಸರ್ಸ್ ಹೈದರಾಬಾದ್ ಕಣಕ್ಕಿಳಿಯಿತು. ಆದರೆ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಹೈದರಾಬಾದ್ ತಂಡದ ಲೆಕ್ಕಚಾರವನ್ನು ಮಿಚೆಲ್ ಸ್ಟಾರ್ಕ್ ಉಲ್ಟಾ ಮಾಡಿದರು. ಹೈದರಾಬಾದ್ ತಂಡಕ್ಕೆ ಅಂದುಕೊಂಡತೆ ಭರ್ಜರಿ ಆರಂಭ ಸಿಗಲಿಲ್ಲ. ಹೈದರಾಬಾದ್ ತಂಡ 37 ರನ್ ಗಳಿಸುವಷ್ಟರಲ್ಲೇ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಹೈದರಾಬಾದ್ ಪರ ಇನ್ನಿಂಗ್ಸ್ ಆರಂಭಿಸಿದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಜೋಡಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡುವಲ್ಲಿ ವಿಫಲವಾಯಿತು. ಅಭಿಷೇಕ್ ಶರ್ಮಾ 1 ರನ್ ಗಳಿಸಿ ಔಟಾದರೆ, ಬಳಿಕ ಬಂದ ಇಶಾನ್ ಕಿಶನ್ ಕೂಡ 2 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಇನ್ನೂ ನಿತೀಶ್ ಕುಮಾರ್ ರೆಡ್ಡಿ ಬಂದ ದಾರಿಗೆ ಸುಂಕವಿಲ್ಲದಂತೆ ಶೂನ್ಯಕ್ಕೆ ಔಟಾದರು. 12 ಎಸೆತಗಳಲ್ಲಿ 4 ಬೌಂಡರಿ ಬಾರಿಸಿ 22 ರನ್ ಗಳಿಸಿ ಟ್ರಾವಿಸ್ ಹೆಡ್ ಕೂಡ ತಮ್ಮ ಆಟ ನಿಲ್ಲಿಸಿದರು.
ಹೈದರಾಬಾದ್ ಸತತ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭದಲ್ಲಿ ಒಂದಾದ ಹೆನ್ರಿಕ್ ಕ್ಲಾಸೆನ್ ಮತ್ತು ಅನಿಕೇತ್ ವರ್ಮಾ ಜೋಡಿ ಸ್ವಲ್ಪ ಸಮಯ ಡೆಲ್ಲಿ ಬೌಲರ್‍ಗಳ ಕಾಡಿದರು. ಉತ್ತಮವಾಗಿ ಆಡುತ್ತಿದ್ದ ಹೆನ್ರಿಕ್ ಕ್ಲಾಸೆನ್ 19 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ನೆರವಿನಿಂದ 32 ರನ್ ಬಾರಿಸಿ ಔಟಾದರು. ಅಭಿನವ್ ಮನೋಹರ್ 4, ಪ್ಯಾಟ್ ಕಮ್ಮಿನ್ಸ್ 2 ರನ್‌ಗಳಿಗೆ ತಮ್ಮ ವಿಕೆಟ್ ಒಪ್ಪಿಸಿದರು. ಆದರೆ ಈ ವೇಳೆ ಅನಿಕೇತ್ ವರ್ಮಾ ಮತ್ತೊಮ್ಮೆ ಹೈದರಾಬಾದ್ ತಂಡಕ್ಕೆ ಆಸರೆಯಾದರು.
ಅನಿಕೇತ್ ವರ್ಮಾ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಅವರು 41 ಎಸೆತಗಳಲ್ಲಿ 5 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಿಂದ 74 ರನ್ ಬಾರಿಸಿ ಮಿಂಚಿದರು. ಅದ್ಭುತವಾಗಿ ಆಡುತ್ತಿದ್ದ ಅನಿಕೇತ್ ವರ್ಮಾ ಅವರನ್ನು ಔಟ್ ಮಾಡುವಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ಯಶಸ್ವಿಯಾದರು. ವಿಯಾನ್ ಮುಲ್ಡರ್ (9), ಹರ್ಷಲ್ ಪಟೇಲ್ (5) ಅವರನ್ನು ಬ್ಯಾಕ್ ಟು ಬ್ಯಾಕ್ ಸ್ಟಾರ್ಕ್ ಔಟ್ ಮಾಡಿದರು.