
ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ಹಸರು ಈಗ ಕೊಲೆ ಪ್ರಕರಣವೊಂದರಲ್ಲಿ ಕೇಳಿಬಂದಿದ್ದು ಅವರು ತಲೆ ಮರೆಸಿಕೊಂಡಿದ್ದಾರೆ. ರೆಸ್ಲರ್ ಓರ್ವನ ಸಾವಿಗೆ ಸಂಬಂಧಪಟ್ಟ ಪ್ರಕರಣ ಇದಾಗಿದ್ದು ಸುಶೀಲ್ ಕುಮಾರ್ ವಿರುದ್ಧ ಲುಕ್‌ಔಟ್ ಸರ್ಕ್ಯೂಲರ್ ಹೊರಡಿಸಲಾಗಿದೆ.
ವಾಯುವ್ಯ ದೆಹಲಿಯ ಛತ್ರಸಾಲ್ ಸ್ಟೇಡಿಯಂನ ಪಾರ್ಕಿಂಗ್ ಪ್ರದೇಶದಲ್ಲಿ 23ರ ಹರೆಯದ ಮಾಜಿ ಜ್ಯೂನಿಯರ್ ರಾಷ್ಟ್ರೀಯ ಚಾಂಪಿಯನ್ ಸಾಗರ್ ಧಂಕಡ್ ಎಂಬ ಯುವನ ಮೇಲೆ ಗಂಭೀರ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಪ್ರಥಮ ವರ್ತಮಾನ ವರದಿಯಲ್ಲಿ ಸುಶಿಲ್ ಕುಮಾರ್ ಹೆಸರು ಕೂಡ ಇದ್ದು ತನಿಖೆಗೆ ಸಹಕರಿಸದೆ ಅವರು ತಲೆಮರೆಸಿಕೊಂಡಿದ್ದಾರೆ.
ಸುಶೀಲ್ ಕುಮಾರ್ ಪತ್ತೆಗೆ ಪೊಲೀಸ್ ಇಲಾಖೆ ಸಾಕಷ್ಟು ಪ್ರಯತ್ನ ನಡೆಸಿದೆ. ಈ ಘಟನೆಯ ನಂತರ ಸುಶೀಲ್ ಮೊದಲಿಗೆ ಹರಿದ್ವಾರಕ್ಕೆ ತೆರಳಿದ್ದು ನಂತರ ರಿಷಿಕೇಶಕ್ಕೆ ತೆರಳಿದ್ದರು. ಹರಿದ್ವಾರದಲ್ಲಿ ಅವರು ಆಶ್ರಮವೊಂದರಲ್ಲಿ ಉಳಿದುಕೊಂಡಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ನಂತರ ದೆಹಲಿಗೆ ಮರಳಿದ ಅವರು ಸತತವಾಗಿ ತಮ್ಮ ಸ್ಥಳವನ್ನು ಬದಲಾಯಿಸುತ್ತಿದ್ದಾರೆ ಎನ್ನಲಾಗಿದೆ.
ಅಪರಾಧದ ಸ್ಥಳ ಮತ್ತು ಸ್ಥಳದಲ್ಲಿ ದೊರೆತ ಎಲ್ಲಾ ಐದು ವಾಹನಗಳನ್ನು ಪರಿಶೀಲಿಸಲಾಗಿದೆ. ತಪಾಸಣೆಯ ಸಮಯದಲ್ಲಿ, ಒಂದು ಸ್ಕಾರ್ಪಿಯೋದಲ್ಲಿ ಒಂದು ಡಬಲ್ ಬ್ಯಾರೆಲ್ ಲೋಡೆಡ್ ಗನ್ ಕಂಡುಬಂದಿದೆ ಮತ್ತು ಎರಡು ಮರದ ತುಂಡುಗಳನ್ನು ಸಹ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.