ಮಂಗಳವಾರ, ಅಕ್ಟೋಬರ್ 17ರಂದು ಧರ್ಮಶಾಲಾದಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 38 ರನ್‌ಗಳ ಗೆಲುವು ಸಾಧಿಸಿದ ನೆದರ್ಲ್ಯಾಂಡ್ಸ್ ಐತಿಹಾಸಿಕ ಸಾಧನೆ ಮಾಡಿತು.
43-ಓವರ್‌ಗಳ ಮಳೆ-ಬಾಧಿತ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡ 8 ವಿಕೆಟ್‌ಗೆ 245 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಲು ಯಶಸ್ವಿಯಾಯಿತು. ಸವಾಲಿನ ಮೊತ್ತದ ಚೇಸಿಂಗ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ 42.5 ಓವರ್‌ಗಳಲ್ಲಿ 207 ರನ್‌ಗಳಿಗೆ ಆಲೌಟ್ ಆಯಿತು.
ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ವಿಭಾಗವನ್ನು ಧ್ವಂಸ ಮಾಡುವಲ್ಲಿ ನೆದರ್ಲ್ಯಾಂಡ್ಸ್ ವೇಗಿ ಪಾಲ್ ವ್ಯಾನ್ ಮೀಕೆರೆನ್ ಕೂಡ ಪ್ರಮುಖ ಪಾತ್ರ ವಹಿಸಿದರು. ತಮ್ಮ 9 ಓವರ್‌ಗಳ ಕೋಟಾದಲ್ಲಿ 40 ರನ್ ನೀಡಿ 2 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.

ನೆದರ್ಲ್ಯಾಂಡ್ಸ್ ತಂಡದ ವೇಗದ ಬೌಲರ್ ಪಾಲ್ ವ್ಯಾನ್ ಮೀಕೆರೆನ್ ಅವರು ಶೀತ ಮತ್ತು ಚಳಿಗಾಲದ ಸಂದರ್ಭದಲ್ಲಿ ಮನೆಯಲ್ಲಯೇ ಹೆಣಗಾಡುತ್ತಿದ್ದ ಸಮಯವೊಂದಿತ್ತು.
2020ರ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಭಯಾನಕ ಕೋವಿಡ್-19 ಸಾಂಕ್ರಾಮಿಕ ರೋಗವು ಕ್ರಿಕೆಟ್ ಪಂದ್ಯಾವಳಿಯನ್ನು ಎರಡು ವರ್ಷಗಳ ಕಾಲ ಮುಂದೂಡಲು ಕಾರಣವಾಯಿತು.
ಆಗ 27 ವರ್ಷದ ಪಾಲ್ ವ್ಯಾನ್ ಮೀಕೆರೆನ್ ಅವರು ಆಸ್ಟ್ರೇಲಿಯಾ ನೆಲದಲ್ಲಿ ಐಸಿಸಿ ಟೂರ್ನಿ ಮೂಲಕ ಸ್ವಲ್ಪ ಆರ್ಥಿಕ ಸ್ಥಿರತೆಯನ್ನು ನಿರೀಕ್ಷಿಸಿದ್ದರು. ಆದರೆ, ಬದಲಾದ ಸಂದರ್ಭದಲ್ಲಿ ಉಬರ್ ಈಟ್ಸ್‌ನ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವ ಮೂಲಕ ಪಾಲ್ ವ್ಯಾನ್ ಮೀಕೆರೆನ್ ಕಠಿಣ ಜೀವನ ನಡೆಸಬೇಕಾಯಿತು.
ತನ್ನ ಕ್ರಿಕೆಟ್ ವೃತ್ತಿಜೀವನ ಮುಗಿದೇ ಹೋಯಿತು ಎಂದು ಯೋಚಿಸಲು ಪ್ರಾರಂಭಿಸಿದ ಪಾಲ್ ವ್ಯಾನ್ ಮೀಕೆರೆನ್, ಅದಕ್ಕಾಗಿ ಯಾರನ್ನೂ ದೂಷಿಸಲಿಲ್ಲ. ಜೀವನವನ್ನು ತಳ್ಳಲು ಇತರ ಮಾರ್ಗಗಳನ್ನು ಕಂಡುಕೊಂಡರು.
2020ರ ನವೆಂಬರ್ 15ರಂದು ಟ್ವಿಟ್ಟರ್‌ನಲ್ಲಿ ಪಾಲ್ ವ್ಯಾನ್ ಮೀಕೆರೆನ್ ರೀಟ್ವೀಟ್ ಮಾಡಿದ ಪೋಸ್ಟ್ ಹೀಗಿದೆ, "ಇಂದು ಕ್ರಿಕೆಟ್ ವಿಶ್ವಕಪ್ ಆಡಬೇಕಿತ್ತು. ಈಗ ನಾನು ಚಳಿಗಾಲದ ತಿಂಗಳುಗಳನ್ನು ಕಳೆಯಲು ಉಬರ್ ಈಟ್ಸ್ ಅನ್ನು ವಿತರಿಸುತ್ತಿದ್ದೇನೆ. ಜೀವನದ ತಮಾಷೆಯ ವಿಷಯಗಳು ಹೇಗೆ ಬದಲಾಗುತ್ತವೆ, ಜನರನ್ನು ನಗಿಸುತ್ತಲೇ ಇರುತ್ತವೆ," ಎಂದು ಪಾಲ್ ವ್ಯಾನ್ ಮೀಕೆರೆನ್ ಬರೆದುಕೊಂಡಿದ್ದರು.
ನೆದರ್ಲ್ಯಾಂಡ್ಸ್ ಬೌಲರ್ ವಿವಿಧ ಟಿ20 ಮತ್ತು ಟಿ10 ಫ್ರಾಂಚೈಸಿಗಳಿಗಾಗಿ ಜಗತ್ತಿನಾದ್ಯಂತ ಸ್ವಲ್ಪಮಟ್ಟಿಗೆ ಕ್ರಿಕೆಟ್ ಆಡಿದ್ದರೂ, ಪಾಲ್ ವ್ಯಾನ್ ಮೀಕೆರೆನ್ ಹೆಚ್ಚು ತಿಳಿದಿರುವ ಹೆಸರಾಗಿರಲಿಲ್ಲ. ಆದರೆ, ಅಕ್ಟೋಬರ್ 18ರ ಮಂಗಳವಾರ ಒಂದು ನಿರ್ದಿಷ್ಟ ಮಟ್ಟಕ್ಕೆ ಬದಲಾಗಿದೆ ಎಂದು ತೋರುತ್ತದೆ.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಹೆಚ್‌ಪಿಸಿಎ) ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 38 ರನ್‌ಗಳಿಂದ ಸೋಲಿಸಿದ ಐತಿಹಾಸಿಕ ನೆದರ್ಲ್ಯಾಂಡ್ಸ್ ತಂಡದ ಭಾಗವಾಗಿದ್ದರು ಪಾಲ್ ವ್ಯಾನ್ ಮೀಕೆರೆನ್.
ನಿರ್ಣಾಯಕ 78 ರನ್ ಗಳಿಸುವ ಮೂಲಕ ನಾಯಕ ಸ್ಕಾಟ್ ಎಡ್ವರ್ಡ್ಸ್ ಅವರು ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದರೂ, ಆಮ್ಸ್ಟರ್‌ಡ್ಯಾಮ್‌ನ ವೇಗಿ ಪಾಲ್ ವ್ಯಾನ್ ಮೀಕೆರೆನ್ ಅವರ ಕೊಡುಗೆಗಳನ್ನು ಕಡೆಗಣಿಸಲು ಸಾಧ್ಯವಿಲ್ಲ.
ದಕ್ಷಿಣ ಆಫ್ರಿಕಾ ಸ್ಫೋಟಕ ಬ್ಯಾಟರ್ ಏಡೆನ್ ಮಾರ್ಕ್ರಾಮ್ ಅವರನ್ನು ಬೌಲ್ಡ್ ಮಾಡಿ ವಿಕೆಟ್ ಪಡೆದಿದ್ದು ಪಾಲ್ ವ್ಯಾನ್ ಮೀಕೆರೆನ್‌ಗೆ ಅದು ಕಲ್ಪನೆಗೂ ಮೀರಿದ ಸಂತೋಷ ನೀಡಿತು. ಇದು ದಕ್ಷಿಣ ಆಫ್ರಿಕಾ ಮತ್ತು ಮಾರ್ಕ್ರಾಮ್‌ಗೆ ಸೋಲಿನ ಶಂಖನಾದ ಬಾರಿಸಿದಂತಾದರೆ, ವ್ಯಾನ್ ಮೀಕೆರೆನ್ ಮತ್ತು ಡಚ್ ಆಟಗಾರರ ಕಿವಿಗೆ ಸಂಗೀತದಂತೆ ಕೇಳಿಸಿತು.
ನಂತರ, 25ನೇ ಓವರ್‌ನಲ್ಲಿ ಪಾಲ್ ವ್ಯಾನ್ ಮೀಕೆರೆನ್ ಅವರು ಮಾರ್ಕೊ ಜಾನ್ಸೆನ್ ಅವರನ್ನು ವೇಗದ ಎಸೆತದಲ್ಲಿ ಬೌಲ್ಡ್ ಮಾಡಿದರು. ಬ್ಯಾಟ್‌ನಿಂದಲೂ ಅಬ್ಬರಿಸಬಲ್ಲ ಜಾನ್ಸೆನ್ ಅವರ ಸ್ಟಂಪ್‌ಗಳು ಹಾರಿದ್ದರ ಸುಳಿವೇ ಸಿಗಲಿಲ್ಲ. ಆ ವೇಳೆಗಾಗಲೇ ನೆದರ್ಲ್ಯಾಂಡ್ಸ್ ತಂಡ ಗೆಲುವಿಗೆ ಹತ್ತಿರವಾಗಿತ್ತು ಮತ್ತು ದಕ್ಷಿಣ ಆಫ್ರಿಕಾ ಶಿಬಿರದಲ್ಲಿ ಸಪ್ಪೆಮೊರೆಗಳು ಕಂಡುಬಂದಿದ್ದವು.
ಪಾಲ್ ವ್ಯಾನ್ ಮೀಕೆರೆನ್ ಮತ್ತು ನೆದರ್ಲ್ಯಾಂಡ್ಸ್ ತಂಡದ ಆಟಗಾರರು ದಕ್ಷಿಣ ಆಫ್ರಿಕಾ ವಿರುದ್ಧ ಆರಂಭದಲ್ಲಿ ಕೆಲವೊಮ್ಮೆ ಒತ್ತಡಕ್ಕೆ ಒಳಗಾಗಿದ್ದರು. ನಂತರ, ಪುಟಿದೆದ್ದು ಸವಾರಿ ಮಾಡಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಯಿತು.
ನೆದರ್ಲ್ಯಾಂಡ್ಸ್ ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ತನ್ನ ಮುಂದಿನ ಪಂದ್ಯದಲ್ಲಿ ಉತ್ತಮ ಫಾರ್ಮ್‌ನಲ್ಲಿಲ್ಲದ ಶ್ರೀಲಂಕಾ ತಂಡವನ್ನು ಎದುರಿಸಲಿದ್ದು, ಅದಕ್ಕೂ ಮುಂಚಿತವಾಗಿ ತಮ್ಮ ಗೆಲುವಿನ ಸಂತೋಷವನ್ನು ಅನುಭವಿಸಲಿದ್ದಾರೆ.
ಕೊನೆಯದಾಗಿ, ಪಾಲ್ ವ್ಯಾನ್ ಮೀಕೆರೆನ್ ಬಗ್ಗೆ ಹೇಳುವುದಾದರೆ, ಮನೆ ಬಾಗಿಲಿಗೆ ಫುಡ್ ಡೆಲಿವರಿ ಮಾಡುವುದರಿಂದ ಹಿಡಿದು ಎದುರಾಳಿ ಬ್ಯಾಟರ್‌ಗಳಿಗೆ ದುಃಸ್ವಪ್ನವಾಗಿ ಕಾಡುವವರೆಗೆ ಖಂಡಿತವಾಗಿಯೂ ಕ್ರಿಕೆಟ್‌ನಲ್ಲಿ ಹೆಜ್ಜೆ ಗುರುತು ಮೂಡಿಸಿದ್ದಾರೆ.