
2021ನೇ ಸಾಲಿನ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡದ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಅವರು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಈ ಟೂರ್ನಿಯಲ್ಲಿ ಪಡಿಕ್ಕಲ್ 6 ಪಂದ್ಯಗಳಲ್ಲಿ 673 ರನ್ ಬಾರಿಸಿ ಟಾಪ್ ರನ್ ಸ್ಕೋರರ್ ಆಗಿ ಮಿಂಚುತ್ತಿದ್ದಾರೆ. ಹೀಗೆ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವುದರ ಜತೆಗೆ ದೇವದತ್ ಪಡಿಕ್ಕಲ್ ಅವರು ವಿರಾಟ್ ಕೊಹ್ಲಿ ಅವರ ದಾಖಲೆಯೊಂದನ್ನು ಸರಿದೂಗಿಸಿಕೊಂಡಿದ್ದಾರೆ.
ಹೌದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು 2008 ರ ವಿಜಯ ಹಜಾರೆ ಟ್ರೋಫಿಯಲ್ಲಿ ಬಹಳ ವಿಶೇಷವಾದ ದಾಖಲೆಯೊಂದನ್ನು ಮಾಡಿದ್ದರು. ಇದುವರೆಗೂ ವಿರಾಟ್ ಕೊಹ್ಲಿ ಅವರು ಮಾಡಿದ್ದ ಆ ದಾಖಲೆಯೊಂದನ್ನು ಯಾರೂ ಸಹ ಮುರಿಯಲು ಆಗಿರಲಿಲ್ಲ. 2008 ರ ವಿಜಯ್ ಹಜಾರೆ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಅವರು 4 ಸೆಂಚುರಿ ಬಾರಿಸಿ ಯಾರೂ ಬರೆಯದಿದ್ದ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದರು. ವಿಜಯ್ ಹಜಾರೆ ಟ್ರೋಫಿಯ ಒಂದೇ ಟೂರ್ನಿಯಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ವಿರಾಟ್ ಕೊಹ್ಲಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಇದೀಗ 13 ವರ್ಷಗಳ ಬಳಿಕ ಕರ್ನಾಟಕದ ದೇವದತ್ ಪಡಿಕ್ಕಲ್ ಅವರು ಈ ದಾಖಲೆಯನ್ನು ಸಮನಾಗಿಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸರಿದೂಗಿಸಿಕೊಂಡಿದ್ದಾರೆ. ಪ್ರಸ್ತುತ ವಿಜಯ್ ಹಜಾರೆ ಟ್ರೋಫಿಯಲ್ಲಿ ದೇವದತ್ ಪಡಿಕ್ಕಲ್ ಅವರು ಸತತ 4 ಶತಕಗಳನ್ನು ಬಾರಿಸುವುದರ ಮೂಲಕ 2008 ರ ವಿಜಯ್ ಹಜಾರೆ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿಯವರು ಮಾಡಿದ್ದ ದಾಖಲೆಯನ್ನು ಮತ್ತೆ ಮಾಡಿದ್ದಾರೆ. ಹೀಗಾಗಿ ಇದುವರೆಗೂ ವಿಜಯ್ ಹಜಾರೆ ಟ್ರೋಫಿಯ ಒಂದೇ ಟೂರ್ನಿಯಲ್ಲಿ 4 ಶತಕಗಳನ್ನು ಬಾರಿಸಿರುವ ಆಟಗಾರರು ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್.