ಕೋಲ್ಕತ್ತಾ, ಚೆನ್ನೈ, ಮುಂಬೈ ಬಳಿಕ ರಾಜಸ್ಥಾನ ತಂಡವನ್ನು ಅವರದ್ದೇ ನೆಲದಲ್ಲಿ ಮಣಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಬ್ಬರಿಸಿದೆ. ಈ ಗೆಲುವಿನ ಮೂಲಕ ಅಂಕ ಪಟ್ಟಿಯಲ್ಲಿ ಆರ್‌ಸಿಬಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಈ ಏಕಪಕ್ಷೀಯ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿದ್ದವು. ಆದರೆ ಕನ್ನಡಿಗನ ಮುಡಿಗೆ ವಿಶೇಷ ದಾಖಲೆಯೊಂದು ಸೇರಿಕೊಂಡಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ಮೊದಲು ಬೌಲಿಂಗ್‌ನಲ್ಲಿ ಅಬ್ಬರದ ಪ್ರದರ್ಶನ ನೀಡಿ, ಬಳಿಕ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಈ ವೇಳೆ ಮೊದಲು ಬ್ಯಾಟ್ ಮಾಡಿದ್ದ ರಾಜಸ್ಥಾನ ತಂಡವನ್ನು ಆರ್‌ಸಿಬಿ 174 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಸಫಲವಾಗಿದೆ. ರಾಜಸ್ಥಾನ ತಂಡಕ್ಕೆ ಯಶಸ್ವಿ ಜೈಸ್ವಾಲ್ 75 ರನ್ ಬಾರಿಸಿ ಆಸರೆಯಾಗಿದ್ದಾರೆ. ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಅರ್ಧಶತಕ ಬಾರಿಸಿ ಗೆಲುವಿನಲ್ಲಿ ಮಿಂಚಿದರು. ರಾಜಸ್ಥಾನ ನೀಡಿದ್ದ ಗುರಿಯನ್ನು ಆರ್‌ಸಿಬಿ ಜಸ್ಟ್ 17.3 ಓವರ್‌ಗಳಲ್ಲಿ ಮುಟ್ಟಿತು.

ಈ ಗೆಲುವಿನಲ್ಲಿ ದೇವದತ್ ಪಡಿಕ್ಕಲ್ ಸಹ ಕ್ಲಾಸಿಕ್ ಇನಿಂಗ್ಸ್ ಆಡಿ ತಮ್ಮದೇ ಆದ ಕಾಣಿಕೆ ನೀಡಿದರು. ಇವರು ಅಜೇಯ 40 ರನ್ ಸಿಡಿಸಿ ಮಿಂಚಿದರು. ಈ ವೇಳೆ ಕರ್ನಾಟಕದ ಸ್ಟಾರ್ ಪ್ಲೇಯರ್ ಆರ್‌ಸಿಬಿ ಪರ ಇತಿಹಾಸವನ್ನು ಬರೆದರು. ಈ 40 ರನ್‌ಗಳ ಸಹಾಯದಿಂದ ದೇವದತ್ ಪಡಿಕ್ಕಲ್ ಆರ್‌ಸಿಬಿ ಪರ 1000 ರನ್‌ಗಳ ಮಾರ್ಕ್ ದಾಟಿದ ಎರಡನೇ ಬ್ಯಾಟರ್ ಎಂಬ ದಾಖಲೆಯನ್ನು ಬರೆದರು. ಈ ಮೊದಲು ಈ ಸಾಧನೆಯನ್ನು ಭಾರತದ ಪರ ವಿರಾಟ್ ಕೊಹ್ಲಿ ಮಾತ್ರ ಮಾಡಿದ್ದರು.
ಪಡಿಕ್ಕಲ್ ಅವರ ಐಪಿಎಲ್ ಪಯಣ 2020ರಿಂದ ಆರಂಭವಾಯಿತು. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ದೇವದತ್ ಈ ವೇಳೆ 473 ರನ್ ಸಿಡಿಸಿ ಅಬ್ಬರಿಸಿದರು. ಇದೇ ಆವೃತ್ತಿಯಲ್ಲಿ ಇವರು ಎಮರ್ಜಿಂಗ್ ಪ್ಲೇಯರ್ ಪ್ರಶಸ್ತಿಯನ್ನು ಸಹ ಪಡೆದರು. ಈಗ ಮತ್ತೆ 2025ರಲ್ಲಿ ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. ರಾಜಸ್ಥಾನ ವಿರುದ್ಧ ಪಂದ್ಯದಲ್ಲಿ 40 ರನ್‌ಗಳಲ್ಲಿ ಇವರ ಸ್ಕಿಲ್ ಹಾಗೂ ಕ್ಷಮತೆಯನ್ನು ತೋರಿಸುವಂತೆ ಇತ್ತು. ಒತ್ತಡದ ಸನ್ನಿವೇಶದಲ್ಲಿ ಮೆಟ್ಟಿ ನಿಲ್ಲುವ ಇವರ ಕಲೆ ಅಮೋಘ. ಸ್ಟ್ರೈಕ್ ರೋಟೆಟ್ ಮಾಡುತ್ತಾ ಎದುರಾಳಿಗಳನ್ನು ಕಾಡುವ ದೇವದತ್ ಆರ್‌ಸಿಬಿಗೆ ಮಧ್ಯಮ ಕ್ರಮಾಂಕದಲ್ಲಿ ಆಧಾರ.

ಆರ್‌ಸಿಬಿ ಈ ಮೊದಲಿನಿಂದಲೂ ವಿಶ್ವದ ಖ್ಯಾತ ನಾಮ ಬ್ಯಾಟರ್‌ಗಳಿಗೆ ಮಣೆ ಹಾಕುತ್ತಲೇ ಬಂದಿದೆ. ಆರ್‌ಸಿಬಿ ಪರ ಬ್ಯಾಟ್ ಮಾಡಿ ಎಬಿಡಿ ವಿಲಿಯರ್ಸ್, ಕ್ರಿಸ್ ಗೇಲ್, ಫಾಫ್ ಡುಪ್ಲೇಸಿಸ್, ಗ್ಲೇನ್ ಮ್ಯಾಕ್ಸ್‌ವೆಲ್ ಅವರು ಸಾವಿರ ರನ್‌ಗಳ ದಾಟಿದ ದಾಖಲೆಯನ್ನು ಹೊಂದಿದ್ದಾರೆ.
"ನನಗೆ ಈ ಫ್ರಾಂಚೈಸಿ ಪರ ಆಡುವುದು ಖುಷಿ ತಂದಿದೆ. ನನ್ನ ಈ ಪ್ರದರ್ಶನವನ್ನು ಕಾಯ್ದುಕೊಳ್ಳುವ ಪ್ರಯತ್ನವನ್ನು ಮಾಡುವೆ" ಎಂದು ದೇವದತ್ ಪಡಿಕ್ಕಲ್ ತಿಳಿಸಿದ್ದಾರೆ. ಕರ್ನಾಟಕದ 24 ವರ್ಷದ ಯುವ ಆಟಗಾರನ ಫಾರ್ಮ್ ಟೂರ್ನಿಯುದಕ್ಕೂ ಹೀಗೆ ಮುಂದುವರೆದಲ್ಲಿ, ಆರ್‌ಸಿಬಿ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆಲ್ಲುವ ಕನಸು ಸಾಕಾರವಾಗುತ್ತದೆ.