ಬಾರ್ಡರ್ ಗವಾಸ್ಕರ್ ಸರಣಿಗೆ ದಿನಗಣನೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಅಂಗಳದಲ್ಲಿ ಭರದ ಸಿದ್ಧತೆ ನಡೆಸಿವೆ. ಭಾರತ ತಂಡಕ್ಕೆ ಗಾಯ ಬಹುವಾಗಿ ಕಾಡುತ್ತಿದೆ. ಟೀಮ್ ಇಂಡಿಯಾ ಆಟಗಾರರಾದ ಶುಭಮನ್ ಗಿಲ್, ಸರ್ಫರಾಜ್ ಖಾನ್, ಕೆಎಲ್ ರಾಹುಲ್ ಗಾಯಕ್ಕೆ ತುತ್ತಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಲಿಷ್ಠ ತಂಡವನ್ನು ಕಣಕ್ಕೆ ಇಳಿಸುವ ಟೀಮ್ ಇಂಡಿಯಾ ಇರಾದೆಗೆ ಕೊಂಚ ಹಿನ್ನಡೆ ಆದರೂ ಆಗಬಹುದು. ಟೀಮ್ ಇಂಡಿಯಾ ಟೆನ್ಷನ್ ದೂರ ಮಾಡುವ ಪ್ಲ್ಯಾನ್ ಮ್ಯಾನೇಜ್ಮೆಂಟ್‌ದ್ದಾಗಿದೆ.
ಪರ್ತ್‌ನಲ್ಲಿ ಇದೇ ತಿಂಗಳು 22 ರಂದು ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯ ನಡೆಯಲಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್ ಶುಭಮನ್ ಗಿಲ್ ಆಡುವುದು ಅನುಮನಾ ಎನ್ನಲಾಗುತ್ತಿದೆ. ಇನ್ನು ಕೆಎಲ್ ರಾಹುಲ್ ಅವರು ಇಂಟ್ರಾ-ಸ್ಕ್ವಾಡ್ ಪಂದ್ಯವನ್ನು ಆಡುವಾಗ ಮೊಣಕೈಗೆ ಗಾಯ ಮಾಡಿಕೊಂಡಿದ್ದರು. ರೋಹಿತ್ ಶರ್ಮಾ ಎರಡನೇ ಮಗುವಿಗೆ ತಂದೆ ಆದ ಸಂಭ್ರಮದಲ್ಲಿದ್ದಾರೆ. ಇನ್ನು ಅವರು ಭಾರತದಲ್ಲಿಯೇ ಉಳಿದುಕೊಂಡಿದ್ದರು. ರೋಹಿತ್ ಅವರು ಶೀಘ್ರದಲ್ಲೇ ಆಸ್ಟ್ರೇಲಿಯಾಕ್ಕೆ ತೆರಳುವ ಸಾಧ್ಯತೆಯಿದೆ. ಆದರೆ ಈ ಬಗ್ಗೆ ಇನ್ನು ಖಚಿತ ಮಾಹಿತಿ ಹೊರ ಬಂದಿಲ್ಲ.

ಭಾರತ ಎ ತಂಡ ಸಹ ಆಸ್ಟ್ರೇಲಿಯಾ ಪ್ರವಾಸವನ್ನು ಬೆಳೆಸಿತ್ತು. ಈ ವೇಳೆ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳನ್ನು ಆಡಲಾಗಿತ್ತು. ಈ ಪಂದ್ಯದಲ್ಲಿ ಆಡಿದ ಆಟಗಾರರು ತವರಿನತ್ತ ಮುಖ ಮಾಡಲು ಸಿದ್ಧರಾಗಿದ್ದಾರೆ. ಆದರೆ ಸ್ಟಾರ್ ಆಟಗಾರರು ಗಾಯಕ್ಕೆ ತುತ್ತಾಗಿದ್ದರಿಂದ, ಭಾರತ ಎ ತಂಡದ ಪರ ಆಡಿರುವ ಕನ್ನಡಿಗ ದೇವದತ್ ಪಡಿಕ್ಕಲ್ ಅವರಿಗೆ ಮುಂಜಾಗ್ರತಾ ಕ್ರಮವಾಗಿ ಆಸ್ಟ್ರೇಲಿಯಾದಲ್ಲಿ ಇರಿಸಿಕೊಳ್ಳಲು ತಂಡದ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಕ್ರಿಕ್ ಬಜ್ ವರದಿಯ ವರದಿ ಮಾಡಿದೆ. ಇವರು ಭಾರತ ತಂಡದ ಬ್ಯಾಕ್ ಅಪ್ ಬ್ಯಾಟರ್ ಆಗಿರಲಿದ್ದಾರೆ. ಈಗ ತಂಡದಲ್ಲಿರುವ ಯಾವುದೇ ಬ್ಯಾಟರ್ ಗಾಯಕ್ಕೆ ತುತ್ತಾದಲ್ಲಿ ಇವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ದೇವದತ್ ಪಡಿಕ್ಕಲ್ ಆಸ್ಟ್ರೇಲಿಯಾ ಎ ವಿರುದ್ಧ ಟೆಸ್ಟ್ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರು. ಇವರು 26, 1, 36 ಮತ್ತು 88 ರನ್‌ಗಳ ಇನಿಂಗ್ಸ್ ಕಟ್ಟಿ ಭರವಸೆ ಮೂಡಿಸಿದ್ದರು. ಇವರ ಬೌನ್ಸ್ ಟ್ರ್ಯಾಕ್‌ನಲ್ಲಿ ಆಡಿದ ರೀತಿಯನ್ನು ನೋಡಿ ಇವರಿಗೆ ಉಳಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ ಇವರು ಈಗಾಗಲೇ ಭಾರತದ ಪರ ಒಂದು ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. ತವರಿನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಡಿಕ್ಕಲ್ ಅವರು ಭಾರತದ ಪರ ಪದಾರ್ಪಣೆ ಸಹ ಮಾಡಿದ್ದರು.

24 ವರ್ಷದ ಕರ್ನಾಟಕದ ಆಟಗಾರ ಪಡಿಕ್ಕಲ್ ದೇಶೀಯ ಕ್ರಿಕೆಟ್‌ನಲ್ಲಿ ಕಮಾಲ್ ಪ್ರದರ್ಶನ ನೀಡಿದ್ದಾರೆ. ಇವರು ದೇಶೀಯ ಕ್ರಿಕೆಟ್‌ನಲ್ಲಿ ರನ್‌ಗಳ ಮಹಲ್ ಕಟ್ಟಿದ್ದಾರೆ. ಇವರು 40 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು 2677 ರನ್ ಸಿಡಿಸಿದ್ದಾರೆ. ಇದರಲ್ಲಿ 6 ಶತಕಗಳು ಸೇರಿವೆ. ಅಲ್ಲದೆ 30 ಲೀಸ್ಟ್ ಎ ಪಂದ್ಯಗಳನ್ನು ಆಡಿದ್ದು, 1875 ರನ್ ಸಿಡಿಸಿದ್ದಾರೆ. ಇದರಲ್ಲಿ 8 ಶತಕ ಹಾಗೂ 11 ಅರ್ಧಶತಕಗಳು ಸೇರಿವೆ. ಪಡಿಕ್ಕಲ್ ಈಗಾಗಲೇ ಐಪಿಎಲ್‌ನಲ್ಲಿ ಅಬ್ಬರಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದಾರೆ.