ಟೀಮ್ ಇಂಡಿಯಾ ಸದ್ಯ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿಯನ್ನು ಆಡುತ್ತಿದೆ. ಐದು ಟೆಸ್ಟ್ ಸರಣಿಯಲ್ಲಿ ಈಗಾಗಲೇ ಎರಡು ಟೆಸ್ಟ್ ಪಂದ್ಯಗಳು ಮುಗಿದಿವೆ. ಈಗ ಮೂರನೇ ಟೆಸ್ಟ್ ನತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಯುವ ಆಟಗಾರರಿಗೆ ಚಾನ್ಸ್ ಸಿಗುವ ಸಾಧ್ಯತೆ ಇದೆ. ಟೀಮ್ ಇಂಡಿಯಾ ಪರ ಆಡುವ ಕನಸನ್ನು ಕಾಣುತ್ತಿರುವ ಯುವ ಆಟಗಾರರ ಪಟ್ಟಿಯಲ್ಲಿ ಕನ್ನಡಿಗನೊಬ್ಬ ಇದ್ದಾನೆ. ಈತ ಕಳೆದ 4 ಪಂದ್ಯಗಳಲ್ಲಿ 3 ರಲ್ಲಿ ಶತಕ ಬಾರಿಸಿ ಭರವಸೆ ಮೂಡಿಸಿದ್ದಾರೆ.
ಕನ್ನಡದ ಕೆಎಲ್ ರಾಹುಲ್ ಮೂರನೇ ಟೆಸ್ಟ್ ಪಂದ್ಯಕ್ಕು ಮುನ್ನ ಗಾಯಕ್ಕೆ ತುತ್ತಾಗಿ ಹೊರ ನಡೆದಿದ್ದಾರೆ. ಇವರ ಸ್ಥಾನದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಸ್ಥಾನ ಪಡೆದಿದ್ದಾರೆ. ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಅಬ್ಬರಿಸುತ್ತಿರುವ ಇವರು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ದೇವ್ ದತ್ ಪಡಿಕ್ಕಲ್ ಕೆಲ ದಿನಗಳ ಹಿಂದೆಯಷ್ಟೇ ರಣಜಿ ಟ್ರೋಫಿ ಆಡುತ್ತಿದ್ದರು. ಅಲ್ಲಿ ಅವರು ಕರ್ನಾಟಕದ ಪರ ಅದ್ಭುತ ಪ್ರದರ್ಶನ ನೀಡಿದರು. ಇದಕ್ಕಾಗಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಏಕಾಏಕಿ ಬಿಸಿಸಿಐ ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಿಕೊಂಡಿದ್ದು, ಇದೀಗ ಅವರು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ದೇವದತ್ ಪಡಿಕ್ಕಲ್ ಅವರ ಹೆಸರನ್ನು ಈಗಾಗಲೇ ಘೋಷಿಸಲಾಗಿತ್ತು. ಆದರೆ ಅವರು ತಲುಪಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಪಂದ್ಯಕ್ಕೆ ಒಂದು ದಿನ ಮೊದಲು, ಅವರು ತಮ್ಮ ತಂಡವನ್ನು ಸೇರಿಕೊಂಡು ಅಭ್ಯಾಸ ಕೂಡ ಮಾಡುತ್ತಿದ್ದಾರೆ.
ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡದ ಪರ ಆಡುತ್ತಿರುವ ದೇವದತ್ ಪಡಿಕ್ಕಲ್ ಅವರು ತಮಿಳುನಾಡು ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 151 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 36 ರನ್ ಗಳಿಸಿದರು. ಈ ಹಿಂದೆ ಇಂಗ್ಲೆಂಡ್ ಲಯನ್ಸ್ ಹಾಗೂ ಭಾರತ ಎ ತಂಡದ ನಡುವೆ ಪಂದ್ಯ ನಡೆದಾಗ ಮೊದಲ ಇನಿಂಗ್ಸ್‌ನಲ್ಲಿ 65 ರನ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 21 ರನ್ ಗಳಿಸಿದ್ದರು. ಇದಕ್ಕೂ ಮುನ್ನ ಇದೇ ಇಂಗ್ಲೆಂಡ್ ಲಯನ್ಸ್ ವಿರುದ್ಧ 105 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ರಣಜಿ ಟ್ರೋಫಿಯಲ್ಲಿ ಗೋವಾ ವಿರುದ್ಧ 103 ರನ್ ಗಳಿಸಿದ್ದರು. ಹೀಗೆ ನೋಡುವುದಾದರೆ ಕಳೆದ ನಾಲ್ಕ ಪಂದ್ಯಗಳಲ್ಲಿ ಮೂರರಲ್ಲಿ ಶತಕ ಬಾರಿಸಿದ್ದು, ಒಂದು ಅರ್ಧ ಶತಕ ಅವರ ಹೆಸರಿಗೆ ಇದೆ. ಇವುಗಳನ್ನು ಎಲ್ಲಾ ಪ್ರಥಮ ದರ್ಜೆ ಪಂದ್ಯಗಳಲ್ಲಿ ಸೇರಿಸಲಾಗಿದೆ.

ಭಾರತ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ದೇವದತ್ ಪಡಿಕ್ಕಲ್‌ಗೆ ಮೂರನೇ ಪಂದ್ಯದಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡುವ ಅವಕಾಶ ಸಿಗುತ್ತದೆಯೇ ಅಥವಾ ಇಲ್ಲವೇ ಎಂದು ಹೇಳುವುದು ಕಷ್ಟ. ಈಗಾಗಲೇ ತಂಡವನ್ನು ಸೇರಿಕೊಂಡಿರುವ ಸರ್ಫರಾಜ್ ಖಾನ್ ಕೂಡ ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ. ಈ ಇಬ್ಬರಲ್ಲಿ ಒಬ್ಬರು ಪಾದಾರ್ಪಣೆ ಮಾಡುವುದು ಖಚಿತ, ಆದರೆ ಫೆಬ್ರವರಿ 15 ರಂದು ಬೆಳಿಗ್ಗೆ 9 ಗಂಟೆಗೆ ನಾಯಕ ರೋಹಿತ್ ಶರ್ಮಾ ಅವರು ತಮ್ಮ ಪ್ಲೇಯಿಂಗ್ ಇಲೆವೆನ್ ಅನ್ನು ಪ್ರಕಟಿಸಲಿದ್ದಾರೆ.