ಬೆಂಗಳೂರು, ಡಿ.23: ಟೀಂ ಇಂಡಿಯಾದ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಇಂದು ಹತ್ತರ ಸಂಭ್ರಮ. 23ನೇ ವಯಸ್ಸಿನ ಧೋನಿ ಡಿ.23, 2004ರಂದು ಬಾಂಗ್ಲಾದೇಶ ವಿರುದ್ಧ ಚಿಟ್ ಗಾಂಗ್ ನಲ್ಲಿ ಏಕದಿನ ಪಂದ್ಯವಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಅಂದು ಕಾಲಿರಿಸಿದ್ದರು.
ಐಸಿಸಿ ನಡೆಸುವ ಎಲ್ಲಾ ಮೂರು ಟ್ರೋಫಿ(ವಿಶ್ವಕಪ್, ವಿಶ್ವಟಿ20, ಚಾಂಪಿಯನ್ಸ್ ಟ್ರೋಫಿ) ಗೆದ್ದಿರುವ ಜಗತ್ತಿನ ಏಕೈಕ ಕ್ರಿಕೆಟ್ ಕಲಿ. ಟೆಸ್ಟ್ ಕ್ರಿಕೆಟ್ ನಲ್ಲಿ ಉತ್ತಮ ಅಂಕಿ ಅಂಶ ಹೊಂದಿರದ ಧೋನಿ ಏಕದಿನ ಕ್ರಿಕೆಟ್ ನ ಸರದಾರ.
ಏಳನೇ ನಂಬರ್ ಜರ್ಸಿ ತೊಟ್ಟು ಅಂಗಳಕ್ಕೆ ಇಳಿಯುವ 33 ವರ್ಷ ವಯಸ್ಸಿನ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ ಅವರ ದಶಮಾನೋತ್ಸವ ಸಂಭ್ರಮವನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ವಿಶೇಷವಾಗಿ ಆಚರಿಸಿದ್ದಾರೆ.
2007ರಲ್ಲಿ ಟೀಂ ಇಂಡಿಯಾದ ಚುಕ್ಕಾಣಿ ಹಿಡಿದ ಧೋನಿ ತಂಡವನ್ನು ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿಸಿದರು. 27 ಟೆಸ್ಟ್ ಪಂದ್ಯಗಳ ಗೆಲುವು ಪಡೆದ ತಂಡದ ನಾಯಕ, 59 ಪಂದ್ಯಗಳನ್ನು ಮುನ್ನಡೆಸಿದ ಪ್ರಥಮ ಕ್ಯಾಪ್ಟನ್, ಹೆಚ್ಚು ಪಂದ್ಯವಾಡಿದ ಭಾರತದ ವಿಕೆಟ್ ಕೀಪರ್ ಹೀಗೆ ಧೋನಿ ಪಂದ್ಯದಿಂದ ಪಂದ್ಯಕ್ಕೆ ದಾಖಲೆಗಳನ್ನು ಮುರಿಯುತ್ತಲೇ ಇದ್ದಾರೆ.
89 ಟೆಸ್ಟ್ ಪಂದ್ಯ, 250 ಏಕದಿನ ಪಂದ್ಯ, 50 ಟಿ 20 ಪಂದ್ಯಗಳನ್ನಾಡಿರುವ ಧೋನಿ 13,000 ರನ್, 500 ಕ್ಯಾಚ್ ಗಳಿಸಿರುವ ಶ್ರೇಷ್ಠ ವಿಕೆಟ್ ಕೀಪರ್ ಬ್ಯಾಟ್ಸ್ ಮನ್. ಟೀಂ ಇಂಡಿಯಾ ಅಲ್ಲದೆ ಐಪಿಎಲ್ ಹಾಗೂ ಚಾಂಪಿಯನ್ಸ್ ಲೀಗ್ ಟಿ 20 ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕಪ್ ಗೆಲ್ಲಿಸಿಕೊಟ್ಟಿದ್ದಾರೆ.
ಧೋನಿ 10 ಸಂಭ್ರಮ #10Yearsof DHONIsm ಮೂಲಕ ವೈವಿಧ್ಯಮಯ ಟ್ವೀಟ್ ಮಾಡಲಾಗಿದೆ. ಒಂದಷ್ಟು ಸಂಗ್ರಹಿತ ಟ್ವೀಟ್ಸ್ ಇಲ್ಲಿದೆ...