ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ಇನ್ನು ಎರಡುವಾರಗಳು ಬಾಕಿ ಇವೆ. 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಮಿಂಚಲು ಅನುಭವಿ ಹಾಗೂ ಯುವ ಆಟಗಾರರು ಸಜ್ಜಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿದಿರುವ ಆಟಗಾರರನ್ನು ಸಹ ಈ ಐಪಿಎಲ್‌ನಲ್ಲಿ ಆಡುವುದನ್ನು ನೋಡಬಹುದು. ಈ ಶ್ರೀಮಂತ ಲೀಗ್‌ನಲ್ಲಿ ಮಿಂಚಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಕೆಲವು ಸ್ಟಾರ್ ಆಟಗಾರರು ಈ ಬಾರಿಯ ಐಪಿಎಲ್‌ನಲ್ಲಿ ಕಣಕ್ಕೆ ಇಳಿಯುವುದು ಕೊನೆಯ ಬಾರಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಾಗಿದ್ದರೆ ಆ ಆಟಗಾರರು ಯಾರು ಎಂಬ ಬಗ್ಗೆ ವರದಿ ಇಲ್ಲಿದೆ.
ಮಾರ್ಚ್ 28 ರಂದು ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಈ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಲೀಗ್‌ನಲ್ಲಿ ಎಲ್ಲರ ಕಣ್ಣುಗಳು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಮೇಲೆ ಇರುತ್ತದೆ. ಈಗಾಗಲೇ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಚೆನ್ನೈ ದಾಖಲೆಯ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ಬೀಗಿತ್ತು. 44 ವರ್ಷದ ಧೋನಿ ಅವರು ಐಪಿಎಲ್‌ನಲ್ಲಿ 278 ಪಂದ್ಯಗಳಲ್ಲಿ 5,439 ರನ್ ಗಳಿಸಿದ್ದಾರೆ. ಇದರಲ್ಲಿ 24 ಅರ್ಧಶತಕಗಳು ಸೇರಿವೆ. ಈ ಬಾರಿಯ ಐಪಿಎಲ್ ಧೋನಿ ಅವರ ಕೊನೆಯ ಲೀಗ್ ಎಂದು ಹೇಳಲಾಗುತ್ತಿದೆ.
ಟೀಮ್ ಇಂಡಿಯಾದ ಅನುಭವಿ ಆಟಗಾರ ಅಜಿಂಕ್ಯ ರಹಾನೆ ಅವರು ಈ ಬಾರಿ ಕೆಕೆಆರ್ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಇವರು ರನ್ ಬರವನ್ನು ಅನುಭವಿಸಿದ್ದರು. ಇವರು ಸದ್ಯ 37 ವರ್ಷದವರಾಗಿದ್ದು, ಇವರಿಗೂ ಈ ಐಪಿಎಲ್ ಕೊನೆಯದ್ದಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ರಹಾನೆ ಐಪಿಎಲ್ ನಲ್ಲಿ ಆಡಿದ 198 ಪಂದ್ಯಗಳಲ್ಲಿ 33 ಅರ್ಧಶತಕಗಳು ಮತ್ತು 2 ಶತಕಗಳು ಸೇರಿದಂತೆ 5032 ರನ್ ಗಳಿಸಿದ್ದಾರೆ.
37 ವರ್ಷದ ವೇಗದ ಬೌಲರ್ ಇಶಾಂತ್ ಶರ್ಮಾ ಈಗಲೂ ಐಪಿಎಲ್ ಆಡುತ್ತಿದ್ದಾರೆ. ಇವರು ಕಳೆದ ಬಾರಿ ಗುಜರಾತ್ ಟೈಟಾನ್ಸ್ ಪರ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಕಳೆದ ಬಾರಿ ಇವರು 7 ಪಂದ್ಯಗಳಲ್ಲಿ ಕೇವಲ 4 ವಿಕೆಟ್‌ಗಳನ್ನು ಕಬಳಿಸಿದ್ದರು. ಹೀಗಾಗಿ ಇದು ಇವರ ಕೊನೆಯ ಆವೃತ್ತಿ ಆಗಬಹುದು ಎಂದು ಲೆಕ್ಕಾಚಾರ ಆರಂಭವಾಗಿದೆ.
ಈ ಮೂವರು ಆಟಗಾರರು ಈಗಾಗಲೇ ಭಾರತದ ಪರ ಆಡಿ ಮಿಂಚಿದವರೇ. ಆದರೆ ಈ ಆಟಗಾರರ ಆಟವನ್ನು ಸದ್ಯ ಅಭಿಮಾನಿಗಳು ಐಪಿಎಲ್‌ನಲ್ಲಿ ಮಾತ್ರ ನೋಡುತ್ತಿದ್ದಾರೆ. ಅಜಿಂಕ್ಯ ರಹಾನೆ ಅವರಿಗೆ ಈಗಲೂ ಭಾರತ ಟೆಸ್ಟ್ ತಂಡವನ್ನು ಸೇರುವ ಮಹದಾಸೆ ಇದೆ. ಇಶಾಂತ್ ಶರ್ಮಾ ಈಗಾಗಲೇ ಟೀಮ್ ಇಂಡಿಯಾದಿಂದ ದೂರ ಸರಿದಿದ್ದಾರೆ.