
ಮುಂಬೈ, ಮೇ 15: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರವೇ ಬಾಕಿ ಉಳಿದಿದ್ದು, ವಿಶ್ವಕಪ್‌ನಲ್ಲಿ ಭಾರತ ತಂಡದ ರಣತಂತ್ರ ರಚಿಸಲು ಕ್ಯಾಪ್ಟನ್ ವಿರಾಟ್ ಕೊಹ್ಲಿ, ಉಪ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ಹಾಗೂ ವಿಕೆಟ್‌ಕೀಪರ್ ಎಂ.ಎಸ್ ಧೋನಿ ಅವರ ಮೊರೆ ಹೋಗಿದ್ದಾರೆ.
ಇದೇ ವೇಳೆ ವಿಶ್ವಕಪ್ ಟೂರ್ನಿ ವೇಳೆ ತಂಡಕ್ಕೆ ಧೋನಿ ಅವರ ಅನುಭವ ಲಭ್ಯವಾಗುತ್ತಿರುವುದು ನಿಜಕ್ಕೂ ಬೆಲ್ಲೆ ಕಟ್ಟಲು ಸಾಧ್ಯವಾಗದೇ ಇರುವಂಥದ್ದು ಎಂದಿರುವ ಕೊಹ್ಲಿ, ಎಂಎಸ್‌ಡಿ ತಂಡದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಹೇಳಿದ್ದಾರೆ.
"ಕ್ರಿಕೆಟ್ ಕಂಡ ಅತ್ಯಂತ ಚತುರ ಆಟಗಾರ ಎಂ.ಎಸ್ ಧೋನಿ. ವಿಕೆಟ್ ಹಿಂಬದಿಯಲ್ಲಂತೂ ಅವರ ಇರುವಿಕೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದರಿಂದ ನನ್ನ ಕೆಲಸವನ್ನು ಮುಕ್ತವಾಗಿ ಮಾಡಲು ಸಾಧ್ಯವಾಗುತ್ತದೆ. ಎಂಎಸ್ ಅವರಲ್ಲಿನ ಅನುಭವ ಅತ್ಯಮೂಲ್ಯವಾದದ್ದು,'' ಎಂದು ಸಂದರ್ಶನವೊಂದರಲ್ಲಿ ಧೋನಿ ಕುರಿತಾಗಿ ಕೊಹ್ಲಿ ಗುಣಗಾನ ಮಾಡಿದ್ದಾರೆ.
"ನಾನು ಅವರ ನಾಯಕತ್ವದ ಅಡಿಯಲ್ಲಿ ಆಡಿದವನು. ಅವರನ್ನು ಬಹಳ ಹತ್ತಿರದಿಂದ ನೋಡಿದ ಈಗ ತಂಡದಲ್ಲಿರುವ ಕೆಲವೇ ಆಟಗಾರರಲ್ಲಿ ನಾನೂ ಒಬ್ಬ. ಅವರ ಬಗ್ಗೆ ಹೇಳುವುದು ಸಾಕಷ್ಟಿದೆ. ಅವರಿಗೆ ಎಲ್ಲದಕ್ಕಿಂತ ತಂಡ ಮೊದಲು. ಸದಾ ತಂಡಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಅವರ ಉಪಸ್ಥಿತಿ ತಂಡದ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ. ವಿಕೆಟ್ ಹಿಂಬದಿ ಅವರು ಮಾಡಿರುವ ಕೆಲವು ಸ್ಟಂಪಿಂಗ್‌ಗಳು ಪಂದ್ಯದ ದಿಕ್ಕನ್ನೇ ಬದಲಾಯಿಸಿ ಬಿಟ್ಟಿವೆ,'' ಎಂದು ಹೇಳಿದ್ದಾರೆ.
ಇನ್ನು ವಿಶ್ವಕಪ್‌ನಲ್ಲಿ ಧೋನಿ ಮತ್ತು ಉಪನಾಯಕ ರೋಹಿತ್ ಶರ್ಮಾ ಅವರ ನಾಯಕತ್ವದ ಗುಣಗಳು ಪ್ರಯೋಜನಕ್ಕೆ ಬರಲಿವೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, "ಐಪಿಎಲ್‌ನಲ್ಲಿ ಈ ಇಬ್ಬರೂ ಆಟಗಾರರು ತಮ್ಮ ತಂಡಗಳಿಗೆ ನಾಯಕನ ಜವಾಬ್ದಾರಿ ನಿಭಾಯಿಸಿರುವುದನ್ನು ಗಮನಿಸಿದಲ್ಲಿ, ಅವರು ತಂದಿಡುವ ಗುಣಮಟ್ಟ ಏನೆಂದು ಅರ್ಥವಾಗುತ್ತದೆ. ಅದರಲ್ಲೂ ಎಂ.ಎಸ್ ಒಬ್ಬ ದಂತಕತೆ. ವಿಶ್ವಕಪ್‌ನಲ್ಲಿ ಈ ಇಬ್ಬರೂ ಕೂಡ ತಂಡವನ್ನು ಮುನ್ನಡೆಸಲು ನನಗೆ ನೆರವಾಗುತ್ತಾರೆ ಎಂಬುದರಲ್ಲಿ ಸಂಶಯವೇ ಬೇಡ,'' ಎಂದಿದ್ದಾರೆ.
ರಣತಂತ್ರ ರಚಿಸಲು ತಂಡ
ವಿಶ್ವಕಪ್ ವೇಳೆ ಪ್ರತಿ ಪಂದ್ಯಕ್ಕೂ ರಣತಂತ್ರ ರಚಿಸಲು ಪ್ರತ್ಯೇಕ ತಂಡ ಹೊಂದುವಂತೆ ತಂಡದ ಮ್ಯಾನೇಜ್ಮೆಂಟ್ ಸೂಚಿಸಿದೆ. ಈ ಕುರಿತಾಗಿ ಮಾತನಾಡಿರುವ ಕೊಹ್ಲಿ, "ವಿಶ್ವಕಪ್ ವೇಳೆ ತಂಡದ ರಣತಂತ್ರ ರಚಿಸಲು ಎಂಸ್ ಮತ್ತು ರೋಹಿತ್ ಅವರನ್ನೊಳಗೊಂಡ ಪ್ರತ್ಯೇಕ ತಂಡ ರಚಿಸುವಂತೆ ಸೂಚಿಸಲಾಗಿದೆ,'' ಎಂದು ಹೇಳಿದ್ದಾರೆ.