ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನವೆಂಬರ್ 14 ರಿಂದ ಆರಂಭವಾಗಲಿದೆ. ಈ ಸರಣಿಗೆ ಈಗಾಗಲೇ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಈ ಪ್ರಕಟಿತ ತಂಡದಲ್ಲಿ ಸ್ಥಾನ ಪಡೆದಿರುವ ಹಲವು ಆಟಗಾರರು ಭಾರತ "ಎ" ತಂಡದ ಪರ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ಹಲವರು ನಿರಾಸೆಯ ಕಡಲಿನ ಪ್ರಯಾಣಿಕರಾಗಿದ್ದಾರೆ. ಅನಧಿಕೃತ ಟೆಸ್ಟ್‌ನಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಆ ಒಬ್ಬ ಪ್ಲೇಯರ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ತಮಗೂ ಸ್ಥಾನವನ್ನು ನೀಡುವಂತೆ ಒತ್ತಾಯಿಸುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ದೃಷ್ಟಿಯಿಂದ ಬಹಳ ಮಹತ್ವದಾಗಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಎರಡೂ ಪಂದ್ಯಗಳನ್ನು ಗೆದ್ದು ಡಬ್ಲ್ಯೂಟಿಸಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಕಾಣುತ್ತಿದೆ. ಈ ವೇಳೆ ತಂಡದಲ್ಲಿ ಉತ್ತಮ ಸಂಯೋಜನೆ ಬಹಳ ಮುಖ್ಯ. ಭಾರತ ತಂಡದಲ್ಲಿ ಎಲ್ಲವೂ ಆಯಾ ಸ್ಥಾನದಲ್ಲಿ ಭಧ್ರವಾಗಿದೆ. ಆದರೆ ಆ ಒಂದು ಸ್ಥಾನ ಈಗಲೂ ಕುಂಟಾಡುತ್ತಿದೆ.

ಭಾರತ ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಮೂರನೇ ಕ್ರಮಾಂಕಕ್ಕೆ ಇನ್ನು ಸೂಕ್ತ ಅಧಿಪತಿ ಸಿಗದೇ ಇರುವುದು ನಿಶ್ಚಿತವಾಗಿ ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿದೆ. ಈ ವೇಳೆ ಈ ಒಬ್ಬ ಪ್ಲೇಯರ್ ಒಂದು ಅವಕಾಶ ಕೊಟ್ಟು ನೋಡಿ ಎಂಬ ರೀತಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಇವರು ಬೆಂಗಳೂರಿನಲ್ಲಿ ನಡೆದ ಎರಡನೇ ಅನಧಿಕೃತ ಟೆಸ್ಟ್‌ನ ಎರಡೂ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಈಗ ಟೆಸ್ಟ್ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡುವಂತೆ ಮ್ಯಾನೇಜ್ಮೆಂಟ್‌ಗೆ ಒತ್ತಾಯಿಸುತ್ತಿರುವ ಪ್ಲೇಯರ್ ಧ್ರುವ್ ಜುರೇಲ್.
ಧ್ರುವ್ ಜುರೇಲ್ ಟೀಮ್ ಇಂಡಿಯಾದಲ್ಲಿ ಸದ್ಯ ಎರಡನೇ ವಿಕೆಟ್ ಕೀಪರ್ ರೂಪದಲ್ಲಿ ಸ್ಥಾನ ಪಡೆದಿದ್ದಾರೆ. ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಇವರು ತಂಡಕ್ಕೆ ಎಂಟ್ರಿ ಪಡೆಯುತ್ತಾರೆ. ಒಂದು ವೇಳೆ ರಿಷಭ್ ಪಂತ್ ಫಿಟ್ ಆಗಿದ್ದರೆ, ಇವರು ಬೆಂಚ್ ಕಾಯಬೇಕಾಗುತ್ತದೆ. ಆದರೆ ಈಗ ಧ್ರುವ್ ಜುರೇಲ್ ಅವರು ಭಾರತ "ಎ" ಪರ ನೀಡುತ್ತಿರುವ ಪ್ರದರ್ಶನ, ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡುವಂತೆ ಒತ್ತಾಯಿಸುತ್ತಿದೆ.

ಸಾಯಿ ಸುದರ್ಶನ್ ಸದ್ಯ ಭಾರತ "ಎ" ಪರ ಮೈದಾನಕ್ಕೆ ಇಳಿದಿದ್ದಾರೆ. ಈ ವೇಳೆ ಸಾಯಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ ಇವರ ಬ್ಯಾಟ್‌ನಿಂದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದೊಡ್ಡ ಇನಿಂಗ್ಸ್ ಈ ವರೆಗೆ ಮೂಡಿ ಬಂದಿಲ್ಲ. ಹೀಗಾಗಿ ಇವರ ಸ್ಥಾನದಲ್ಲಿ ಧ್ರುವ್ ಜುರೇಲ್ ಅವರನ್ನು ಆಡಿಸಿದರೆ ಒಳ್ಳೆಯದು ಎಂಬ ಲೆಕ್ಕಾಚಾರ ಅಭಿಮಾನಿಗಳಲ್ಲಿ ಆರಂಭವಾಗಿದೆ. ಆದರೆ ಧ್ರುವ್ ಜುರೇಲ್ ಇದೇ ಪ್ರದರ್ಶನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಂದುವರೆಸುತ್ತಾರಾ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.