ಇನ್ನೇನು ಕೆಲವೇ ದಿನಗಳಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಗೆ ಸಚಿನ್ ತೆಂಡೂಲ್ಕರ್ ಹಾಗೂ ಜೇಮ್ಸ್ ಆಂಡರ್ಸನ್ ಟ್ರೋಫಿ ಎಂದು ಹೆಸರು ಇಡಲಾಗಿದೆ. ಈ ಟ್ರೋಫಿಯಲ್ಲಿ ಭಾಗವಹಿಸಲು ಭಾರತ ತಂಡ ಈಗಾಗಲೇ ಇಂಗ್ಲೆಂಡ್‌ಗೆ ಪ್ರಯಾಣವನ್ನು ಬೆಳೆಸಿದೆ. ಈಗ ಭಾರತ "ಎ" ತಂಡ ಇಂಗ್ಲೆಂಡ್ ಲಯನ್ಸ್ ವಿರುದ್ಧ ಅನಧಿಕೃತ ಟೆಸ್ಟ್ ಪಂದ್ಯವನ್ನು ಆಡಲಿದೆ. ಈ ವೇಳೆ ಒಬ್ಬ ಆಟಗಾರ ಸ್ಥಿರ ಪ್ರದರ್ಶನ ನೀಡಿದ್ದು ಇನ್ನೊಬ್ಬ ಆಟಗಾರನಿಗೆ ಟೆನ್ಷನ್ ಆರಂಭವಾಗಿದೆ.
ಭಾರತ "ಎ" ಹಾಗೂ ಇಂಗ್ಲೆಂಡ್ ಲಯನ್ಸ್ ನಡುವಿನ ಪಂದ್ಯ ಇಂಗ್ಲೆಂಡ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದ ಫಲಿತಾಂಶ ಟೀಮ್ ಇಂಡಿಯಾದ ಉಪನಾಯಕ ರಿಷಭ್ ಪಂತ್ ಅವರ ಚಿಂತೆಯನ್ನು ಹೆಚ್ಚಿಸಿದೆ. ಟೀಮ್ ಇಂಡಿಯಾ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರಿಗೆ ತಂಡ ವೈಸ್ ಕ್ಯಾಪ್ಟನ್ ಪಟ್ಟವನ್ನು ಕಟ್ಟಲಾಗಿದೆ. ಆದರೆ ಈಗ ಇವರ ಸ್ಥಾನದ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿದೆ.

ಇತ್ತೀಚಿಗೆ ನಡೆದ ಐಪಿಎಲ್‌ನಲ್ಲಿ ರಿಷಭ್ ಪಂತ್ ಅವರ ಬ್ಯಾಟ್ ಮೌನಕ್ಕೆ ಶರಣಾಗಿತ್ತು. ಆದರೆ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ರಿಷಭ್ ಆರ್‌ಸಿಬಿ ವಿರುದ್ಧ ಶತಕ ಬಾರಿಸಿ ಅಬ್ಬರಿಸಿದ್ದರು. ಇವರ ಮೇಲೆ ನಿರೀಕ್ಷೆಗಳ ಭಾರ ಇದೆ. ಇನ್ನು ಭಾರತ ತಂಡಕ್ಕೆ ಆಯ್ಕೆ ಆದ ಇನ್ನೊಬ್ಬ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೇಲ್ ಸಹ ಈ ಬಾರಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪ್ಲೇ ಆಫ್‌ಗೆ ಪ್ರವೇಶ ಪಡೆಯುವಲ್ಲಿ ವಿಫಲವಾಗಿರಬಹುದು ಆದ್ರೆ, ಧ್ರುವ್ ಜುರೇಲ್ ತಮ್ಮ ಸ್ಥಿರ ಪ್ರದರ್ಶನದಿಂದ ಗಮನ ಸೆಳೆದಿದ್ದರು.
ಧ್ರುವ್ ಜುರೇಲ್ ಇದೇ ಸ್ಥಿರ ಪ್ರದರ್ಶನವನ್ನು ಭಾರತ "ಎ" ತಂಡದ ಪರ ಮುಂದುವರೆಸಿದ್ದಾರೆ. ಧ್ರುವ್ ಜುರೇಲ್ ತಮ್ಮ ಕಮಾಲ್ ಬ್ಯಾಟಿಂಗ್ ಮೂಲಕ ಮೂರು ಇನಿಂಗ್ಸ್‌ಗಳಲ್ಲಿ ತಂಡಕ್ಕೆ ನೆರವಾಗಿದ್ದಾರೆ. ಅಲ್ಲದೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದ್ದು ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದ್ದಾರೆ. ಇವರು ಇಂಗ್ಲೆಂಡ್ ನೆಲದಲ್ಲಿ ಮೂರು ಇನಿಂಗ್ಸ್‌ಗಳನ್ನು ಆಡಿದ್ದು, ಮೂರರಲ್ಲೂ ಅರ್ಧಶತಕ ಬಾರಿಸಿದ್ದಾರೆ. ಇವರು 99.50ರ ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ. ಇನ್ನು ಒಟ್ಟಾರೆ ಎರಡು ಪಂದ್ಯಗಳ ಅನಧಿಕೃತ ಟೆಸ್ಟ್‌ನಲ್ಲಿ ಧ್ರುವ್ 199 ರನ್ ಸಿಡಿಸಿದ್ದಾರೆ.

ಈ ಅಂಕಿ ಅಂಶಗಳನ್ನು ನೋಡ್ತಾ ಇದ್ದರೆ ನಿಜಕ್ಕೂ ರಿಷಭ್ ಪಂತ್ ಅವರು ತಂಡದಲ್ಲಿ ಸ್ಥಾನ ಪಡೆಯುವುದು ಸುಲಭವಲ್ಲ ಅನಿಸುತ್ತಿದೆ. ರಿಷಭ್ ಅವರ ಬದಲಿಗೆ ಧ್ರುವ್ ಜುರೇಲ್ ತಂಡದಲ್ಲಿ ಸ್ಥಾನ ಪಡೆಯುತ್ತಾರಾ ಎಂಬ ಚರ್ಚೆಗಳು ಆರಂಭವಾಗಿವೆ. ಇನ್ನು ರಿಷಭ್ ಪಂತ್ ಸಹ ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಅಬ್ಬರಿಸಿದರೆ, ತಂಡದಲ್ಲಿ ಸ್ಥಾನವನ್ನು ಉಳಿಸಿಕೊಳ್ಳುತ್ತಾರೆ. ಇಲ್ಲದೆ ಇದ್ದರೆ ಬೇರೆ ಆಟಗಾರರಿಗೆ ಸ್ಥಾನ ಫಿಕ್ಸ್.