ಭಾರತದಲ್ಲಿ ಸದ್ಯ ಮಹಿಳಾ ಪ್ರೀಮಿಯರ್ ಲೀಗ್ ಆರಂಭವಾಗಿದೆ. ಈ ಲೀಗ್‌ನಲ್ಲಿ ಸ್ಟಾರ್ ಆಟಗಾರ್ತಿಯರು ತಮ್ಮ ಸ್ಥಿರ ಪ್ರದರ್ಶನದ ಮೂಲಕ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ. ಈ ಲೀಗ್‌ನಲ್ಲಿ ಯುವ ಆಟಗಾರರು ಸಹ ಕಮಾಲ್ ಪ್ರದರ್ಶನ ನೀಡುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಲೀಗ್‌ಗೆ ಪದಾರ್ಪಣೆ ಮಾಡಿ ಸದ್ದು ಮಾಡಿರುವ ಆಟಗಾರ್ತಿ ದಿಯಾ ಯಾದವ್.
ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಲೀಗ್ ಹಂತದ ಪಂದ್ಯ ವಡೋದರಾದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸಂಘಟಿತ ಆಟದ ಪ್ರದರ್ಶನ ನೀಡಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಚೊಚ್ಚಲ ಬಾರಿಗೆ ಆಡುವ ಅವಕಾಶವನ್ನು ಪಡೆದ ಆಟಗಾರ್ತಿ ದಿಯಾ ಯಾದವ್. ಇವರು ಅಂಗಳಕ್ಕೆ ಇಳಿಯುತ್ತಲೇ ಇತಿಹಾಸ ಬರೆದಿದ್ದಾರೆ.

ಮಹಿಳಾ ಪ್ರೀಮಿಯರ್ ಲೀಗ್‌ನ 18ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮಿನು ಮಣಿ ಬದಲಿಗೆ ದಿಯಾ ಯಾದವ್ ಅವರಿಗೆ ಆಡುವ ಅವಕಾಶವನ್ನು ಮಾಡಿಕೊಟ್ಟಿತು. ಈ ಪಂದ್ಯದಲ್ಲಿ ದಿಯಾ ಅಂಗಳಕ್ಕೆ ಇಳಿಯುತ್ತಲೇ ಮಹಿಳಾ ಪ್ರೀಮಿಯರ್ ಲೀಗ್ ಆಡಿದ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಈ ಮೊದಲು ಈ ದಾಖಲೆ ಜಿ ಕಮಿಲಿನಿ ಹೆಸರಿನಲ್ಲಿತ್ತು. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ದಿಯಾ ಯಾದವ್ 16 ವರ್ಷ 103 ದಿನಗಳಲ್ಲಿ ಪದಾರ್ಪಣೆ ಮಾಡಿದರು.
ದಿಯಾ ಯಾದವ್ (ದೆಹಲಿ ಕ್ಯಾಪಿಟಲ್ಸ್), 16 ವರ್ಷ 103 ದಿನಗಳು
ಜಿ. ಕಮಲಿನಿ (ಮುಂಬೈ ಇಂಡಿಯನ್ಸ್), 16 ವರ್ಷ 213 ದಿನಗಳು
ಶಬ್ನಮ್ ಶಕೀಲ್ (ಗುಜರಾತ್ ಜೈಂಟ್ಸ್), 16 ವರ್ಷ 263 ದಿನಗಳು
ಪಾರ್ಶ್ವಿ ಚೋಪ್ರಾ (ಮುಂಬೈ ಇಂಡಿಯನ್ಸ್), 16 ವರ್ಷ 312 ದಿನಗಳು
ಆಲಿಸ್ ಕ್ಯಾಪ್ಸೆ (ದೆಹಲಿ ಕ್ಯಾಪಿಟಲ್ಸ್), 18 ವರ್ಷ 205 ದಿನಗಳು
2017ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್ ಪಂದ್ಯವನ್ನು ನೋಡಿದ ಬಳಿಕ ದಿಯಾ ಸಹ ಕ್ರಿಕೆಟ್ ಆಟಗಾರ್ತಿ ಆಗಬೇಕು ಎಂಬ ಛಲದೊಂದಿಗೆ ಅಂಗಳಕ್ಕೆ ಇಳಿದವರು. ದಿಯಾ ಯಾದವ್ ದೇಶೀಯ ಟೂರ್ನಿಗಳಲ್ಲಿ ಹರಿಯಾಣ ಪರ ಆಡುವ ಆಟಗಾರ್ತಿ. ಇವರು ತಮ್ಮ ಬಿರುಸಿನ ಆಟದಿಂದಲೇ ಹೆಸರುವಾಸಿ. ಇವರು ದೇಶೀಯ ಟಿ20 ಪಂದ್ಯಗಳಲ್ಲಿ ಆಡಿದ 8 ಇನಿಂಗ್ಸ್‌ಗಳಲ್ಲಿ 130ರ ಸ್ಟ್ರೈಕ್ ರೇಟ್‌ನಲ್ಲಿ 300 ರನ್ ಕಲೆ ಹಾಕಿದರು. ಇವರ ಸ್ಥಿರ ಪ್ರದರ್ಶನ ಇವರತ್ತ ಫ್ರಾಂಚೈಸಿಗಳು ನೋಡುವಂತೆ ಮಾಡಿತು. ಪರಿಣಾಮ ಈ ಆಟಗಾರ್ತಿಯನ್ನು ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 10 ಲಕ್ಷ ರೂ. ನೀಡಿ ತಂಡಕ್ಕೆ ಖರೀದಿಸಿತ್ತು. ಇವರನ್ನು "ಚೋಟಿ ಶಫಾಲಿ" ಎಂಬ ಅಡ್ಡ ಹೆಸರಿನಿಂದ ಕರೆಯಲಾಗುತ್ತದೆ.
ದಿಯಾ ಯಾದವ್ ಈಗಾಗಲೇ ಆರ್‌ಸಿಬಿ, ಯುಪಿ ವಾರಿಯರ್ಸ್ ಟ್ರಯಲ್ಸ್ ಕ್ಯಾಂಪ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಇವರನ್ನು ಡೆಲ್ಲಿ ಕ್ಯಾಪಿಟಲ್ಸ್ ಹರಾಜಿನಲ್ಲಿ ಖರೀದಿಸುವಲ್ಲಿ ಸಫಲವಾಗಿದೆ.