ಚಾಂಪಿಯನ್ಸ್ ಟ್ರೋಫಿ 2025ರ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಸೋಲು ಕಂಡಿತು. ಇದಾದ ನಂತರ ಆಸ್ಟ್ರೇಲಿಯಾ ಏಕದಿನ ತಂಡದ ನಾಯಕ ಸ್ಟೀವ್ ಸ್ಮಿತ್ ಅಚ್ಚರಿ ನಿರ್ಧಾರವನ್ನು ಘೋಷಣೆ ಮಾಡಿದರು. ಸ್ಮಿತ್ ಅವರು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಚಾಂಪಿಯನ್ಸ್ ಟ್ರೋಫಿಯಲ್ಲಿ ನಿಯಮಿತ ನಾಯಕ ಪ್ಯಾಟ್ ಕಮ್ಮಿನ್ಸ್ ಬದಲಿಗೆ ಸ್ಮಿತ್ ತಂಡವನ್ನು ಮುನ್ನಡೆಸಿದ್ದರು. ಆದರೆ ಸ್ಮಿತ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ ಸೆಮಿಫೈನಲ್‌ಗೆ ಮಾತ್ರ ಸೀಮಿತವಾಯಿತು.
ಮಂಗಳವಾರ (ಮಾರ್ಚ್ 5) ದುಬೈನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ 264 ರನ್ ಗಳಿಸಿತು. ಆಸೀಸ್ ಪರ ನಾಯಕ ಸ್ಟೀವ್ ಸ್ಮಿತ್ 73 ರನ್ ಗಳಿಸಿದ ಗರಿಷ್ಠ ಸ್ಕೋರರ್ ಆದರು. ಭಾರತ 48.1 ಓವರ್‌ಗಳಲ್ಲಿ 267 ರನ್‌ಗಳನ್ನು ಕಲೆ ಹಾಕುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ 84 ರನ್ ಗಳಿಸಿ ಟಾಪ್ ಸ್ಕೋರರ್ ಎನಿಸಿಕೊಂಡರು.

ಪಂದ್ಯದ ನಂತರ ಉಭಯ ತಂಡಗಳ ಆಟಗಾರರು ಕೈಕುಲುಕುತ್ತಿದ್ದಾಗ ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಮುಖಾಮುಖಿಯಾದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇಬ್ಬರೂ ಕೆಲವು ಕ್ಷಣಗಳ ಕಾಲ ಪರಸ್ಪರ ಮಾತನಾಡಿದರು. ನಂತರ ಒಬ್ಬರನ್ನೊಬ್ಬರು ಅಪ್ಪಿಕೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು.
ವೈರಲ್ ಆಗಿರುವ ವಿಡಿಯೋದಲ್ಲಿ ಸ್ಮಿತ್ ಅವರನ್ನು ವಿರಾಟ್ ಕೊಹ್ಲಿ "ಕೊನೆಯ ಪಂದ್ಯ?" ಎಂದು ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಆಸ್ಟ್ರೇಲಿಯಾದ ಸ್ಮಿತ್ 'ಹೌದು' ಎಂದು ಉತ್ತರಿಸಿದ್ದಾರೆ. ಈ ವಿಡಿಯೋ ನೋಡಿದವರಿಗೆ ಸ್ಮಿತ್ ನಿವೃತ್ತಿ ನಿರ್ಧಾರ ವಿರಾಟ್ ಕೊಹ್ಲಿಗೆ ಮೊದಲೇ ತಿಳಿದಿತ್ತೇ? ಎಂಬ ಪ್ರಶ್ನೆ ಮೂಡಿದೆ.
ಸ್ಟೀವ್ ಸ್ಮಿತ್ ಟೆಸ್ಟ್ ಮತ್ತು ಟಿ20 ಕ್ರಿಕೆಟ್ ಮಾದರಿಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಲಿದ್ದು, 2027ರ ವಿಶ್ವಕಪ್‌ನ ಆಸ್ಟ್ರೇಲಿಯಾ ತಂಡದ ಭಾಗವಾಗಿರುವುದಿಲ್ಲ. 2015 ಮತ್ತು 2023 ರಲ್ಲಿ ಆಸ್ಟ್ರೇಲಿಯಾ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಸ್ಮಿತ್ ಪ್ರಮುಖ ಪಾತ್ರ ವಹಿಸಿದ್ದರು.4
ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ಸ್ಮಿತ್ 2010 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಸ್ಮಿತ್ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಲೆಗ್ ಸ್ಪಿನ್ನರ್ ಆಗಿ ಪ್ರಾರಂಭಿಸಿದರು. ಆದರೆ ಅಂತಿಮವಾಗಿ ವಿಶ್ವದ ಅಗ್ರ ಬ್ಯಾಟರ್‌ಗಳಲ್ಲಿ ಒಬ್ಬರಾದರು. ಅವರು ಆಸ್ಟ್ರೇಲಿಯಾ ಪರ 170 ಏಕದಿನ ಪಂದ್ಯಗಳನ್ನು ಆಡಿದ್ದು, 43.28 ರ ಸರಾಸರಿಯಲ್ಲಿ 5800 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 12 ಶತಕಗಳು ಮತ್ತು 35 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅವರು 34.67 ಬೌಲಿಂಗ್ ಸರಾಸರಿಯೊಂದಿಗೆ 28 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.